ವೇದಿಕೆಯಲ್ಲಿ ಕುಣಿಯುತ್ತಿದ್ದ ಡ್ಯಾನ್ಸರ್ಗಳ ನಡುವೆ ಇದ್ದಕ್ಕಿದ್ದಂತೆ ಯುವಕನೊಬ್ಬ ನುಗ್ಗಿ ಅಲ್ಲಿದ್ದ ಮುಸ್ಕಾನ್ ಎನ್ನುವ ಯುವತಿಯ ಕೈ ಹಿಡಿದುಕೊಂಡು ಗನ್ ತೋರಿಸುತ್ತಾ, “ಅಭಿ ಯೇ ಗೋಲಿ ಮಾರ್ ದೇಂಗೇ ತೋ ತೂರಾತ್ ನಾಚ್ನೇ ಲಗೋಗೆ [ಒಂದು ಗುಂಡು ಹಾರಿಸಿದೆ ಅಂದ್ರೆ ಇವತ್ತು ರಾತ್ರಿಯೆಲ್ಲ ಕುಣಿತಾ ಇರ್ತೀಯ” ಎಂದು ಆಕೆಯನ್ನು ಬೆದರಿಸಿದ.
ಬೆದರಿದ ಮುಸ್ಕಾನ್ ಉಳಿದ ಪ್ರೇಕ್ಷಕರ ಕಡೆ ನೋಡಿದರೆ ಅವರು ಅವನನ್ನು ಪ್ರೋತ್ಸಾಹಿಸುತ್ತಾ ಕೇಕೆ ಹಾಕುತ್ತಿದ್ದಾರೆ. ಆ ಕಿರಿಯ ಯುವತಿ ಅಂದು ಮಾಡಿದ್ದ ತಪ್ಪೆಂದರೆ ಬೋಜಪುರಿ ಭಾಷೆಯ ಅಶ್ಲೀಲ ಹಾಡೊಂದಕ್ಕೆ ಕುಣಿಯಲು ನಿರಾಕರಿಸಿದ್ದು. ಸಾವಿರಾರು ಪುರುಷ ಪ್ರೇಕ್ಷಕರೆದುರು ಆ ಹಾಡಿಗೆ ಕುಣಿಯಲು ಅವರಿಗೆ ಇಷ್ಟವಿರಲಿಲ್ಲ,
ರುನಾಲಿ ಆರ್ಕೆಸ್ಟ್ರಾ ಗ್ರೂಪ್ನ ಸದಸ್ಯರಾಗಿದ್ದ ಮುಸ್ಕಾನ್, ಸ್ಥಳೀಯವಾಗಿ "ಆರ್ಕೆಸ್ಟ್ರಾ" ಎಂದು ಕರೆಯಲ್ಪಡುವ ನೃತ್ಯ ಮತ್ತು ಸಂಗೀತ ಪ್ರದರ್ಶನದಲ್ಲಿ ಪ್ರದರ್ಶನ ನೀಡುತ್ತಿದ್ದ ಏಳು ನರ್ತಕಿಯರಲ್ಲಿ ಒಬ್ಬರಾಗಿದ್ದರು. ಚಿರಿಯಾ ಬ್ಲಾಕ್ ಪ್ರದೇಶದಲ್ಲಿ ದುರ್ಗಾ ಪೂಜಾ ಉತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ನಮ್ಮಂತಹ ನರ್ತಕಿಯರಿಗೆ ಇಂತಹ ಬೆದರಿಕೆಗಳು ಸಾಮಾನ್ಯ” ಎನ್ನುತ್ತಾರೆ ಮುಸ್ಕಾನ್. ಅವರು ಕಳೆದ ಮೂರು ವರ್ಷಗಳಿಂದ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಆದರೆ ಈ ಬೆದರಿಕೆಗಳು ಕೆಲವೇ ಕ್ಷಣಗಳಲ್ಲಿ ಲೈಂಗಿಕ ಕಿರುಕುಳವಾಗಿ ಮಾರ್ಪಡುತ್ತವೆ. “ಕಮರ್ ಪರ್ ಹಾತ್ ಎಖ್ನಾ ಯಾ ಬ್ಲೌಸ್ ಮೇ ಹಾತ್ ಘುಸಾನೇ ಕೀ ಕೋಶಿಸ್ ಕರ್ನಾ ಯಂಹಾ ಕಾ ಮರ್ದೋಂ ಕೀ ರೋಜ್ಮಾರಾ ಕೀ ಹರ್ಕತೇ ಹೇ [ಗಂಡಸರು ನಮ್ಮ ಸೊಂಟ ಬಳಸಿ ನಮ್ಮ ರವಿಕೆಯೊಳಗೆ ಕೈ ಹಾಕಲು ಪ್ರಯತ್ನಿಸುವುದು ದಿನ ನಿತ್ಯದ ಅಭ್ಯಾಸ” ಎನ್ನುತ್ತಾರೆ ನರ್ತಕಿ ರಾಧಾ.













