ಡಮ್-ಡಮ್-ಡಮ್… ಡಮ್-ಡಮ್-ಡಮ್…! ಇದು ನೀವು ಶಾಂತಿ ನಗರ ಬಸ್ತಿಯ ಯಾವ ಗಲ್ಲಿಯಲ್ಲಿ ಹೋದರೂ ಈ ಮೋಹಕ ಸದ್ದು ನಿಮ್ಮನ್ನು ಹಿಂಬಾಲಿಸುತ್ತದೆ. ಈ ಗಲ್ಲಿಗಳಲ್ಲಿ ಢೋಲಕ್ ವಾದ್ಯವನ್ನು ತಯಾರಿಸಿ ಅವುಗಳ ನಾದವನ್ನು ಹದಕ್ಕೆ ತರುವ ಕೆಲಸ ನಡೆಯುತ್ತಿರುತ್ತದೆ. ನಾವು 37 ಇರ್ಫಾನ್ ಶೇಖ್ ಎನ್ನುವವರೊಂದಿಗೆ ನಡೆದು ಹೋಗುತ್ತಿದ್ದೆವು. ಮುಂಬಯಿ ನಗರದ ಉತ್ತರ ಉಪನಗರದಲ್ಲಿರುವ ಈ ವಲಸೆಗಾರರ ಬಸ್ತಿಯಲ್ಲಿನ ಇತರ ಕುಶಲಕರ್ಮಿಗಳನ್ನು ಅವರು ನಮಗೆ ಪರಿಚಯಿಸಲಿದ್ದರು.
ಇಲ್ಲಿನ ಬಹುತೇಕ ಕುಶಲಕರ್ಮಿಗಳು ತಮ್ಮ ಬೇರುಗಳು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವುದಾಗಿ ಹೇಳುತ್ತಾರೆ. ಅವರಲ್ಲಿ ಸುಮಾರು 50 ಜನರು ಇಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. “ನೀವು ಎಲ್ಲಿ ನೋಡಿದರೂ ನಮ್ಮ ಬಿರದಾರಿ [ಸಮುದಾಯದವರು] ಈ ವಾದ್ಯಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿರುವುದನ್ನು ಕಾಣುತ್ತೀರಿ” ಎಂದು ಅವರು ಹೆಮ್ಮೆಯಿಂದ ಹೇಳಿದರು. “ಇಲ್ಲಿ ತಯಾರಾದ ಢೋಲಕ್‌ಗಳು ಮುಂಬಯಿ ಮತ್ತು ರಾಜ್ಯದ ಇತರ ಭಾಗಗಳಿಗೆ ಹೋಗುತ್ತವೆ” ಎನ್ನುವಾಗ ಅವರ ಮುಖದಲ್ಲಿ ಹೆಮ್ಮೆಯ ಗೆರೆಗಳು ಮೂಡಿ ಮರೆಯಾದವು. (ಬಿರದಾರಿ ಎನ್ನು ಪದಕ್ಕೆ ʼಸಹೋದರತ್ವʼ ಎನ್ನುವ ಅಕ್ಷರಶಃ ಅರ್ಥವಿದೆ; ಆದರೆ ಇದನ್ನು ಸಾಮಾನ್ಯವಾಗಿ ಕುಲ, ಸಮುದಾಯ ಅಥವಾ ಸಹೋದರತ್ವವ್ನನು ಸೂಚಿಸಲು ಬಳಸಲಾಗುತ್ತದೆ).






