“ಒಂದು ದಿನ ನಾನು ದೇಶಕ್ಕಾಗಿ ಒಲಂಪಿಕ್‌ ಮೆಡಲ್‌ ಗೆಲ್ಲಬಯಸುತ್ತೇನೆ” ಎನ್ನುತ್ತಾ ತನ್ನ ಸ್ಪೋರ್ಟ್ಸ್‌ ಅಕಾಡೆಮಿಯ ತರಬೇತಿಯ ಅಂಗವಾಗಿ ತಾರ್‌ ರಸ್ತೆಯಲ್ಲಿ ಬಹಳ ದೂರದವರೆಗಿನ ಓಟ ಮುಗಿಸಿ ಬಂದ ಆಕೆ ಏದುಸಿರು ಬಿಡುತ್ತಾ ಹೇಳಿದಳು. ಆಕೆಯ ದಣಿದ ಮತ್ತು ಗಾಯಗೊಂಡ ಪಾದಗಳು ನಾಲ್ಕು ಗಂಟೆಗಳ ಕಾಲದ ಕಠಿಣ ಪರಿಶ್ರಮದ ನಂತರ ವಿಶ್ರಾಂತಿ ಪಡೆಯುತ್ತಿದ್ದವು.

ಈ 13 ವರ್ಷದ ಬಾಲಕಿ ಯಾವುದೋ ಆಧುನಿಕತೆಯ ಕಾರಣಕ್ಕಾಗಿ ಬರಿಗಾಲಿನಲ್ಲಿ ಓಡುತ್ತಿಲ್ಲ. “ನನ್ನ ಅಪ್ಪ-ಅಮ್ಮನಿಗೆ ದುಬಾರಿ ಸ್ಪೋರ್ಟ್ಸ್‌ ಶೂ ಕೊಡಿಸುವಷ್ಟು ಶಕ್ತಿಯಿಲ್ಲ” ಎನ್ನುತ್ತಾಳಾಕೆ.

ಕ್ರೀಡೆಯಲ್ಲಿ ಮಹತ್ವವಾದದ್ದನ್ನು ಸಾಧಿಸುವ ಕನಸನ್ನು ಹೊತ್ತಿರುವ ವರ್ಷಾ ಕದಮ್‌, ಮರಾಠವಾಡ ಪ್ರಾಂತ್ಯದ ಬಡ ಜಿಲ್ಲೆಗಳಲ್ಲಿ ಒಂದಾದ ಪರ್ಭಾನಿಯ ಕೃಷಿ ಕೂಲಿ ದಂಪತಿಗಳಾದ ವಿಷ್ಣು ಮತ್ತು ದೇವಶಾಲಾ ದಂಪತಿಗಳ ಪುತ್ರಿ. ಅವರ ಕುಟುಂಬವು ಮಹಾರಾಷ್ಟ್ರದ ಪರಿಶಿಷ್ಟ ಜಾತಿಗೆ ಸೇರಿದ ಮಾತಂಗ್ ಸಮುದಾಯಕ್ಕೆ ಸೇರಿದೆ.

“ನನಗೆ ರನ್ನಿಂಗ್‌ ಎಂದರೆ ಇಷ್ಟ” ಎನ್ನುವಾಗ ಆಕೆಯ ಕಣ್ಣುಗಳು ಹೊಳೆಯುತ್ತವೆ. “ಐದು ಕಿಲೋಮೀಟರ್ ಬುಲ್ಡಾನಾ ಅರ್ಬನ್ ಫಾರೆಸ್ಟ್ ಮ್ಯಾರಥಾನ್ 2021ರಲ್ಲಿ ಓಡಿದ್ದು ನನ್ನ ಮೊದಲ ಓಟವಾಗಿತ್ತು. ಅದರಲ್ಲಿ ಎರಡನೇ ಸ್ಥಾನ ಪಡೆದು ಪದಕ ಗೆದ್ದ ಸಂದರ್ಭದಲ್ಲಿ ನನ್ನ ಸಂತೋಷಕ್ಕೆ ಪಾರವೇ ಇದ್ದಿರಲಿಲ್ಲ. ನನಗೆ ಇನ್ನಷ್ಟು ಸ್ಪರ್ಧೆಗಳಲ್ಲಿ ಗೆಲ್ಲುವ ಬಯಕೆಯಿದೆ” ಎಂದು ಆಕೆ ದೃಢನಿಶ್ಚಯದಿಂದ ಹೇಳುತ್ತಾಳೆ.

ವರ್ಷಾ ಎಂಟು ವರ್ಷದವಳಿರುವಾಗಲೇ ಅವಳ ಪೋಷಕರು ಆಕೆಯಲ್ಲಿನ ಕ್ರೀಡಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಿದ್ದರು. “ನನ್ನ ಮಾಮಾ (ತಾಯಿಯ ಸಹೋದರ) ಪರಾಜಿ ಗಾಯಕ್ವಾಡ್‌ ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದರು. ಅವರೀಗ ಸೈನ್ಯದಲ್ಲಿದ್ದಾರೆ. ಅವರನ್ನು ನೋಡಿ ನಾನು ಓಟ ಆರಂಭಿಸಿದೆ” ಎನ್ನುತ್ತಾಳಾಕೆ. 2019ರಲ್ಲಿ ಅಂತರ ಶಾಲಾ ರಾಜ್ಯ ಮಟ್ಟದ ನಾಲ್ಕು ಕಿಲೋಮೀಟರ್ ಕ್ರಾಸ್ ಕಂಟ್ರಿ ಓಟದಲ್ಲಿ ಎರಡನೇ ಸ್ಥಾನವನ್ನು ಪಡೆದಳು ಮತ್ತು "ಅದು ಓಟವನ್ನು ಮುಂದುವರಿಸಲು ನನಗೆ ಹೆಚ್ಚಿನ ವಿಶ್ವಾಸವನ್ನು ನೀಡಿತು."

arsha Kadam practicing on the tar road outside her village. This road used was her regular practice track before she joined the academy.
PHOTO • Jyoti
Right: Varsha and her younger brother Shivam along with their parents Vishnu and Devshala
PHOTO • Jyoti

ಎಡ: ವರ್ಷಾ ಕದಮ್ ತನ್ನ ಹಳ್ಳಿಯ ಹೊರಗಿನ ಟಾರ್ ರಸ್ತೆಯಲ್ಲಿ ಅಭ್ಯಾಸ ಮಾಡುತ್ತಿರುವುದು. ಅಕಾಡೆಮಿಗೆ ಸೇರುವ ಮೊದಲು ಈ ರಸ್ತೆ ಅವಳ ನಿಯಮಿತ ಅಭ್ಯಾಸದ ಟ್ರ್ಯಾಕ್ ಆಗಿತ್ತು. ಬಲ: ವರ್ಷಾ ಮತ್ತು ಅವಳ ಕಿರಿಯ ಸಹೋದರ ಶಿವಮ್ ಮತ್ತು ಅವರ ಹೆತ್ತವರಾದ ವಿಷ್ಣು ಮತ್ತು ದೇವಶಾಲಾ

2020ರ ಸಾಂಕ್ರಾಮಿಕ ಪಿಡುಗಿನ ಕಾರಣ ಶಾಲೆಗಳು ತೆರೆಯುತ್ತಿರಲಿಲ್ಲ. “ನನ್ನ ಪೋಷಕರ ಬಳಿ ಫೋನ್‌ [ಸ್ಮಾರ್ಟ್‌ ಫೋನ್]‌ ಇಲ್ಲ. ಹೀಗಾಗಿ ಆನ್ಲೈನ್‌ ತರಗತಿ ಅಟೆಂಡ್‌ ಮಾಡಲು ಸಾಧ್ಯವಾಗಲಿಲ್ಲ” ಎನ್ನುವ ವರ್ಷ ಆ ಸಮಯವನ್ನು ಓಟದಲ್ಲಿ ಕಳೆಯುತ್ತಿದ್ದಳು – ಬೆಳಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆ.

