ಟ್ರಾನ್ಸ್ ಸಮುದಾಯದೊಂದಿಗೆ ಕೆಲಸ ಮಾಡುವ ನಮ್ಮ ಪ್ರೈಡ್ ಮತ್ತು ಸೆವೆನ್ ರೇನ್‌ಬೋಸ್ ಸಂಸ್ಥೆಗಳ ಬೆಂಬಲದೊಂದಿಗೆ ಈ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಇದು ನಮ್ಮ ಎರಡನೇ ವರ್ಷದ ಮೆರವಣಿಗೆಯಾಗಿದ್ದು ನಾವು ಒಂದೇ ದಿನದಲ್ಲಿ ಪೊಲೀಸ್ ಅನುಮತಿಯನ್ನು ಪಡೆದೆವು [ಆದರೆ] ಕಳೆದ ವರ್ಷ ಅದು ನಮಗೆ ಅನುಮತಿ ಪಡೆಯಲು ಎರಡು ವಾರ ಹಿಡಿದಿತ್ತು" ಎಂದು ಪ್ರಣತಿ ಅಮ್ಮ ಹೇಳುತ್ತಾರೆ. ಅವರು ಸೆವೆನ್ ರೇನ್‌ಬೋಸ್ ಸಂಸ್ಥೆಯ ಸ್ಥಾಪಕರು ಮತ್ತು ಲಿಂಗತ್ವ ಮತ್ತು ಲೈಂಗಿಕತೆಯ ವಿಷಯಗಳ ಬಗ್ಗೆ ಭಾರತದಾದ್ಯಂತ 37 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.
“ನಾವು ಪೊಲೀಸರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಮೈಸೂರಿನಲ್ಲಿ ಈಗಲೂ ನಮ್ಮನ್ನು ಒಪ್ಪದ ಹಾಗೂ ನಮ್ಮನ್ನು ಇಲ್ಲಿಂದ ಓಡಿಸಲು ಬಯಸುವ ಜನರಿದ್ದಾರೆ. ಆದರೆ ನಾವು ಇದನ್ನು [ಪ್ರೈಡ್ ಮಾರ್ಚ್] ಪ್ರತಿವರ್ಷ ಇನ್ನಷ್ಟು ದೊಡ್ಡದಾಗಿ ಮತ್ತು ಹೆಚ್ಚು ವೈವಿಧ್ಯಮಯವಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ಅವರು ಹೇಳುತ್ತಾರೆ.
ಕಿಲೋಮೀಟರ್ ಉದ್ದದ ಮೆರವಣಿಗೆಯು ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶಗಳ ಮೂಲಕ ಸಾಗಿತು. ಸ್ಥಳೀಯ ಪೊಲೀಸರು ಸಂಚಾರವನ್ನು ತೆರವುಗೊಳಿಸಲು ಸಕ್ರಿಯವಾಗಿ ಸಹಾಯ ಮಾಡುವ ಮೂಲಕ ಆಚರಣೆ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು. "ನಾವು ಈ ಸಮುದಾಯವನ್ನು ಗೌರವಿಸುತ್ತೇವೆ. ಇಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಾವು ಅವರೊಂದಿಗೆ ನಡೆಯುತ್ತೇವೆ. ನಾವು ಈ [ಟ್ರಾನ್ಸ್‌ಜೆಂಡರ್] ಜನರನ್ನು ಬೆಂಬಲಿಸುತ್ತೇವೆ" ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ವಿಜಯೇಂದ್ರ ಸಿಂಗ್ ಹೇಳಿದರು.
"ಟ್ರಾನ್ಸ್‌ಜೆಂಡರ್ ಮಹಿಳೆಯರು ಭಾರತದಲ್ಲಿ ಸಂಕೀರ್ಣ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಮಾಂತ್ರಿಕ ಶಕ್ತಿಗಳ ಸುತ್ತಲಿನ ಮಿಥ್ಯೆಗಳಿಂದಾಗಿ ಅವರಿಗೆ ಒಂದಷ್ಟು ಸಾಂಸ್ಕೃತಿಕ ರಕ್ಷಣೆ ದೊರಕುತ್ತಿದೆಯಾದರೂ, ಅವರು ತಾರತಮ್ಯ ಮತ್ತು ಕಿರುಕುಳಕ್ಕೆ ಒಳಗಾಗುತ್ತಾರೆ" ಎಂದು ಮಾನಸಿಕ ಆರೋಗ್ಯ ವೃತ್ತಿಪರರಾದ ದೀಪಕ್ ಧನಂಜಯ ಹೇಳುತ್ತಾರೆ. "ಸ್ಥಳೀಯ ಸಮುದಾಯವು ಜನರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಜನರ ಮನಸ್ಥಿತಿಯನ್ನು ಬದಲಾಯಿಸುವುದು ರಾತ್ರೋರಾತ್ರಿ ಆಗುವ ಕೆಲಸವಲ್ಲ, ಆದರೆ ಈ ಮೆರವಣಿಗೆಗಳು, ವಿಶೇಷವಾಗಿ ಸಣ್ಣ ನಗರಗಳಲ್ಲಿ, ಹಿಂಸಾಚಾರವಿಲ್ಲದೆ ನಡೆಯುವದನ್ನು ನೋಡಿದಾಗ, ನನಗೆ ಭರವಸೆ ಮೂಡುತ್ತದೆ" ಎಂದು ಅವರು ಹೇಳುತ್ತಾರೆ.
ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ 31 ವರ್ಷದ ಪ್ರಿಯಾಂಕ್ ಆಶಾ ಸುಕಾನಂದ್, "ವಿಶ್ವವಿದ್ಯಾಲಯದಲ್ಲಿದ್ದಾಗ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸಿದೆ. ಆದರೆ ನಾನು ನನ್ನ ಹಕ್ಕುಗಳನ್ನು ದೃಢೀಕರಿಸಲು ಮತ್ತು ಅವುಗಳನ್ನು ಪ್ರತಿಪಾದಿಸಲು ನಿರ್ಧರಿಸಿದೆ. ನಾನು ನಡೆಯುವ ಪ್ರತಿಯೊಂದು ಪ್ರೈಡ್ ಮೆರವಣಿಗೆಯೂ ನನ್ನಂತಹವರು ಎದುರಿಸುತ್ತಿರುವ ಎಲ್ಲಾ ಬಗೆಯ ಹೋರಾಟಗಳನ್ನು ನೆನಪಿಸುತ್ತದೆ, ಆದ್ದರಿಂದ ನಾನು ಅವರುಗಳ ಸಲುವಾಗಿ ಈ ಮೆರವಣಿಗೆಯಲ್ಲಿ ನಡೆಯುತ್ತೇನೆ." ಬೆಂಗಳೂರು ಮೂಲದ ವಿಶೇಷ ಶಿಕ್ಷಕ ಮತ್ತು ಬಾಣಸಿಗರಾದ ಅವರು, "ಮೈಸೂರಿನ ಎಲ್‌ಜಿಬಿಟಿ ಸಮುದಾಯದ ನಿಜವಾದ ಶಕ್ತಿಯನ್ನು ನಾವು ನೋಡಿದ್ದೇವೆ ಮತ್ತು ಅದು ಬಹಳಷ್ಟು ಭರವಸೆ ನೀಡಿತು" ಎಂದು ಹೇಳಿದರು.