ಸುಶೀಲಾ ಅವರ ಐದು ಸದಸ್ಯರ ಕುಟುಂಬವು ತಮ್ಮ ಪುಟ್ಟ ಮನೆಯೆದುರಿನ ಜಗಲಿಯ ಮೇಲೆ ಕುಳಿತು, ಅವರು ತನ್ನ 'ಸಂಬಳ'ದೊಂದಿಗೆ ಮನೆಗೆ ಬರುವುದನ್ನು ಕಾಯುತ್ತಿತ್ತು. ಅದು ಅವರು ಎರಡು ಮನೆಗಳಲ್ಲಿ ಮನೆಗೆಲಸಗಾರರಾಗಿ ದುಡಿದು ಗಳಿಸುವ 5,000 ರೂಪಾಯಿಗಳು. ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿದ್ಯಾಪೀಠ ಬ್ಲಾಕ್ ಬಳಿಯ ಅಮರಾ ಎನ್ನುವ ಕುಗ್ರಾಮದಲ್ಲಿರುವ ತನ್ನ ಮನೆಗೆ 45 ವರ್ಷದ ಸುಶೀಲಾ ಕಾಲಿಡುವಾಗ ಮಧ್ಯಾಹ್ನ 2 ಗಂಟೆಯಾಗಿತ್ತು.
"ಎರಡು ಮನೆಗಳಲ್ಲಿ ಪಾತ್ರೆ ತೊಳೆಯುವುದು ಮತ್ತು ನೆಲ ಒರೆಸುವುದರ ಮೂಲಕ ಅಮ್ಮ 5,000 ರೂಪಾಯಿಗಳನ್ನು ಗಳಿಸುತ್ತಾರೆ" ಎಂದು ಅವರ 24 ವರ್ಷದ ಮಗ ವಿನೋದ್ ಕುಮಾರ್ ಭಾರತಿ ಹೇಳುತ್ತಾರೆ. "ಅವಳಿಗೆ ಪ್ರತಿ ತಿಂಗಳ ಮೊದಲನೇ ತಾರೀಕಿನಂದು ಅಂದರೆ ಇಂದು ಸಂಬಳ ಸಿಗುತ್ತದೆ. ಅಪ್ಪ ವೈರಿಂಗ್ ಮಾಡುತ್ತಾರೆ, ಕೆಲಸ ಸಿಕ್ಕ ಅದೃಷ್ಟದ ದಿನಗಳಲ್ಲಿ ಎಲೆಕ್ಟ್ರಿಷಿಯನ್ ಒಬ್ಬರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ನಮಗೆ ಸ್ಥಿರವಾದ ಆದಾಯದ ಮೂಲವಿಲ್ಲ. ನಾನು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ. ನಾವು ಒಟ್ಟಾಗಿ ತಿಂಗಳಿಗೆ 10-12,000 ರೂಪಾಯಿಗಳನ್ನು ಗಳಿಸುತ್ತೇವೆ. ಹಾಗಾದರೆ ಬಜೆಟ್ ಮೂಲಕ ಘೋಷಿಸಲಾಗಿರುವ 12 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಮಿತಿಗೂ ನಮಗೂ ಏನು ಸಂಬಂಧ?
"ನಾವು ಕೆಲವು ವರ್ಷಗಳ ಹಿಂದೆ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005) ಅಡಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಅವರು ಕೆಲಸವಿಲ್ಲ ಎಂದು ಹೇಳುತ್ತಾರೆ." ಸುಶೀಲಾ ಅವರು 2021ರವರೆಗಿನ ನಮೂದುಗಳನ್ನು ಹೊಂದಿರುವ ತಮ್ಮ ಕಾರ್ಡನ್ನು ನಮಗೆ ತೋರಿಸಿದರು, ಅದು ಕೆಲಸದ ವಿವರಗಳು ಡಿಜಿಟಲೈಸ್ ಆಗುವ ಮೊದಲಿನ ಕಾರ್ಡು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ.