ಅಕ್ಟೋಬರ್ 2020ರಲ್ಲಿ, ತನ್ನ 13ನೇ ವಯಸ್ಸಿನಲ್ಲಿ, ವರ್ಷಾ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಪಿಂಪಾಲ್‌ಗಾಂವ್ ಥೋಂಬರೆ ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಮರ್ಥ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ರೆಸಿಡೆನ್ಷಿಯಲ್ ಅಕಾಡೆಮಿಗೆ ಸೇರಿದಳು.

ಇಲ್ಲಿ ಅಂಚಿನಲ್ಲಿರುವ ಸಮುದಾಯಗಳ ಇತರ 13 ಕ್ರೀಡಾಪಟುಗಳು - ಎಂಟು ಹುಡುಗರು ಮತ್ತು ಐದು ಹುಡುಗಿಯರು - ಸಹ ತರಬೇತಿ ಪಡೆಯುತ್ತಿದ್ದಾರೆ. ಕೆಲವರು ರಾಜ್ಯದ ವಿಶೇಷವಾಗಿ ಅಂಚಿನಲ್ಲಿರುವ ಬುಡಕಟ್ಟು ಗುಂಪುಗಳಿಗೆ (ಪಿವಿಟಿಜಿ) ಸೇರಿದವರು. ಅವರ ಪೋಷಕರು ಮರಾಠಾವಾಡಾ ಪ್ರದೇಶದಲ್ಲಿ ಬೇಸಾಯ, ಕಬ್ಬು ಕಟಾವು ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ವಲಸೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

ಇಲ್ಲಿ ತರಬೇತಿ ಪಡೆಯುತ್ತಿರುವ ಈ ಯುವಕರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅಂತಿಮ ಹಂತವನ್ನು ತಲುಪಿದ್ದಾರೆ ಮತ್ತು ಕೆಲವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಸ್ಟಾರ್ ಕ್ರೀಡಾಪಟುಗಳು ವರ್ಷವಿಡೀ ಅಕಾಡೆಮಿಯಲ್ಲಿ ಉಳಿದುಕೊಂಡು 39 ಕಿಲೋಮೀಟರ್ ದೂರದ ಪರ್ಭಾನಿಯಲ್ಲಿರುವ ಶಾಲೆ / ಕಾಲೇಜಿಗೆ ಹಾಜರಾಗುತ್ತಾರೆ. ಅವರು ರಜೆಯ ಸಮಯದಲ್ಲಿ ಮಾತ್ರ ಮನೆಗೆ ಮರಳುತ್ತಾರೆ. "ಅವರಲ್ಲಿ ಕೆಲವರು ಬೆಳಿಗ್ಗೆ ಶಾಲೆಗೆ ಹೋದರೆ ಉಳಿದವರು ಮಧ್ಯಾಹ್ನ ಹೋಗುತ್ತಾರೆ. ಆದ್ದರಿಂದ, ನಾವು ಅದಕ್ಕೆ ಅನುಗುಣವಾಗಿ ಅಭ್ಯಾಸವನ್ನು ನಿಗದಿಪಡಿಸುತ್ತೇವೆ" ಎಂದು ಸಂಸ್ಥಾಪಕ ರವಿ ರಸ್ಕತ್ಲಾ ಹೇಳುತ್ತಾರೆ.

“ಇಲ್ಲಿನ ಸಾಕಷ್ಟು ಮಕ್ಕಳಲ್ಲಿ ವಿವಿಧ ಕ್ರೀಡೆಗಳಿಗೆ ಬೇಕಾಗುವ ಸಾಮರ್ಥ್ಯವಿದೆ. ಆದರೆ ಕುಟುಂಬಗಳು ಎರಡು ಹೊತ್ತಿನ ಊಟಕ್ಕೂ ಪರದಾಡುವಾಗ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಿ ಮುಂದುವರೆಯುವುದು ಅವರಿಗೆ ಕಷ್ಟವಾಗುತ್ತದೆ” ಎನ್ನುತ್ತಾರೆ ರವಿ. ಅವರು 2016ರಲ್ಲಿ ಅಕಾಡೆಮಿಯನ್ನು ಪ್ರಾರಂಭಿಸುವ ಮೊದಲು ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಕ್ರೀಡೆಯನ್ನು ಕಲಿಸುತ್ತಿದ್ದರು. "ಅಂತಹ [ಗ್ರಾಮೀಣ] ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಉಚಿತವಾಗಿ ಅತ್ಯುತ್ತಮ ತರಬೇತಿಯನ್ನು ನೀಡಲು ನಿರ್ಧರಿಸಿದೆ" ಎಂದು 49 ವರ್ಷದ ತರಬೇತುದಾರ ಹೇಳುತ್ತಾರೆ, ಅವರು ಯಾವಾಗಲೂ ಕೋಚಿಂಗ್, ತರಬೇತಿ, ಆಹಾರ ಮತ್ತು ಬೂಟುಗಳಿಗೆ ಪ್ರಾಯೋಜಕರನ್ನು ಹುಡುಕುತ್ತಾರೆ.

Left: Five female athletes share a small tin room with three beds in the Shri Samarth Athletics Sports Residential Academy.
PHOTO • Jyoti
Right: Eight male athletes share another room
PHOTO • Jyoti

ಎಡ: ಶ್ರೀ ಸಮರ್ಥ್ ಅಥ್ಲೆಟಿಕ್ಸ್ ಸ್ಪೋರ್ಟ್ಸ್ ರೆಸಿಡೆನ್ಶಿಯಲ್ ಅಕಾಡೆಮಿಯಲ್ಲಿ ಐದು ಮಹಿಳಾ ಕ್ರೀಡಾಪಟುಗಳು ಮೂರು ಹಾಸಿಗೆಗಳನ್ನು ಹೊಂದಿರುವ ಸಣ್ಣ ತಗಡಿನ ಕೋಣೆಯನ್ನು ಹಂಚಿಕೊಂಡಿದ್ದಾರೆ. ಬಲ: ಎಂಟು ಪುರುಷ ಕ್ರೀಡಾಪಟುಗಳು ಮತ್ತೊಂದು ಕೋಣೆಯನ್ನು ಹಂಚಿಕೊಳ್ಳುತ್ತಾರೆ

The tin structure of the academy stands in the middle of fields, adjacent to the Beed bypass road. Athletes from marginalised communities reside, study, and train here
PHOTO • Jyoti

