"ಮೈನೇ ಕಭಿ ದೋ ಬೋರ್ಡ್ ಏಕ್ ಜೈಸಾ ನಹೀ ಬನಾಯಾ [ನಾನು ಯಾವತ್ತೂ ಒಂದು ಬೋರ್ಡನ್ನು ಇನ್ನೊಂದು ಬೋರ್ಡಿನಂತೆ ಬರೆದವನಲ್ಲ]" ಎಂದು ಅಹಮದಾಬಾದ್ ನಗರದ ಸೈನ್ ಬೋರ್ಡ್ ಪೇಂಟರ್ ಶೇಖ್ ಜಲಾಲುದ್ದೀನ್ ಕಮರುದ್ದೀನ್ ಹೇಳುತ್ತಾರೆ. ಕತ್ತರಿ ತಯಾರಕರಿಗೆ ಹೆಸರುವಾಸಿಯಾದ ಜನನಿಬಿಡ ಪ್ರದೇಶವಾದ ಗೀಕಾಂತದಲ್ಲಿನ ಎಲ್ಲಾ ಅಂಗಡಿಗೂ ಬೋರ್ಡ್ ತಯಾರಿಸಿ ಕೊಟ್ಟವರು ಅವರೊಬ್ಬರೇ. ಎಲ್ಲಾ ಅಂಗಡಿಗಳೂ ಕತ್ತರಿ ವ್ಯಾಪಾರವನ್ನೇ ಮಾಡುತ್ತವೆಯಾದರೂ, ತಾನು ತಯಾರಿಸಿಕೊಟ್ಟಿರುವ ಬೋರ್ಡುಗಳಲ್ಲಿ ಒಂದೊಂದೂ ತನ್ನದೇ ಆದ ವೈಶಿಷ್ಠ್ಯತೆಯನ್ನು ಹೊಂದಿವೆ ಎನ್ನುತ್ತಾರೆ.
ಈ ಹಿರಿಯ ಕಲಾಕಾರನ ಕೈಚಳಕವನ್ನು ನೀವು “ದೀವಾರ್, ದುಖಾನ್ ಔರ್ ಶಟರ್ [ಗೋಡೆ, ಅಂಗಡಿ ಮತ್ತು ಬಾಗಿಲು] ಮೇಲೆ ನೋಡಬಹುದು.” ಹಾಗೆಯೇ ಸಿನೆಮಾಗಳ ಹಿನ್ನೆಲೆಯಲ್ಲಿ ಸಹ ನೋಡಬಹುದು. ಓರ್ವ ಸೈನ್ ಬೋರ್ಡ್ ಕಲಾವಿದನಿಗೆ ಹಲವು ಭಾಷೆಯ ಅಕ್ಷರಗಳನ್ನು ಹೇಗೆ ಚಿತ್ರಿಸಬೇಕು ಮತ್ತು ಬರೆಯಬೇಕು ಎನ್ನುವ ಜ್ಞಾನವಿರಬೇಕಾಗುತ್ತದೆ. ಗುಜರಾತಿನ ಮಾನೆಕ್ ಚೌಕದಲ್ಲಿರುವ ಆಭರಣದ ಅಂಗಡಿಯ ಜಾಹೀರಾತು ಫಲಕವನ್ನು ಬರೆದು ಅರ್ಧ ಶತಮಾನ ಕಳೆದಿದೆ ಮತ್ತು ಅದು ಇಂದಿಗೂ ಅಲ್ಲಿ ರಾರಾಜಿಸುತ್ತಿದೆ. ಆ ಫಲಕದಲ್ಲಿ ಗುಜರಾತಿ, ಉರ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಬಳಸಲಾಗಿದೆ.
ಚಿತ್ರಕಲೆ ತನಗೆ ಸ್ವಾಭಾವಿಕವಾಗಿ ಸಿದ್ಧಿಸಿತು ಎಂದು ಜಲಾಲುದ್ದೀನ್ ಹೇಳುತ್ತಾರೆ. 71 ವರ್ಷ ಪ್ರಾಯದ ಅವರು ಅಹಮದಾಬಾದ್ ನಗರದ ಅತ್ಯಂತ ಹಿರಿಯ ಸೈನ್ ಬೋರ್ಡ್ ಪೇಂಟರುಗಳಲ್ಲಿ ಒಬ್ಬರು, ಅವರನ್ನು ಸ್ಥಳೀಯವಾಗಿ 'ಜೆಕೆ ಪೇಂಟರ್' ಎಂದು ಗುರುತಿಸಲಾಗುತ್ತದೆ. ಪ್ರಸ್ತುತ 50 ವರ್ಷಗಳ ಹಿಂದೆ ಕೆಲಸ ಆರಂಭಿಸಿದ ದಿನಗಳಲ್ಲಿ ಸಿಗುತ್ತಿದ್ದಷ್ಟು ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ.
ಈ ಹಿರಿಯ ಚಿತ್ರ ಕಲಾವಿದ 7ನೇ ತರಗತಿಯ ಓದಿದ್ದು, ಗುಜರಾತಿ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ಸೈನ್ ಬೋರ್ಡ್ ಬರೆಯುತ್ತಾರೆ. ಶಾಲೆಯನ್ನು ತೊರೆದ ನಂತರ ಅವರು ದಲ್ಘರ್ವಾಡ್ ಮಾರುಕಟ್ಟೆಯಲ್ಲಿರುವ ರಹೀಮ್ ಅವರ ಅಂಗಡಿಯಲ್ಲಿ ಚಿತ್ರಕಲೆಯನ್ನು ಕಲಿಯುವ ಮೊದಲು, ಮೊದಲು ಹಗ್ಗ ತಯಾರಕ, ಬುಕ್ ಬೈಂಡರ್ ಮತ್ತು ಗ್ಯಾರೇಜ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು.
ಎಪ್ಪತ್ತು ವರ್ಷ ದಾಟಿದ್ದರೂ ಅವರು ಈಗಲೂ 20 ಕೇಜಿ ಭಾರದ ಘೋಡಾ (ಏಣಿ)ಯನ್ನು ಕೆಲಸದ ಸ್ಥಳಗಳಿಗೆ ಹೊತ್ತೊಯ್ಯಬಲ್ಲರು. ಆದರೆ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ವೈದ್ಯರು ಹೆಚ್ಚಿನ ತೂಕವನ್ನು ಹೊರದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಹೊರಗಿನ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ, ಅಂಗಡಿಯಲ್ಲೇ ಬೋರ್ಡುಗಳನ್ನು ಬರೆಯುತ್ತಾರೆ. “ಬಹಳ ಹೊತ್ತು ಏಣಿಯ ಮೇಲೆ ನಿಂತರೆ ಮೊಣಕಾಲು ನೋವು ಸಹ ಬರುತ್ತದೆ. ಕೈಕಾಲಿನಲ್ಲಿ ಶಕ್ತಿ ಇರುವ ತನಕ ಈ ಕೆಲಸ ಮಾಡಬೇಕೆಂದು ಎಂದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ.


















