ನಾವು ಕುರುಚಲು ಕಾಡೊಂದರಲ್ಲಿ ʼದೆವ್ವದ ಬೆನ್ನೆಲುಬುʼ ಹುಡುಕುತ್ತ ನಡೆದಿದ್ದೆವು. ಅದನ್ನು ಪಿರಾಂಡೈ (ಮಂಗರಬಳ್ಳಿ) ಎಂದೂ ಕರೆಯಲಾಗುತ್ತದೆ. ಚೌಕಾಕಾರದ ಬಳ್ಳಿಯು ಬಹಳಷ್ಟು ಉತ್ತಮ ಗುಣಗಳನ್ನು ಹೊಂದಿದೆ. ರತಿ ಮತ್ತು ನಾನು ಈ ಬಳ್ಳಿಯ ಹುಡುಕಾಟದಲ್ಲಿದ್ದೆವು. ಸಾಮಾನ್ಯವಾಗಿ ಇದರ ಮೃದುವಾದ ಎಳೆಯ ಕಾಂಡಗಳನ್ನು ಚೊಕ್ಕಗೊಳಿಸಿ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆ ಬಳಸಿ ಸಂರಕ್ಷಿಸಲಾಗುತ್ತದೆ. ಸರಿಯಾದ ವಿಧಾನ ಬಳಸಿ ಈ ಉಪ್ಪಿನಕಾಯಿಯನ್ನು ತಯಾರಿಸಿಟ್ಟರೆ ಇದು ಒಂದು ವರ್ಷದವರೆಗೆ ಬಳಿಕೆ ಬರುತ್ತದೆ.
ಅದು ಜನವರಿ ತಿಂಗಳ ಚಳಿಗಾಲದ ಬಿಸಿಲು ಹೊಳೆಯುತ್ತಿದ್ದ ಮಟಮಟ ಮಧ್ಯಾಹ್ನ. ನಾವು ಒಂದು ಬತ್ತಿದ ಹಳ್ಳದ ಮೂಲಕ ನಡೆಯುತ್ತಿದ್ದೆವು. ಆ ಹಳ್ಳದ ಹೆಸರು ಎಲೈಯತಮ್ಮನ್ ಓಡೈ. ಈ ತಮಿಳು ಹೆಸರನ್ನು ಕನ್ನಡದಲ್ಲಿ ಹೇಳುವುದಾದರೆ ಗಡಿಗಳಿಲ್ಲದ ದೇವಿಯ ಹೊಳೆ ಎಂದು. ಹೆಸರು ಕೇಳಿದರೆ ರೋಮಾಂಚನವಾಗುವಂತಿದೆ. ಕಲ್ಲು ಮತ್ತು ಮರಳಿನಿಂದ ಕೂಡಿದ ಹಾದಿಯ ಪ್ರಯಾಣ ನಮ್ಮ ಪಾಲಿಗೆ ಇನಷ್ಟು ರೋಮಾಂಚಕವಾಗಿತ್ತು.