ಅಕಾಡೆಮಿಯು ತಾತ್ಕಾಲಿಕ ತಗಡಿನ ರಚನೆಯಾಗಿದ್ದು ಅದಕ್ಕೆ ನೀಲಿ ಬಣ್ಣ ಬಳಿಯಲಾಗಿದೆ ಮತ್ತು ಬೀಡ್ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಹೊಲಗಳ ಮಧ್ಯದಲ್ಲಿದೆ. ಅಂಚಿನಲ್ಲಿರುವ ಸಮುದಾಯಗಳ ಕ್ರೀಡಾಪಟುಗಳು ಇಲ್ಲಿ ವಾಸಿಸುತ್ತಾರೆ, ಅಧ್ಯಯನ ಮಾಡುತ್ತಾರೆ ಮತ್ತು ತರಬೇತಿ ಪಡೆಯುತ್ತಾರೆ

ಅಕಾಡೆಮಿಯು ತಾತ್ಕಾಲಿಕ ತಗಡಿನ ರಚನೆಯಾಗಿದ್ದು, ನೀಲಿ ಬಣ್ಣ ಬಳಿಯಲಾಗಿದೆ ಮತ್ತು ಬೀಡ್ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಹೊಲಗಳ ಮಧ್ಯದಲ್ಲಿದೆ. ಇದು ಪರ್ಭಾನಿಯ ಕ್ರೀಡಾಪಟು ಜ್ಯೋತಿ ಗವಟೆ ಅವರ ತಂದೆ ಶಂಕರರಾವ್ ಅವರಿಗೆ ಸೇರಿದ ಒಂದೂವರೆ ಎಕರೆ ಭೂಮಿಯಲ್ಲಿ ನಿಂತಿದೆ. ಅವರು ರಾಜ್ಯ ಸಾರಿಗೆ ಕಚೇರಿಯಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದರು; ಜ್ಯೋತಿಯ ತಾಯಿ ಅಡುಗೆಯವರಾಗಿ ಕೆಲಸ ಮಾಡುತ್ತಾರೆ.

“ನಾವು ಮೊದಲು ತಗಡಿನ ಛಾವಣಿ ಹೊಂದಿದ್ದ ಮನೆಯಲ್ಲಿ ವಾಸಿಸುತ್ತಿದ್ದೆವು. ನಾನು ಒಂದಿಷ್ಟು ಹಣವನ್ನು ಹೊಂದಿಸಿದ್ದೆ. ಆ ಮೂಲಕ ನಾವೊಂದು ಸ್ವಂತ ಮನೆಯನ್ನು ಕಟ್ಟಿಸಿದೆವು. ನನ್ನ ಸಹೋದರ [ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್] ಕೂಡ ಮೊದಲಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾರೆ", ಎಂದು ಓಟಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿರುವ ಜ್ಯೋತಿ ಹೇಳುತ್ತಾರೆ. ಜ್ಯೋತಿ ತಮ್ಮ ಕುಟುಂಬವು ಕೃಷಿ ಭೂಮಿಯನ್ನು ʼರವಿಸರ್‌ʼ ಅವರ ಕ್ರೀಡಾ ಅಕಾಡೆಮಿಗೆ ನೀಡುವ ಕುರಿತು ಯೋಚಿಸಬಹುದು ಎನ್ನಿಸಿತು. ಮತ್ತು ಅದಕ್ಕೆ ಅವರ ಪೋಷಕರು ಮತ್ತು ಸಹೋದರ ಬೆಂಬಲ ನೀಡಿದರು. “ಅದೊಂದು ಪರಸ್ಪರ ಹೊಂದಾಣಿಕೆ” ಎಂದು ಅವರು ಹೇಳುತ್ತಾರೆ.

ಅಕಾಡೆಮಿಯ ಒಂದು ದೊಡ್ಡ ಕೋಣೆಗೆ ತಗಡಿನ ಶೀಟುಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಅದನ್ನು ಎರಡು ಕೋಣೆಗಳನ್ನಾಗಿ ಪರಿವರ್ತಿಸಲಾಗಿದೆ. ಒಂದೊಂದು ಕೋಣೆ 15 x 20 ಅಡಿ ಗಾತ್ರದಲ್ಲಿದೆ. ಒಂದು ಕೋಣೆಯಲ್ಲಿ ಬಾಲಕಿಯರು ಇದ್ದಾರೆ. ಅದರಲ್ಲಿ ಅಕಾಡೆಮಿಗೆ ದಾನಿಗಳು ನೀಡಿದ ಮೂರು ಹಾಸಿಗೆಗಳಿದ್ದು ಅದನ್ನು ಐದು ಬಾಲಕಿಯರು ಹಂಚಿಕೊಳ್ಳುತ್ತಾರೆ. ಇನ್ನೊಂದು ಕೋಣೆಯಲ್ಲಿ ಹುಡುಗರು ಉಳಿದುಕೊಂಡಿದ್ದು, ಅಲ್ಲಿ ಹಾಸಿಗೆಗಳನ್ನು ಕಾಂಕ್ರೀಟ್‌ ನೆಲದ ಮೇಲೆ ಸಾಲಾಗಿ ಇರಿಸಲಾಗಿದೆ.

ಎರಡೂ ಕೋಣೆಗಳಲ್ಲಿ ಟ್ಯೂಬ್‌ಲೈಟ್‌ ಹಾಗೂ ಫ್ಯಾನ್‌ ಇವೆ; ಅಪರೂಪಕ್ಕೊಮ್ಮೆ ಕರೆಂಟ್‌ ಇರುವಾಗ ಅವು ಕೆಲಸ ಮಾಡುತ್ತವೆ. ಈ ಪ್ರದೇಶದಲ್ಲಿ ಬೇಸಗೆ ಕಾಲದಲ್ಲಿ ತಾಪಮಾನ 41 ಡಿಗ್ರಿಗಳವರೆಗೆ ಇದ್ದರೆ, ಚಳಿಗಾಲದಲ್ಲಿ 14 ಡಿಗ್ರಿಯಷ್ಟಿರುತ್ತದೆ.

2012ರ ಮಹಾರಾಷ್ಟ್ರ ರಾಜ್ಯ ಕ್ರೀಡಾ ನೀತಿಯು ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಮೇಲ್ದರ್ಜೆಗೇರಿಸಲು ಕ್ರೀಡಾ ಸಂಕೀರ್ಣಗಳು, ಅಕಾಡೆಮಿಗಳು, ಶಿಬಿರಗಳು ಮತ್ತು ಕ್ರೀಡಾ ಉಪಕರಣಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸುತ್ತದೆ.

ಆದರೆ ರವಿ ಹೇಳುತ್ತಾರೆ, "ಹತ್ತು ವರ್ಷಗಳಿಂದ ಈ ನೀತಿಯು ಕೇವಲ ಕಾಗದದ ಮೇಲೆ ಉಳಿದಿದೆ. ತಳಮಟ್ಟದಲ್ಲಿ ನಿಜವಾಗಿ ಅನುಷ್ಠಾನಗೊಂಡಿಲ್ಲ. ಇಂತಹ ಪ್ರತಿಭೆಗಳನ್ನು ಗುರುತಿಸಲು ಸರ್ಕಾರ ವಿಫಲವಾಗಿದೆ. ಕ್ರೀಡಾ ಅಧಿಕಾರಿಗಳಲ್ಲಿ ಸಾಕಷ್ಟು ನಿರಾಸಕ್ತಿ ಕಾಣುತ್ತದೆ.”

2017ರಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿಯು ಸಹ ತಾಲ್ಲೂಕು ಮಟ್ಟದಿಂದ ರಾಜ್ಯಕ್ಕೆ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸುವ ಕ್ರೀಡಾ ನೀತಿಯ ಉದ್ದೇಶವು ಪೂರ್ಣವಾಗಿಲ್ಲ ಎಂದು ಒಪ್ಪಿಕೊಳ್ಳುತ್ತದೆ.

