“ನನಗೆ ಎಡಗಣ್ಣು ಕಾಣಿಸುವುದಿಲ್ಲ. ಪ್ರಕಾಶಮಾನವಾದ ಬೆಳಕು ನೋವು ತರುತ್ತದೆ. ಬಹಳ ನೋಯುತ್ತದೆ, ಇದರಿಂದಾಗ ನಾನು ಬಹಳ ಕಷ್ಟದಲ್ಲಿ ಬದುಕುತ್ತಿದ್ದೇನೆ” ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಂಗಾವ್ ಪಟ್ಟಣದ ಗೃಹಿಣಿ ಪ್ರಮೀಳಾ ನಸ್ಕರ್ ಹೇಳುತ್ತಾರೆ. ಬದುಕಿನ ನಾಲ್ಕನೇ ದಶಕದ ಆರಂಭದಲ್ಲಿರುವ ಪ್ರಮೀಳಾ ಅವರು ನಮ್ಮೊಂದಿಗೆ ಕೋಲ್ಕತ್ತಾದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ನೇತ್ರವಿಜ್ಞಾನ ಸಂಸ್ಥೆಯ ಸಾಪ್ತಾಹಿಕ ಕಾರ್ನಿಯಾ ಕ್ಲಿನಿಕ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಅವರು ಅಲ್ಲಿಗೆ ಚಿಕಿತ್ಸೆಗೆಂದು ಬಂದಿದ್ದರು.
ಪ್ರಮೀಳಾ ನಸ್ಕರ್ ಅವರ ನೋವು ನನಗೆ ಪೂರ್ತಿಯಾಗಿ ಅರ್ಥವಾಗುತ್ತಿತ್ತು. ಫೋಟೋಗ್ರಾಫರ್ ಒಬ್ಬನ ಪಾಲಿಗೆ ಒಂದು ಕಣ್ಣನ್ನು ಕಳೆದುಕೊಳ್ಳುವುದೆಂದರೆ ಭಯಾನಕ ಕಲ್ಪನೆ. 2007ರಲ್ಲಿ ನನಗೂ ಕಾರ್ನಿಯಲ್ ಅಲ್ಸರ್ ಆಗಿತ್ತು. ಆ ಸಂದರ್ಭದಲ್ಲಿ ಇನ್ನೇನು ನನ್ನ ಎಡಗಣ್ಣು ದೃಷ್ಟಿ ಕಳೆದುಕೊಳ್ಳುವುದರಲ್ಲಿತ್ತು. ಆ ಸಮಯದಲ್ಲಿ ವಿದೇಶದಲ್ಲಿದ್ದ ನಾನು ಚಿಕಿತ್ಸೆಗೆಂದು ಭಾರತಕ್ಕೆ ಮರಳಬೇಕಾಯಿತು. ಪೂರ್ಣ ದೃಷ್ಟಿ ಮರಳುವ ಹೊತ್ತಿಗೆ ನಾನು ಒಂದೂವರೆ ತಿಂಗಳ ಕಾಲದ ಚಿತ್ರಹಿಂಸೆ ರೂಪದ ರೀಹ್ಯಾಬಿಲೇಷನ್ ಪ್ರಕ್ರಿಯೆಯನ್ನು ಸಹಿಸಿಕೊಂಡಿದ್ದೆ. ಇದರಿಂದ ಚೇತರಿಸಿಕೊಂಡು ಈಗ ಒಂದೂವರೆ ದಶಕ ಕಳೆದಿದ್ದರೂ ದೃಷ್ಟಿ ಕಳೆದುಕೊಳ್ಳುವ ಭಯ ಈಗಲೂ ಕಾಡುತ್ತಿದೆ. ಫೋಟೋಗ್ರಾಫರ್ ಒಬ್ಬ ತನ್ನ ದೃಷ್ಟಿ ಕಳೆದುಕೊಂಡರೆ ಅವನ ಬದುಕು ಎಂತಹ ನರಕವಾಗಿರಬಲ್ಲದು ಎನ್ನುವುದನ್ನು ಕಲ್ಪಿಸಿಕೊಂಡು ಬೆಚ್ಚಿಬೀಳುತ್ತಿರುತ್ತೇನೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಜಾಗತಿಕವಾಗಿ, "ಕನಿಷ್ಠ 2.2 ಬಿಲಿಯನ್ ಜನರು ಹತ್ತಿರದ ಅಥವಾ ದೂರದ ದೃಷ್ಟಿ ದೌರ್ಬಲ್ಯವನ್ನು ಹೊಂದಿದ್ದಾರೆ. ಈ ಪ್ರಕರಣಗಳಲ್ಲಿ ಕನಿಷ್ಠ 1 ಬಿಲಿಯನ್ ಅಥವಾ ಅರ್ಧದಷ್ಟು ಪ್ರಕರಣಗಳಲ್ಲಿ, ದೃಷ್ಟಿ ದೌರ್ಬಲ್ಯವನ್ನು ತಡೆಗಟ್ಟಬಹುದಿತ್ತು ಅಥವಾ ಇನ್ನೂ ಅದಕ್ಕೆ ಚಿಕಿತ್ಸೆ ಆರಂಭವಾಗಿರಲಿಲ್ಲ..."
ಕಣ್ಣಿನ ಪೊರೆಯ ನಂತರ ವಿಶ್ವಾದ್ಯಂತ ಕುರುಡುತನಕ್ಕೆ ಎರಡನೇ ಸಾಮಾನ್ಯ ಕಾರಣವೆಂದರೆ ಕಾರ್ನಿಯಲ್ ಕಾಯಿಲೆಗಳು. ಕಾರ್ನಿಯಲ್ ಕುರುಡುತನದ ಸಾಂಕ್ರಾಮಿಕ ರೋಗ ವಿವರಣೆ ಸಂಕೀರ್ಣವಾಗಿದೆ ಮತ್ತು ಕಾರ್ನಿಯಲ್ ಕಲೆಗೆ ಕಾರಣವಾಗುವ ವ್ಯಾಪಕ ಶ್ರೇಣಿಯ ಉರಿಯೂತ ಮತ್ತು ವೈರಲ್ ಪರಿಸ್ಥಿತಿಗಳನ್ನು ಇದು ಒಳಗೊಂಡಿದೆ, ಇದು ಅಂತಿಮವಾಗಿ ಕ್ರಿಯಾತ್ಮಕ ಕುರುಡುತನಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಕಾರ್ನಿಯಲ್ ಕಾಯಿಲೆಯ ಆವರ್ತನ ಕಾಲ ದೇಶದಿಂದ ದೇಶಕ್ಕೆ ಬದಲಾಗುತ್ತದೆ.





















