ಪಾಕಿಸ್ತಾನದ ಗಡಿಯಿಂದ ಸುಮಾರು ನಾಲ್ಕು ಕಿಲೊಮೀಟರ್ ದೂರದಲ್ಲಿ ಇರುವ ತನ್ನ ಅಣ್ಣನ ಗ್ಯಾರೇಜಿನಲ್ಲಿ ಕೆಲಸ ಮಾಡುವ ಶಂಶೇರ್ ಸಿಂಗ್ ತನ್ನ ಉಪಕರಣಗಳ ಕಡೆ ನೋಡುತ್ತಾ ಕುಳಿತಿದ್ದರು. ಅವರು ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆಯಾದರೂ ಇದು ಅವರ ಆಯ್ಕೆಯ ಕೆಲಸವೇನಲ್ಲ.
35 ವರ್ಷದ ಶಂಶೇರ್ ಮೂರನೇ ತಲೆಮಾರಿನ ಪೋರ್ಟರ್ (ಕೂಲಿ) ಆಗಿದ್ದು, ಅವರು ಒಂದು ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಅಟ್ಟಾರಿ-ವ್ಯಾಗಾ ಗಡಿಯಲ್ಲಿ ಕೆಲಸ ಮಾಡಿದ್ದರು. ಅವರ ಕುಟುಂಬವು ರಾಜ್ಯದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಗಳಡಿ ಪಟ್ಟಿ ಮಾಡಲಾಗಿರುವ ಪ್ರಜಾಪತಿ ಸಮುದಾಯಕ್ಕೆ ಸೇರಿದೆ.
ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್ ರಾಜ್ಯದ ಈ ಪ್ರದೇಶದಲ್ಲಿ, ಸಿಮೆಂಟ್, ಜಿಪ್ಸಮ್ ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಹೊತ್ತ ನೂರಾರು ಟ್ರಕ್‌ಗಳು ಒಮ್ಮೆ ಪ್ರತಿದಿನ ಭಾರತಕ್ಕೆ ಆಗಮಿಸುತ್ತವೆ. ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಸೋಯಾಬೀನ್ ಸಾರ ಮತ್ತು ಹತ್ತಿ ನೂಲು ಇತ್ಯಾದಿ ಸರಕುಗಳನ್ನು ಸಾಗಿಸುವ ಟ್ರಕ್‌ಗಳು ಇದೇ ರೀತಿ ಪಾಕಿಸ್ತಾನದತ್ತ ಸಾಗುತ್ತವೆ.
ಇಲ್ಲಿ "ಗಡಿಗೆ ಲಾರಿಗಳಲ್ಲಿ ಬಂದ ಸಾಮಾನು ಸರಂಜಾಮುಗಳನ್ನು ಇಳಿಸುವ ಮತ್ತು ತುಂಬುವ ಕೆಲಸವನ್ನು ಮಾಡುತ್ತಿದ್ದ" ಸುಮಾರು 1,500 ಕೂಲಿಗಳಲ್ಲಿ ಶಂಶೇರ್ ಕೂಡಾ ಒಬ್ಬರಾಗಿದ್ದರು. ಈ ಪ್ರದೇಶದಲ್ಲಿ ಯಾವುದೇ ಕಾರ್ಖಾನೆ ಅಥವಾ ಉದ್ದಿಮೆಗಳು ಇಲ್ಲ. ಹೀಗಾಗಿ ಇಲ್ಲಿನ 20 ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳ ಜನರು ಈ ಅಟ್ಟಾರಿ-ವಾಘಾ ಗಡಿಗೆ ಬರುವ ಲಾರಿಗಳಿಂದ ಸಿಗುತ್ತಿದ್ದ ಕೂಲಿ ಕೆಲಸವನ್ನೇ ಅವಲಂಬಿಸಿದ್ದರು.