Left: Boys showing the only strength training equipments that are available to them at the academy.
PHOTO • Jyoti
Right: Many athletes cannot afford shoes and run the races barefoot. 'I bought my first pair in 2019. When I started, I had no shoes, but when I earned some prize money by winning marathons, I got these,' says Chhagan
PHOTO • Jyoti

ಎಡ: ಅಕಾಡೆಮಿಯಲ್ಲಿ ಲಭ್ಯವಿರುವ ಕೆಲವೇ ಸ್ಟ್ರೆಂಥ್‌ ಟ್ರೈನಿಂಗ್ ಉಪಕರಣಗಳನ್ನು ತೋರಿಸು ತ್ತಿರು ವ ಹುಡುಗರು. ಬಲ: ಅನೇಕ ಕ್ರೀಡಾಪಟುಗಳಿಗೆ ಶೂಗಳನ್ನು ಖರೀದಿಸುವ ಶಕ್ತಿಯಿಲ್ಲ ಹಾಗೂ ಬರಿಗಾಲಿನಲ್ಲಿ ಓಡುವುದು ಕಷ್ಟವಾಗುತ್ತದೆ . 'ನಾನು 2019ರಲ್ಲಿ ಮೊದಲ ಬಾರಿಗೆ ಶೂ ಖರೀದಿಸಿದೆ. ಆರಂಭದಲ್ಲಿ ನನ್ನ ಬಳಿ ಬೂಟುಗಳಿರಲಿಲ್ಲ , ಮ್ಯಾರಥಾ ನ್‌ ಗಳನ್ನು ಗೆದ್ದು ನಾನು ಬಹುಮಾನದ ರೂಪದಲ್ಲಿ ಗಳಿಸಿದ ಹಣದಿಂದ ನಂತರ ಖರೀದಿಸಿದೆ ' ಎಂದು ಛಗನ್ ಹೇಳುತ್ತಾರೆ

Athletes practicing on the Beed bypass road. 'This road is not that busy but while running we still have to be careful of vehicles passing by,' says coach Ravi
PHOTO • Jyoti

ಬೀಡ್ ಬೈಪಾಸ್ ರಸ್ತೆಯಲ್ಲಿ ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳು. 'ಈ ರಸ್ತೆ ಯಲ್ಲಿ ಅಷ್ಟು ವಾಹನಗಳು ಓಡಾಡುವುದಿಲ್ಲ, ಆದರೆ ನಾವು ಓಡುವಾಗ ಕೆಲವೊಮ್ಮೆ ಎದುರಾಗುವ ವಾಹನಗಳ ಬಗ್ಗೆ ಜಾಗರೂಕರಾಗಿರಬೇಕು' ಎಂದು ತರಬೇತುದಾರ ರವಿ ಹೇಳುತ್ತಾರೆ

ಖಾಸಗಿಯಾಗಿ ತರಬೇತಿ ನೀಡುವ ಮೂಲಕ ಅಕಾಡೆಮಿಯ ದೈನಂದಿನ ಖರ್ಚುಗಳನ್ನು ಪೂರೈಸುವುದಾಗಿ ರವಿ ಹೇಳುತ್ತಾರೆ. "ಈಗ ಗಣ್ಯ ಮ್ಯಾರಥಾನ್ ಓಟಗಾರರಾಗಿರುವ ನನ್ನ ಅನೇಕ ವಿದ್ಯಾರ್ಥಿಗಳು ಸಹ ತಮ್ಮ ಬಹುಮಾನದ ಹಣವನ್ನು ದಾನ ಮಾಡುತ್ತಾರೆ."

ಸೀಮಿತ ಆರ್ಥಿಕ ಸಂಪನ್ಮೂಲ ಹಾಗೂ ಸೌಲಭ್ಯಗಳ ಹೊರತಾಗಿಯೂ ಅಕಾಡೆಮಿಯು ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರದ ಕೊರತೆ ಎದುರಾಗದ ಹಾಗೆ ನೋಡಿಕೊಳ್ಳುತ್ತಿದೆ. ಚಿಕನ್ ಅಥವಾ ಮೀನನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ನೀಡಲಾಗುತ್ತದೆ. ಇತರ ದಿನಗಳಲ್ಲಿ, ಹಸಿರು ತರಕಾರಿಗಳು, ಬಾಳೆಹಣ್ಣು, ಜ್ವಾರಿ, ಬಾಜ್ರಿ ಭಕ್ರಿ, ಮೊಳಕೆ ಕಾಳುಗಳಾದ ಮಟ್ಕಿ, ಹೆಸರುಕಾಳು, ಕಡಲೆ ನೀಡುವುದರ ಜೊತೆಗೆ ಮೊಟ್ಟೆಗಳನ್ನು ಸಹ ನೀಡಲಾಗುತ್ತದೆ.

ಕ್ರೀಡಾಪಟುಗಳು ಬೆಳಗಿನ ಆರು ಗಂಟೆಗೆ ಡಾಂಬರು ರಸ್ತೆಗಿಳಿದು ಪ್ರಾಕ್ಟೀಸ್‌ ಆರಂಭಿಸುತ್ತಾರೆ ಮತ್ತು 10 ಗಂಟೆಗೆ ನಿಲ್ಲಿಸುತ್ತಾರೆ. ಸಂಜೆ 5 ಗಂಟೆಯ ನಂತರ ಮತ್ತೆ ಅದೇ ರಸ್ತೆಯಲ್ಲಿ ಸ್ಪೀಡ್ ವರ್ಕ್ ತರಬೇತಿ ಆರಂಭಿಸುತ್ತಾರೆ. “ಇದೇನು ಅಷ್ಟೊಂದು ವಾಹನಗಳು ಓಡಾಡುವ ರಸ್ತೆಯಲ್ಲವಾದರೂ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವಾಹನಗಳ ಕುರಿತು ನಾವು ಎಚ್ಚರಿಕೆಯಿಂದಿರಬೇಕಾಗುತ್ತದೆ. ನಾನು ಮಕ್ಕಳ ಸುರಕ್ಷತೆಯ ಕುರಿತು ವಿಶೇಷ ಕಾಳಜಿವಹಿಸುತ್ತೇನೆ” ಎಂದು ವಿವರಿಸುತ್ತಾರೆ ಮಕ್ಕಳ ತರಬೇತುದಾರ. “ಸ್ಪೀಡ್‌ ವರ್ಕ್‌ ‌ಎಂದರೆ ಕನಿಷ್ಟ ಸಮಯದಲ್ಲಿ ಗರಿಷ್ಟ ದೂರವನ್ನು ಮುಟ್ಟುವುದು. ಎಂದರೆ 2 ನಿಮಿಷ 30 ಸೆಕೆಂಡುಗಳಲ್ಲಿ ಒಂದು ಕಿಲೋಮೀಟರ್‌ ದೂರವನ್ನು ತಲುಪಬೇಕು.”