ನಾವು ನಡೆದು ಹೋಗುವಾಗ ರತಿ ಕತೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಕೆಲವು ಕಾಲ್ಪನಿಕವಾಗಿದ್ದರೆ, ಇನ್ನೂ ಕೆಲವು ತಮಾಷೆಯಾಗಿದ್ದವು. ತೊಂಬತ್ತರ ದಶಕದಲ್ಲಿ ಅವರು ಹೈಸ್ಕೂಲಿನಲ್ಲಿದ್ದಾಗ ಉಲ್ಬಣಗೊಂಡ ಆಹಾರ ಮತ್ತು ಜಾತಿ ಘರ್ಷಣೆಗಳ ರಾಜಕೀಯದ ಬಗ್ಗೆ ಅನೇಕ ನೈಜ ಮತ್ತು ತಲ್ಲಣಗೊಳಿಸುವ ಸಂಗತಿಗಳನ್ನು ಅವರು ತಿಳಿಸಿದರು. “ಆ ಸಮಯದಲ್ಲಿ ನಮ್ಮ ಕುಟುಂಬ ತೂತುಕುಡಿಗೆ ಪಲಾಯನ ಮಾಡಿತು…”
ಇದೆಲ್ಲ ನಡೆದು ಎರಡು ದಶಕಗಳ ನಂತರ ವೃತ್ತಿಪರ ಕತೆಗಾರರು, ಲೈಬ್ರರಿ ಸಲಹಾಗಾರರು ಮತ್ತು ಬೊಂಬೆಯಾಡಿಸುವವರಾಗಿ ರತಿ ತಮ್ಮ ಊರಿಗೆ ಮರಳಿದ್ದಾರೆ. ಮೆಲುದನಿಯಲ್ಲಿ ಮಾತನಾಡುವ ಅವರು ವೇಗವಾಗಿ ಓದಬಲ್ಲರು. “ಕೋವಿಡ್ ಪಿಡುಗಿನ ಸಮಯದ ಏಳು ತಿಂಗಳಲ್ಲಿ, ನಾನು 22,000 ದೊಡ್ಡ ಮತ್ತು ಸಣ್ಣ ಮಕ್ಕಳ ಪುಸ್ತಕಗಳನ್ನು ಓದಿದೆ. ಒಂದು ಹಂತದಲ್ಲಿ, ನನ್ನ ಸಹಾಯಕರು ಪ್ರತಿದಿನ ಹೀಗೆ ಓದುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಅವರು ನಾನು ಪುಸ್ತಕಗಳಲ್ಲಿ ಸಂಭಾಷಣೆಗಳನ್ನು ಮಾತನಾಡಬಹುದೆನ್ನುವುದು ಅವರ ಭಯವಾಗಿತ್ತು” ಎಂದು ಅವರು ನಕ್ಕರು.
ಅವರ ನಗು ಅವರ ಹೆಸರು ನೀಡಿರುವ ಭಾಗೀರತಿ ನದಿಯ ಕಲರವದಂತೆಯೇ ಇತ್ತು. ಅವರು ಎಲ್ಲೆಡೆ ರತಿ ಎನ್ನುವದ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಸುಮಾರು 3,000 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಾರೆ, ಅಲ್ಲಿ ಅವರ ಹೆಸರು ಗಂಗಾ ಎಂದು ಬದಲಾಗುತ್ತದೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತೆಂಕಲಂ ಎಂಬ ಅವರ ಊರು ಬೆಟ್ಟಗಳು ಮತ್ತು ಕುರುಚಲು ಕಾಡುಗಳಿಂದ ಆವೃತವಾಗಿದೆ. ಹಳ್ಳಿಯ ಪ್ರತಿಯೊಬ್ಬರೂ ಅವರನ್ನು ಬಲ್ಲರು ಮತ್ತತು ಅವರು ಊರಿನ ಜನರನ್ನು ಚೆನ್ನಾಗಿ ಬಲ್ಲರು.
“ನೀವು ಕಾಡಿಗೆ ಯಾಕೆ ಹೋಗುತ್ತಿದ್ದರೀರಿ?” ಎಂದು ಕಾರ್ಮಿಕ ಮಹಿಳೆಯೊಬ್ಬರು ಕೇಳಿದರು. “ನಾವು ಪಿರಾಂಡೈ ಹುಡುಕುತ್ತಿದ್ದೇವೆ” ಎಂದು ರತಿ ಉತ್ತರಿಸಿದರು. “ಇವರ್ಯಾರು? ನಿಮ್ಮ ಸ್ನೇಹಿತರೆ?” ಎಂದು ಮತ್ತೆ ಕೇಳಿದರು. “ಹೌದು, ಹೌದು” ಎಂದು ರತಿ ತಲೆಯಾಡಿಸಿದರು, ನಾನು ಅವರತ್ತ ಕೈ ಆಡಿಸಿದೆ.

















