ಅಂದು ಮಧ್ಯಾಹ್ನವಾಗುವುದರಲ್ಲಿತ್ತು. ನೃತ್ಯಗಾರರಾದ ಗೋಲಾಪಿ ಗೋಯಲಿ ಸಿದ್ಧಗೊಂಡು ತಮ್ಮ ಮನೆಯಲ್ಲಿ ಕಾಯುತ್ತಿದ್ದರು. ಅವರು ತಾನು ತೊಟ್ಟಿದ್ದ ಹಳದಿ ಪಟ್ಟಿಯ ಡೋಖೋನಾವನ್ನು ಸರಿಹೊಂದಿಸುತ್ತಿರುವಾಗ ಶಾಲೆಗೆ ಹೋಗುವ ಎಂಟು ಹುಡುಗಿಯರು ಅಲ್ಲಿಗೆ ಬಂದರು. ಅಸ್ಸಾಂನ ಬೋಡೋ ಸಮುದಾಯಕ್ಕೆ ಸೇರಿದ ಈ ಮಕ್ಕಳು ಸಾಂಪ್ರದಾಯಿಕವಾದ ಡೋಖೋನಾ ಮತ್ತು ಕೆಂಪು ಅರಣೋಯಿ (ಶಾಲು) ಧರಿಸಿದ್ದಾರೆ.
"ನಾನು ಈ ಯುವತಿಯರಿಗೆ ನಮ್ಮ ಬೋಡೋ ನೃತ್ಯಗಳನ್ನು ಕಲಿಸುತ್ತೇನೆ" ಎಂದು ಸ್ವತಃ ಬೋಡೋ ಸಮುದಾಯಕ್ಕೆ ಸೇರಿದ ಬಕ್ಸಾ ಜಿಲ್ಲೆಯ ಗೋಲ್ಗಾಂವ್ ಗ್ರಾಮದ ನಿವಾಸಿ ಗೋಲಾಪಿ ಹೇಳುತ್ತಾರೆ.
ಕೊಕ್ರಜಾರ್, ಉಡಲ್ಗುರಿ, ಚಿರಾಂಗ್ ಹಾಗೂ ಬಕ್ಸಾ ಜಿಲ್ಲೆ ಸೇರಿದರೆ ಬೋಡೋಲ್ಯಾಂಡ್ ರೂಪುಗೊಳ್ಳುತ್ತದೆ - ಅಧಿಕೃತವಾಗಿ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರಾಂತ್ಯ (ಬಿಟಿಆರ್). ಈ ಸ್ವಾಯತ್ತ ಪ್ರದೇಶದಲ್ಲಿ ಮುಖ್ಯವಾಗಿ ಬೋಡೋ ಜನರು ವಾಸಿಸುತ್ತಿದ್ದಾರೆ, ಅವರನ್ನು ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ. ಬಿಟಿಆರ್ ಭೂತಾನ್ ಮತ್ತು ಅರುಣಾಚಲ ಪ್ರದೇಶದ ತಪ್ಪಲಿನ ಕೆಳಗೆ ಬ್ರಹ್ಮಪುತ್ರ ನದಿಯ ದಡದಲ್ಲಿದೆ.
"ಅವರು ಸ್ಥಳೀಯ ಉತ್ಸವಗಳು ಮತ್ತು ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡುತ್ತಾರೆ" ಎಂದು ಬದುಕಿನ ಮೂರನೇ ದಶಕದ ಆರಂಭದಲ್ಲಿರುವ ಗೋಲಾಪಿ ಹೇಳುತ್ತಾರೆ. ಉಪೇಂದ್ರ ನಾಥ್ ಬ್ರಹ್ಮ ಟ್ರಸ್ಟ್ (ಯುಎನ್‌ಬಿಟಿ) ನೀಡುವ 19ನೇ ಯುಎನ್ ಬ್ರಹ್ಮ ಸೋಲ್ಜರ್ ಆಫ್ ಹ್ಯುಮಾನಿಟಿ ಪ್ರಶಸ್ತಿಯನ್ನು 2022ರ ನವೆಂಬರ್ ತಿಂಗಳಿನಲ್ಲಿ ಪರಿ ಸ್ಥಾಪಕ ಸಂಪಾದಕ, ಪತ್ರಕರ್ತ ಪಿ ಸಾಯಿನಾಥ್ ಅವರಿಗೆ ನೀಡಲಾಗಿತ್ತು. ಅಂದು ಅವರ ಗೌರವಾರ್ಥವಾಗಿ ಗೋಲಾಪಿ ತಮ್ಮ ಮನೆಯಲ್ಲೇ ನೃತ್ಯ ಪ್ರದರ್ಶನವನ್ನು ಆಯೋಜಿಸಿದ್ದರು.