ವರ್ಷಾಳ ಪೋಷಕರು ತಮ್ಮ ಮಗಳ ರಾಷ್ಟ್ರಮಟ್ಟದ ಕ್ರೀಡಾಪಟುವಾಗುವ ಕನಸು ನಿಜವಾಗುವ ದಿನವನ್ನು ಕಾತುರದಿಂದ ಎದುರುನೋಡುತ್ತಿದ್ದಾರೆ. ಅವಳು 2021ರಿಂದ ಮಹಾರಾಷ್ಟ್ರದಲ್ಲೆಡೆ ನಡೆಯುವ ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತಿದ್ದಾಳೆ. “ಅವಳು ಓಟದಲ್ಲಿ ಘನವಾದದ್ದನ್ನು ಸಾಧಿಸಬೇಕೆನ್ನುವ ಬಯಕೆ ನಮ್ಮದು. ನಮ್ಮಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನೂ ನಾವು ನೀಡುತ್ತಿದ್ದೇವೆ. ಅವಳು ದೇಶ ಮತ್ತು ನಮ್ಮ ಪಾಲಿಗೆ ಹೆಮ್ಮೆ ತರಲಿದ್ದಾಳೆ.” ಎಂದು ಅವಳ ತಾಯಿ ಸಂಭ್ರಮದಿಂದ ಹೇಳುತ್ತಾರೆ. “ಅವಳು ಸ್ಪರ್ಧೆಗಳಲ್ಲಿ ಓಡುವುದನ್ನು ನೋಡಬೇಕೆನ್ನುವ ಬಯಕೆಯಿದೆ. ಅವಳು ಅಷ್ಟು ವೇಗವಾಗಿ ಹೇಗೆ ಗುರಿ ತಲುಪುತ್ತಾಳೆನ್ನುವುದು ನನ್ನೊಳಗೆ ಅಚ್ಚರಿ ಹುಟ್ಟಿಸಿರುವ ಅಂಶ.” ಎಂದು ವರ್ಷಾಳ ಅಪ್ಪ ವಿಷ್ಣು ಹೇಳುತ್ತಾರೆ.

2009ರಲ್ಲಿ, ಮದುವೆಯಾದ ಹೊಸತರಲ್ಲಿ ದಂಪತಿಗಳು ನಿಯಮಿತವಾಗಿ ವಲಸೆ ಹೋಗುತ್ತಿದ್ದರು. ಅವರ ಹಿರಿಯ ಮಗಳು ವರ್ಷಾ ಮೂರು ವರ್ಷದವಳಿದ್ದಾಗ, ಆಕೆಯ ಪೋಷಕರು ಕೂಲಿ ಕೆಲಸವನ್ನು ಹುಡುಕಿಕೊಂಡು ತಮ್ಮ ಹಳ್ಳಿಯಿಂದ ವಲಸೆ ಹೋಗುತ್ತಿದ್ದರು - ಕಬ್ಬು ಕಟಾವು ಕೆಲಸಕ್ಕೆ. ಕುಟುಂಬವು ಡೇರೆಗಳಲ್ಲಿ ಉಳಿಯುತ್ತಿತ್ತು ಮತ್ತು ಯಾವಾಗಲೂ ವಲಸೆಯಲ್ಲಿರುತ್ತಿತ್ತು. "ಟ್ರಕ್ಕುಗಳಲ್ಲಿ ನಿರಂತರ ಪ್ರಯಾಣವು ವರ್ಷಾಗೆ ಅನಾರೋಗ್ಯವನ್ನುಂಟುಮಾಡುತ್ತಿತ್ತು, ಹೀಗಾಗಿ ವಲಸೆ ಹೋಗುವುದನ್ನು ನಿಲ್ಲಿಸಿದೆವು" ಎಂದು ದೇವಶಾಲಾ ನೆನಪಿಸಿಕೊಳ್ಳುತ್ತಾರೆ. ಅಂದಿನಿಂದ ಅವರು ಹಳ್ಳಿಯ ಸುತ್ತಮುತ್ತ ಕೆಲಸ ಹುಡುಕಲು ಪ್ರಾರಂಭಿಸಿದರು, ಅಲ್ಲಿ "ಮಹಿಳೆಯರಿಗೆ ದಿನಕ್ಕೆ 100 ರೂಪಾಯಿಗಳು ಮತ್ತು ಪುರುಷರಿಗೆ 200 ರೂಪಾಯಿಗಳು ಸಿಗುತ್ತವೆ" ಎಂದು ವಿಷ್ಣು ಹೇಳುತ್ತಾರೆ. "ನಾನು ನಾಸಿಕ್, ಪುಣೆಗೆ ಹೋಗಿ ಸೆಕ್ಯುರಿಟಿ ಗಾರ್ಡ್ ಆಗಿ ಅಥವಾ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತೇನೆ, ಅಥವಾ ಕೆಲವೊಮ್ಮೆ ನಾನು ನರ್ಸರಿಗಳಲ್ಲಿ ಕೆಲಸ ಮಾಡುತ್ತೇನೆ." ವಿಷ್ಣು 5ರಿಂದ 6 ತಿಂಗಳಲ್ಲಿ 20,000 - 30,000 ರೂ.ಗಳನ್ನು ಗಳಿಸಲು ಸಾಧ್ಯವಾಗುತ್ತದೆ. ದೇವಶಾಲಾ ತಮ್ಮ ಇನ್ನಿಬ್ಬರು ಮಕ್ಕಳು (ಒಂದು ಗಂಡು, ಒಂದು ಹೆಣ್ಣು) ಶಾಲೆಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಾರೆ.

ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ದಂಪತಿಗಳಿಗೆ ಮಗಳಿಗೆ ಸರಿಯಾದ ಶೂ ಕೊಡಿಸಲು ಸಾಧ್ಯವಾಗಿಲ್ಲ. ಆದರೆ ಈ ಯುವ ಕ್ರೀಡಾಪಟುವಿಗೆ ಅದೊಂದು ವಿಷಯವೇ ಅಲ್ಲ, “ನಾನು ನನ್ನ ವೇಗ ಮತ್ತು ಓಡುವ ತಂತ್ರದ ಮೇಲೆ ಹೆಚ್ಚು ಗಮನ ಹರಿಸಲು ಪ್ರಯತ್ನಿಸುತ್ತೇನೆ." ಎನ್ನುತ್ತಾಳವಳು.

Devshala’s eyes fills with tears as her daughter Varsha is ready to go back to the academy after her holidays.
PHOTO • Jyoti
Varsha with her father. 'We would really like to see her running in competitions. I wonder how she does it,' he says
PHOTO • Jyoti

ಎಡ: ತನ್ನ ಮಗಳು ವರ್ಷಾ ತನ್ನ ರಜಾದಿನಗಳ ನಂತರ ಅಕಾಡೆಮಿಗೆ ಹಿಂತಿರುಗಲು ಸಿದ್ಧವಾಗುತ್ತಿದ್ದಂತೆ ದೇವಶಾಲಾ ಅವರ ಕಣ್ಣುಗಳು ಕಣ್ಣೀರಿನಿಂದ ತುಂಬಿವೆ. ಬಲ: ವರ್ಷಾ ತನ್ನ ತಂದೆಯೊಂದಿಗೆ. ʼ ಅವಳು ಸ್ಪರ್ಧೆಗಳಲ್ಲಿ ಓಡುವುದನ್ನು ನೋಡಬೇಕೆನ್ನುವ ಬಯಕೆಯಿದೆ. ಅವಳು ಅಷ್ಟು ವೇಗವಾಗಿ ಹೇಗೆ ಗುರಿ ತಲುಪುತ್ತಾಳೆನ್ನುವುದು ನನ್ನೊಳಗೆ ಅಚ್ಚರಿ ಹುಟ್ಟಿಸಿರುವ ಅಂಶ. ' ಎಂದು ಅವರು ಹೇಳುತ್ತಾರೆ

