"ಅಮ್ಮಾ, ಶಾಲೆ ಯಾವಾಗ ತೆರೆಯುತ್ತದೆ?" ಎಂದು ಮುನಿಯಾ ಕೇಳುತ್ತಾಳೆ. ಸೆಣಬಿನ ಸಸ್ಯಗಳನ್ನು ತೆಳುಗೊಳಿಸುವ ಕೊನೆಯ ಸುತ್ತಿನ ಪ್ರಯತ್ನವನ್ನು ಸಹಾರಾ ಮುಂದುವರಿಸಿದ್ದರು. ಇದು ಅವರ 0.10 ಎಕರೆ ಭೂಮಿಯಲ್ಲಿ ಬಿಡುವಿಲ್ಲದ ಕೆಲಸದ ದಿನಗಳ ಸಮಯ. ಮುನಿಯಾಳ ಪ್ರಶ್ನೆಗಳಿಗೆ ಅವರ ಬಳಿ ಸಮಯವಿಲ್ಲ.
"ಶಾಲೆಗಳು ಏಕೆ ತೆರೆಯುತ್ತಿಲ್ಲ...!" ಪುಟ್ಟ ಹುಡುಗಿ ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದಾಳೆ. ಈ ಬಾರಿ ಸಹಾರಾ ಚೂರು ಕೆಲಸ ನಿಲ್ಲಿಸಿ, ಅವಳ ಕಡೆಗೆ ತಿರುಗಿ ತನ್ನ ಧ್ವನಿಯಲ್ಲಿನ ಹತಾಶೆಯನ್ನು ನಿಯಂತ್ರಿಸಲು ತೀವ್ರವಾಗಿ ಪ್ರಯತ್ನಿಸುತ್ತಾ ಹೇಳುತ್ತಾರೆ: "ದೇಖಿಶ್ ನಾ ಕೀ ಗ್ರೂಮ್ (ನಿನಗೆ ಸುಡುವ ಬಿಸಿಲು ಕಾಣುತ್ತಿಲ್ಲವೆ? ಎಂಟು ತಿಂಗಳಿನಿಂದ ಮಳೆಯಾಗಿಲ್ಲ).”
“ಹಾಗಿದ್ದರೆ ಅವರು ಏಕೆ ಎಸಿ ಹಾಕಿಸುವುದಿಲ್ಲ?” ಮುನಿಯಾ ತನ್ನ ಪಟ್ಟು ಬಿಡುವುದಿಲ್ಲ.
"ಸರ್ಕಾರದ ಬಳಿ ಹಣವಿಲ್ಲ." ಸಹಾರಾರ ತಾಳ್ಮೆ ಕಡಿಮೆಯಾಗುತ್ತಿದೆ.
"ಬೊರೊಲೋಕ್ ಇಂಗ್ಲಿಷ್ ಶಾಲೆಗಳಲ್ಲಿ (ಶ್ರೀಮಂತರ ಇಂಗ್ಲಿಷ್ ಮಾಧ್ಯಮ ಶಾಲೆಗಳು) ಇಷ್ಟೊಂದು ಎಸಿಗಳು ಏಕಿವೆ?"
ಸಹಾರಾ ಸಂಜೆಯವರೆಗೆ ಕಠಿಣ ಪರಿಶ್ರಮ ಮತ್ತು ಮೌನದಲ್ಲಿ ಮುಳುಗುತ್ತಾರೆ. ಅಂದು ಅವರು ತನ್ನ ಕೆಲಸವನ್ನು ಅಪೂರ್ಣವಾಗಿ ಬಿಟ್ಟು ಇಂದು ಮುನಿಯಾ ಮನೆಗೆ ಧಾವಿಸಬೇಕಾಯಿತು. ಅಂದು ಮತದಾನದ ದಿನ. ಸಹಾರಾ ತನ್ನ ಎಂಟು ವರ್ಷದ ಮಗಳೊಂದಿಗೆ ಮತ ಚಲಾಯಿಸಲು ಪ್ರಾಥಮಿಕ ಶಾಲೆಯಲ್ಲಿನ ಬೂತ್ ಕಡೆಗೆ ಧಾವಿಸುತ್ತಾರೆ.
“ನಾವು ಏಕೆ ಮತ ಚಲಾಯಿಸಬೇಕು ಅಮ್ಮಿ?” ಮುನಿಯಾಳ ಪ್ರಶ್ನೆಗಳು ನಿಲ್ಲುತ್ತಲೇ ಇರಲಿಲ್ಲ. ಈ ಕ್ಷಣಕ್ಕೆ ವಿಷಯ ಬದಲಾಗಿರುವುದು ಅವಳ ಅಮ್ಮ ಸಹಾರರಿಗೆ ಸಮಾಧಾನ ತಂದಿತ್ತು. ಆದರೆ ಅವರಿಗೆ ಪ್ರಶ್ನೆಗಳಿಗೆ ಉತ್ತರಿಸುವಷ್ಟು ತ್ರಾಣವಿರಲಿಲ್ಲ.
“ನಿನ್ನೆ ಟಿವಿಯಲ್ಲಿ ದೊಡ್ಡ ನಾಯಕರೊಬ್ಬರು ನಮಗೆ ಮುಸ್ಲಿಂ ಮತ ಬೇಡ ಎನ್ನುತ್ತಿದ್ದರು. ನಾವು ಮುಸ್ಲಿಮರಲ್ಲವೆ ಅಮ್ಮಿ? ನಾವೇಕೆ ಮತ ಚಲಾಯಿಸುತ್ತಿದ್ದೇವೆ?”
ಸಾಲಿನಲ್ಲಿ ನಿಂತಿದ್ದ ಸಹರಾ ಒಮ್ಮೆ ನಿಂತು ಮಗುವಿನ ಮುಖವನ್ನು ನೋಡಿದರು. ಮುನಿಯಾಳಿಗೆ ಆ ತಣ್ಣಗಿನ ಖಾಲಿ ನೋಟದ ಅರ್ಥ ತಿಳಿದಿತ್ತು. ಅವಳು ಸುಮ್ಮನಾದಳು.


