“ಪಾನ್ [ವೀಳ್ಯದೆಲೆ] ಬೆಳೆ ಉಳಿದಿದ್ದರೆ ನನಗೆ [2023ರಲ್ಲಿ] ಕನಿಷ್ಠ ಎರಡು ಲಕ್ಷ ರೂಪಾಯಿಗಳ ಆದಾಯ ದೊರೆಯುತ್ತಿತ್ತು” ಎಂದು 29 ವರ್ಷದ ಧೂರಿ ಗ್ರಾಮದ ರೈತ ಮಹಿಳೆ ಕರುಣಾ ದೇವಿ ವಿಷಾದದ ದನಿಯಲ್ಲಿ ಹೇಳುತ್ತಾರೆ. 2023ರಲ್ಲಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಬೀಸಿದ ಬಿಸಿ ಗಾಳಿ ಅವರ ವೀಳ್ಯದೆಳೆ ಸಾಗುವಳಿಯನ್ನು ನಾಶಗೊಳಿಸಿತು. ಸೊಂಪಾದ ತೋಟವಾಗಿ ನಳ ನಳಿಸುತ್ತಿದ್ದ ಅವರ ಬರೇಜಾ ಅಂದು ತನ್ನ ಹೊಳೆವ ಎಲೆಗಳನ್ನು ಕಳೆದುಕೊಂಡು ಕೇವಲ ಬಳ್ಳಿಗಳ ಅಸ್ಥಿಪಂಜರವಾಗಿ ಮಾರ್ಪಟ್ಟಿತು. ಇದರಿಂದಾಗಿ ಅವರು ಬೇರೆಯವರ ಬರೇಜಾಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಒಳಗಾದರು.
ಆ ಸಮಯದಲ್ಲಿ ಹಲವಾರು ದಿನಗಳವರೆಗೆ ತೀವ್ರ ಬಿಸಿಲನ್ನು ಎದುರಿಸಿದ ಒಂದು ಡಜನ್ ಜಿಲ್ಲೆಗಳಲ್ಲಿ ನವಾಡಾ ಕೂಡಾ ಒಂದು. ಆ ವರ್ಷದ ಬಿಸಿಲನ್ನು ವಿವರಿಸುತ್ತಾ, ಅವರು ಹೇಳುತ್ತಾರೆ, “ಲಗ್ತಾ ಥಾ ಕೀ ಅಸ್ಮಾನ್ ಸೇ ಆಗ್ ಬರಾಸ್ ರಹಾ ಹೈ ಔರ್ ಹಮ್ ಲೋಗ್ ಜಲ್ ಜಾಯೇಂಗೆ. ದೋಪಹರ್ ಕೋ ತೋ ಗಾಂವ್ ಏಕ್ ದಮ್ ಸಂಸಾನ್ ಹೋ ಜಾತಾ ಥಾ ಜೈಸೇ ಕಿ ಕರ್ಫು ಲಗ್ ಗಯಾ ಹೋ [ಆಕಾಶದಿಂದ ಬೆಂಕಿಯ ಉಂಡೆಗಳು ಸುರಿವಂತೆ ತೋರುತ್ತಿತ್ತು, ಮತ್ತು ನಾವು ಸುಟ್ಟು ಬೂದಿಯಾಗುತ್ತೇವೆಯೇನೋ ಎನ್ನುವಂತಿತ್ತು. ಮಧ್ಯಾಹ್ನದ ವೇಳೆಗೆ ಕರ್ಫ್ಯೂ ವಿಧಿಸಿದಂತೆ ಗ್ರಾಮವು ಸಂಪೂರ್ಣವಾಗಿ ನಿರ್ಜನವಾಗುತ್ತಿತ್ತು.]” ಜಿಲ್ಲೆಯ ವಾರಿಸಲಿಗಂಜ್ ಹವಾಮಾನ ಇಲಾಖೆಯು ಈ ಸಮಯದಲ್ಲಿ 45.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಜೂನ್ 18, 2023ರಂದು 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಘಟನೆಯ ನಂತರ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸುಡುವ ಬಿಸಿಲಿನ ನಡುವೆಯೂ “ನಾವು ಬರೇಜಾಕ್ಕೆ ಹೋಗುತ್ತಿದ್ದೆವು” ಎಂದು ಕರುಣಾ ದೇವಿ ಹೇಳುತ್ತಾರೆ. ಆರು ಕಟ್ಟಾ ಪ್ರದೇಶದಲ್ಲಿ (ಎಕರೆಯ ಹತ್ತನೇ ಒಂದು ಭಾಗ) ಹರಡಿರುವ ಮಗಹಿ ವೀಳ್ಯದೆಲೆ ಬರೇಜಾದಲ್ಲಿ ಎಲೆ ಬೆಳೆಯಲು ಕುಟುಂಬವು 1 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದರಿಂದ ಕುಟುಂಬವು ಸುಮ್ಮನೆ ಕೂರುವಂತಿರಲಿಲ್ಲ.





