*****

ಮ್ಯಾರಾಥಾನ್‌ ಓಟಗಾರನಾಗಿರುವ ಛಗನ್‌ ಬೊಂಬ್ಲೆಯವರಿಗೆ ಒಂದು ಜೋಡಿ ಶೂ ಖರೀದಿಸಲು ಸಾಧ್ಯವಾಗಿದ್ದು ಮೊದಲ ರೇಸ್‌ ಗೆದ್ದ ನಂತರ. “ನಾನು 2019ರಲ್ಲಿ ಮೊದಲ ಬಾರಿಗೆ ಒಂದು ಜೋಡಿ ಶೂ ಖರೀದಿಸಿದೆ. ನಾನು ಓಡಲು ಪ್ರಾರಂಭಿಸಿದ ದಿನಗಳಲ್ಲಿ ನನ್ನ ಬಳಿ ಬೂಟುಗಳಿರಲಿಲ್ಲ. ಮ್ಯಾರಥಾನ್ ಗೆದ್ದ ನಂತರ ಅದರಿಂದ ಬಂದ ಹಣವನ್ನು ಉಳಿಸಿ ಅದರಿಂದ ಶೂ ಖರೀದಿಸಿದೆ.” ಎನ್ನುತ್ತಾ ಅವರು ಅಂದು ಕೊಂಡ, ಈಗ ಸಾಕಷ್ಟು ಸವೆದಿರುವ ಶೂ ತೋರಿಸುತ್ತಾರೆ.

22 ವರ್ಷದ ಈ ಯುವಕ ಆಂಧ್ ಬುಡಕಟ್ಟು ಜನಾಂಗದ ಕೃಷಿ ಕಾರ್ಮಿಕರ ಮಗನಾಗಿದ್ದು, ಅವರ ಕುಟುಂಬವು ಹಿಂಗೋಲಿ ಜಿಲ್ಲೆಯ ಖಂಬಲಾ ಗ್ರಾಮದಲ್ಲಿ ವಾಸಿಸುತ್ತಿದೆ.

ಅವರ ಬಳಿ ಈಗ ಶೂ ಇದೆ, ಆದರೆ ಅದರೊಳಗೆ ಹಾಕಿಕೊಳ್ಳುವ ಸಾಕ್ಸ್‌ ಇಲ್ಲ. ಬರೀ ಶೂ ಹಾಕಿಕೊಂಡು ಓಡುವಾಗ ಡಾಂಬರು ರಸ್ತೆ ಕಾಲಿಗೆ ತಾಕಿದ ಅನುಭವವಾಗುತ್ತದೆ. ಏಕೆಂದರೆ ಬೂಟುಗಳ ತಳ ಅಷ್ಟು ಸವೆದಿದೆ. “ಹೌದು, ಖಂಡಿತ ಇದರಿಂದ ನೋವಾಗುತ್ತದೆ. ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಉತ್ತಮ ಶೂ ಎರಡೂ ಇದ್ದಿದ್ದರೆ ಕಾಲಿಗೆ ಒಳ್ಳೆಯ ರಕ್ಷಣೆ ಸಿಗುವುದರ ಜೊತೆಗೆ ಗಾಯಗಳೂ ಕಡಿಮೆಯಾಗುತ್ತಿದ್ದವು.” ಎಂದು ಅವರು ಈ ವರದಿಗಾರರ ಬಳಿ ತಮ್ಮ ನೋವು ಮತ್ತು ನಿರೀಕ್ಷೆಯನ್ನು ತೋಡಿಕೊಂಡರು. “ನಮಗೆ ನಡಿಗೆ, ಓಟ, ಆಡುವುದು, ಬೆಟ್ಟಗಳನ್ನು ಹತ್ತುವುದು ಹುಟ್ಟಿನಿಂದಲೇ ಅಭ್ಯಾಸವಾಗಿರುತ್ತದೆ. ನಾವು ಚಪ್ಪಲಿಯಿಲ್ಲದೆ ನಮ್ಮ ಪೋಷಕರೊಡನೆ ಹೊಲದಲ್ಲಿ ಕೆಲಸ ಮಾಡುತ್ತೇವೆ. ಹೀಗಾಗಿ ನಮಗೆ ಇದೆಲ್ಲ ಏನು ಅಷ್ಟು ದೊಡ್ಡ ವಿಷಯವಲ್ಲ” ಎನ್ನುತ್ತಾ ಆಗಾಗ ಉಂಟಾಗುವ ಗಾಯ ಮತ್ತು ಹುಣ್ಣುಗಳ ಕುರಿತಾದ ಮಾತನ್ನು ಮರೆಮಾಚುತ್ತಾರೆ.

ಛಗನ್ ಅವರ ಹೆತ್ತವರಾದ ಮಾರುತಿ ಮತ್ತು ಭಾಗೀರತ ಅವರ ಬಳಿ ಯಾವುದೇ ರೀತಿಯ ಭೂಮಿಯಿಲ್ಲದ ಕಾರಣ ಕೃಷಿ ಕೂಲಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. "ಕೆಲವೊಮ್ಮೆ ನಾವು ಹೊಲದಲ್ಲಿ ಕೆಲಸ ಮಾಡುತ್ತೇವೆ. ಕೆಲವೊಮ್ಮೆ ರೈತರ ಎತ್ತುಗಳನ್ನು ಮೇಯಿಸಲು ಹೋಗುತ್ತೇವೆ. ಯಾವ ಕೆಲಸ ಸಿಕ್ಕರೂ ಮಾಡುತ್ತೇವೆ" ಎಂದು ಮಾರುತಿ ಹೇಳುತ್ತಾರೆ. ಇಬ್ಬರೂ ಸೇರಿ ದಿನಕ್ಕೆ 250 ರೂ.ಗಳನ್ನು ಸಂಪಾದಿಸುತ್ತಾರೆ. ಮತ್ತು ಕೆಲಸವು ಪ್ರತಿ ತಿಂಗಳು 10-15 ದಿನಗಳು ಮಾತ್ರ ಸಿಗುತ್ತದೆ.

ಅವರ ಮಗ, ಓಟಗಾರ ಛಗನ್‌ ನಗರ, ತಾಲ್ಲೂಕು, ರಾಜ್ಯ, ಮತ್ತು ರಾಷ್ಟ್ರೀಯ ಮಟ್ಟದ ದೊಡ್ಡ ಹಾಗೂ ಸಣ್ಣ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಕುಟುಂಬಕ್ಕೆ ಆಧಾರವಾಗುತ್ತಿದ್ದಾರೆ. “ಮೊದಲ ಮೂರು ಸ್ಥಾನ ಪಡೆದ ಸ್ಪರ್ಧಿಗಳಿಗೆ ಪ್ರಶಸ್ತಿ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ. ಕೆಲವೊಮ್ಮೆ ಪ್ರಶಸ್ತಿ ಮೊತ್ತ 10,000, ಕೆಲವೊಮ್ಮೊ 15,000 ರೂಗಳ ತನಕ ಇರುತ್ತದೆ. ನಾನು ವರ್ಷವೊಂದರಲ್ಲಿ ಸುಮಾರು 8ರಿಂದ 10 ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತೇನೆ. ಎಲ್ಲವನ್ನೂ ಗೆಲ್ಲವುದು ಕಷ್ಟ. 2021ರಲ್ಲಿ ನಾನು ಎರಡರಲ್ಲಿ ಗೆದ್ದಿದ್ದೆ ಮತ್ತು ಮೂರು ಪಂದ್ಯಗಳಲ್ಲಿ ರನ್ನರ್‌ ಅಪ್‌ ಆಗಿದ್ದೆ. ಇವುಗಳಿಂದ ಒಟ್ಟು 42,000 ರೂಪಾಯಿಗಳನ್ನು ಗಳಿಸಿದ್ದೆ.”

Left: 22-year-old marathon runner Chhagan Bomble from Andh tribe in Maharashra
PHOTO • Jyoti
Right: Chhagan’s house in Khambala village in Hingoli district. His parents depend on their earnings from agriculture labour to survive
PHOTO • Jyoti

ಎಡ: ಮಹಾರಾಷ್ಟ್ರದ ಆಂಧ್ ಬುಡಕಟ್ಟು ಜನಾಂಗದ 22 ವರ್ಷದ ಮ್ಯಾರಥಾನ್ ಓಟಗಾರ ಛಗನ್ ಬೊಂಬ್ಲೆ: ಹಿಂಗೋಲಿ ಜಿಲ್ಲೆಯ ಖಂಬಲಾ ಗ್ರಾಮದಲ್ಲಿರುವ ಛಗನ್ ಅವರ ಮನೆ. ಅವರ ಪೋಷಕರು ಜೀವನೋಪಾಯಕ್ಕಾಗಿ ಕೃಷಿ ಕೂಲಿಯಿಂದ ಬರುವ ಸಂಪಾದನೆಯನ್ನು ಅವಲಂಬಿಸಿದ್ದಾರೆ

ಖಂಬಲಾ ಗ್ರಾಮದಲ್ಲಿರುವ ಛಗನ್ ಅವರ ಒಂದು ಕೋಣೆಯ ಮನೆ ಪದಕಗಳು ಮತ್ತು ಟ್ರೋಫಿಗಳಿಂದ ತುಂಬಿದೆ. ಅವರ ಪೋಷಕರು ಅವರ ಪದಕಗಳು ಮತ್ತು ಪ್ರಮಾಣಪತ್ರಗಳ ಬಗ್ಗೆ ಅಪಾರ ಹೆಮ್ಮೆಯನ್ನು ಹೊಂದಿದ್ದಾರೆ. "ನಾವು ನಾ ರಿ [ಅನಕ್ಷರಸ್ಥ] ಜನರು. ನನ್ನ ಮಗ ಓಡುವ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾನೆ" ಎಂದು 60 ವರ್ಷದ ಮಾರುತಿ ಹೇಳುತ್ತಾರೆ. "ಇದು ನಮ್ಮ ಪಾಲಿಗೆ ಯಾವುದೇ ಚಿನ್ನಕ್ಕಿಂತಲೂ ಹೆಚ್ಚು ಅಮೂಲ್ಯವಾದುದು" ಎಂದು ಛಗನ್ ಅವರ 56 ವರ್ಷದ ತಾಯಿ ಭಾಗೀರತ ತಮ್ಮ ಸಣ್ಣ ಮಣ್ಣಿನ ಮನೆಯ ನೆಲದ ಮೇಲೆ ಹರಡಿರುವ ಪದಕಗಳು ಮತ್ತು ಪ್ರಮಾಣಪತ್ರಗಳನ್ನು ತೋರಿಸುತ್ತಾ ನಗುತ್ತಾರೆ.

ಛಗನ್‌ ಹೇಳುತ್ತಾರೆ, “ನಾನು ದೊಡ್ಡ ಗುರಿಗಳಿಗಾಗಿ ತಯಾರಾಗುತ್ತಿದ್ದೇನೆ. ನಾನು ಒಲಂಪಿಯನ್‌ ಆಗಬೇಕು.” ಅವರ ದನಿಯಲ್ಲಿ ದೃಢನಿಶ್ಚಯದ ಅಲೆಗಳಿವೆ. ಆದರೆ ಇದಕ್ಕಾಗಿ ಅವರು ಎದುರಿಸಬೇಕಿರುವ ಅಡೆತಡೆಗಳ ಕುರಿತೂ ತಿಳಿದಿದೆ. “ನಮಗೆ ಕನಿಷ್ಟ ಮೂಲಭೂತ ಕ್ರೀಡಾ ಸೌಕರ್ಯಗಳಾದರೂ ಸಿಗಬೇಕು. ಒಬ್ಬ ಓಟಗಾರ ಗಳಿಸಬಹುದಾದ ಅತ್ಯುತ್ತಮ ಅಂಕವೆಂದರೆ ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ಕ್ರಮಿಸುವುದು. ಡಾಂಬರು ರಸ್ತೆಯಲ್ಲಿ ಓಡುವದಕ್ಕೆ ಹಿಡಿಯುವ ಸಮಯಕ್ಕೂ, ಸಿಂಥೆಟಿಕ್‌ ಟ್ರ್ಯಾಕಿನಲ್ಲಿ ಓಡುವುದಕ್ಕೆ ಹಿಡಿಯುವ ಸಮಯಕ್ಕೂ ಬಹಳ ವ್ಯತ್ಯಾಸವಿದೆ. ಇದರ ಪರಿಣಾಮವಾಗಿ ನಮಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆ ಹೊಂದುವುದಕ್ಕೆ ಕಷ್ಟವಾಗುತ್ತದೆ” ಎಂದು ಅವರು ವಿವರಿಸುತ್ತಾರೆ.

ಪರ್ಭಾನಿಯ ಯುವ ಕ್ರೀಡಾಪಟುಗಳು ಸ್ಟ್ರೆಂಥ್‌ ಟ್ರೈನಿಂಗಿಗಾಗಿ ಎರಡು ಡಂಬಲ್ಗಳು ಮತ್ತು ನಾಲ್ಕು ಪಿವಿಸಿ ಜಿಮ್ ಪ್ಲೇಟುಗಳನ್ನು ರಾಡ್‌ ಜೊತೆ ಉಪಕರಣಗಳಾಗಿ ಹೊಂದಿದ್ದಾರೆ. "ಪರ್ಭಾನಿಯಲ್ಲಿ ಅಥವಾ ಮರಾಠಾವಾಡದಾದ್ಯಂತ ಒಂದೇ ಒಂದು ರಾಜ್ಯ ಅಕಾಡೆಮಿ ಇಲ್ಲ" ಎಂದು ರವಿ ದೃಢಪಡಿಸುತ್ತಾರೆ.

ಈ ಕುರಿತು ಭರವಸೆಗಳು ಮತ್ತು ನೀತಿಗಳು ಹೇರಳವಾಗಿವೆ. 2012ರ ರಾಜ್ಯ ಕ್ರೀಡಾ ನೀತಿಯು ಈಗ 10 ವರ್ಷಗಳಷ್ಟು ಹಳೆಯದಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯಗಳ ಭರವಸೆ ನೀಡಿತ್ತು. ಖೇಲೋ ಇಂಡಿಯಾ ನಂತರ ಮಹಾರಾಷ್ಟ್ರ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಒಂದರಂತೆ 36 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲು 3.6 ಕೋಟಿ ರೂ ಪಡೆದಿತ್ತು.

Left: Chhagan participates in big and small marathons at city, taluka, state and country level. His prize money supports the family. Pointing at his trophies his mother Bhagirata says, 'this is more precious than any gold.'
PHOTO • Jyoti
Right: Chhagan with his elder brother Balu (pink shirt) on the left and Chhagan's mother Bhagirata and father Maruti on the right
PHOTO • Jyoti

ಎಡ: ಛಗನ್ ನಗರ, ತಾಲ್ಲೂಕು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮತ್ತು ಸಣ್ಣ ಮ್ಯಾರಥಾನ್ ಗಳಲ್ಲಿ ಭಾಗವಹಿಸುತ್ತಾರೆ. ಅವರ ಬಹುಮಾನದ ಹಣವು ಕುಟುಂಬ ಪೋಷಣೆಗೆ ಒದಗುತ್ತದೆ . ಅವ ಟ್ರೋಫಿಗಳನ್ನು ತೋರಿಸುತ್ತಾ ಅವನ ತಾಯಿ ಭಾಗೀರತ ಹೇಳುತ್ತಾ ರೆ , 'ಇದು ನಮ್ಮ ಪಾಲಿಗೆ ಚಿನ್ನಕ್ಕಿಂತ ಲೂ ಹೆಚ್ಚು ಅಮೂಲ್ಯವಾದುದು.' ಬಲ: ಎಡಭಾಗದಲ್ಲಿ ಹಿರಿಯ ಸಹೋದರ ಬಾಲು ಮತ್ತು ಛಗನ್ ಮತ್ತು ಎಡಭಾಗದಲ್ಲಿ ಛಗನ್ ಅವರ ತಾಯಿ ಭಾಗೀರತ ಮತ್ತು ತಂದೆ ಮಾರುತಿ ಇದ್ದಾರೆ

2023ರ ಜನವರಿಯಲ್ಲಿ ಮಹಾರಾಷ್ಟ್ರ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗ್ರಾಮೀಣ ಮಹಾರಾಷ್ಟ್ರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ 122 ಹೊಸ ಕ್ರೀಡಾ ಸಂಕೀರ್ಣಗಳನ್ನು ರಚಿಸುವುದಾಗಿ ಘೋಷಿಸಿದ್ದು ಅವು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ.

ಪರ್ಭಾನಿಯ ಜಿಲ್ಲಾ ಕ್ರೀಡಾ ಅಧಿಕಾರಿ ನರೇಂದ್ರ ಪವಾರ್ ಅವರು ದೂರವಾಣಿಯಲ್ಲಿ ಮಾತನಾಡುತ್ತಾ, "ನಾವು ಅಕಾಡೆಮಿಯನ್ನು ನಿರ್ಮಿಸಲು ಸ್ಥಳವನ್ನು ಹುಡುಕುತ್ತಿದ್ದೇವೆ. ಮತ್ತು ತಾಲ್ಲೂಕು ಮಟ್ಟದ ಕ್ರೀಡಾ ಸಂಕೀರ್ಣದ ನಿರ್ಮಾಣ ನಡೆಯುತ್ತಿದೆ.” ಎಂದು ತಿಳಿಸಿದರು.

ಅಕಾಡೆಮಿಯಲ್ಲಿರುವ ಕ್ರೀಡಾಪಟುಗಳಿಗೆ ಯಾವುದನ್ನು ನಂಬಬೇಕೆಂದು ತಿಳಿಯುತ್ತಿಲ್ಲ. "ನಾವು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದಾಗಲಷ್ಟೇ ರಾಜಕಾರಣಿಗಗಳು ಹಾಗೂ ನಾಗರಿಕರು ನಮ್ಮ ಉಪಸ್ಥಿತಿಯನ್ನು ಗುರುತಿಸುವುದು ದುಃಖಕರವಾದುದು" ಎಂದು ಛಗನ್ ಹೇಳುತ್ತಾರೆ. "ಆದರೆ ಅಲ್ಲಿಯವರೆಗೆ ನಾವು ಅಗೋಚರರಾಗಿಯೇ ಇರುತ್ತೇವೆ; ಮೂಲಭೂತ ಕ್ರೀಡಾ ಮೂಲಸೌಕರ್ಯಕ್ಕಾಗಿ ನಮ್ಮ ಹೋರಾಟವು ಕಾಣದಂತೆ ಉಳಿದುಹೋಗಿದೆ. ನಮ್ಮ ಒಲಿಂಪಿಯನ್ ಕುಸ್ತಿಪಟುಗಳು ನ್ಯಾಯಕ್ಕಾಗಿ ಹೋರಾಡುತ್ತಿರುವುದನ್ನು ಮತ್ತು ಅವರಿಗೆ ಬೆಂಬಲ ನೀಡುವ ಬದಲು ಅವರನ್ನು ಕ್ರೂರವಾಗಿ ನಡೆಸಿಕೊಳ್ಳುವುದನ್ನು ನೋಡಿದಾಗ ಮೇಲಿನ ಅಭಿಪ್ರಾಯ ನನ್ನೊಳಗೆ ಇನ್ನಷ್ಟು ಗಟ್ಟಿಯಾಗುತ್ತದೆ.”

“ಆದರೆ ಕ್ರೀಡಾಪಟುಗಳು ಹೋರಾಟಗಾರರು. ಅದು ಸಿಂಥೆಟಿಕ್ ರನ್ನಿಂಗ್ ಟ್ರ್ಯಾಕ್ ಕುರಿತಾಗಿರಲಿ ಅಥವಾ ಅಪರಾಧದ ವಿರುದ್ಧವಾಗಿರಲಿ, ನಾವು ನ್ಯಾಯಕ್ಕಾಗಿ ನಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತೇವೆ" ಎಂದು ಅವರು ಮುಗುಳ್ನಗೆಯೊಂದಿಗೆ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jyoti

ଜ୍ୟୋତି ପିପୁଲ୍‌ସ ଆର୍କାଇଭ ଅଫ୍‌ ରୁରାଲ ଇଣ୍ଡିଆର ଜଣେ ବରିଷ୍ଠ ସାମ୍ବାଦିକ ଏବଂ ପୂର୍ବରୁ ସେ ‘ମି ମରାଠୀ’ ଏବଂ ‘ମହାରାଷ୍ଟ୍ର1’ ଭଳି ନ୍ୟୁଜ୍‌ ଚ୍ୟାନେଲରେ କାମ କରିଛନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Jyoti
Editor : Pratishtha Pandya

ପ୍ରତିଷ୍ଠା ପାଣ୍ଡ୍ୟା ପରୀରେ କାର୍ଯ୍ୟରତ ଜଣେ ବରିଷ୍ଠ ସମ୍ପାଦିକା ଯେଉଁଠି ସେ ପରୀର ସୃଜନଶୀଳ ଲେଖା ବିଭାଗର ନେତୃତ୍ୱ ନେଇଥାନ୍ତି। ସେ ମଧ୍ୟ ପରୀ ଭାଷା ଦଳର ଜଣେ ସଦସ୍ୟ ଏବଂ ଗୁଜରାଟୀ ଭାଷାରେ କାହାଣୀ ଅନୁବାଦ କରିଥାନ୍ତି ଓ ଲେଖିଥାନ୍ତି। ସେ ଜଣେ କବି ଏବଂ ଗୁଜରାଟୀ ଓ ଇଂରାଜୀ ଭାଷାରେ ତାଙ୍କର କବିତା ପ୍ରକାଶ ପାଇଛି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru