“ಆ ದಿನ ಮಧ್ಯಾಹ್ನ ಅದು ಇದ್ದಕ್ಕಿದ್ದ ಹಾಗೆ ಘಟಿಸಿತು!”
“ನನಗೆ ಗೊತ್ತು ಚಂಡಮಾರುತ ಬಹಳ ತೀಕ್ಷ್ಣವಾಗಿತ್ತು. ಅಲ್ಲವೇ?
“ಹಾಗೆ ನೋಡಿದರೆ ಮರವೂ ಸಾಕಷ್ಟು ಹಳೆಯದು. ಇದು ನಾವು ಈ ಸೊಸೈಟಿಗೆ ಬಂದಾಗಿನಿಂದ ಇಲ್ಲೇ ಇದೆ.”
“ಅದೇನೇ ಇದ್ರೂ ಆ ಒಂದು ಬದಿಗೆ ವಾಲಿಕೊಂಡಂತೆ ಇದ್ದ ಮರವನ್ನು ಕಂಡರೆ ನನಗೆ ಇಷ್ಟವಿರಲಿಲ್ಲ. ಅದರ ನೆರಳಿನಡಿಯಿದ್ದ ಅಬ್ದುಲ್ಲನ ಟಾಪ್ರಿ ಕೂಡಾ ದೊಡ್ಡ ರಗಳೆಯಾಗಿತ್ತು.ರಾತ್ರಿಯಾದ್ರೆ ಬಾವಲಿಗಳ ಸದ್ದು, ಹಗಲಿನಲ್ಲಿ ಮಕ್ಕಳ ಕೂಗಾಟ ಸಾಕಾಗಿ ಹೋಗಿತ್ತು ಆ ಮರದಿಂದ ನನಗೆ.”
“ಎಂತಹ ಗದ್ದಲ ಅಲ್ವ? ಉಫ್!”
ಪುರಸಭೆಯ ತುರ್ತು ಸಹಾಯ ಬಂದು ಅಪಾರ್ಟ್ಮೆಂಟ್ ಗೇಟಿಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ 36 ಗಂಟೆಗಳು ಕಳೆದಿವೆ. ಆದರೆ ಜನರು ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ: ಎಷ್ಟು ವಿಚಿತ್ರ, ಎಷ್ಟು ಆಘಾತಕಾರಿ, ಎಷ್ಟು ಹಠಾತ್, ಓಹ್ ತುಂಬಾ ಭಯಾನಕ, ದೊಡ್ಡ ಅದೃಷ್ಟ ಹೀಗೆ ಹಲವು ಮಾತುಗಳು. ಕೆಲವೊಮ್ಮೆ ಎಲ್ಲರೂ ತನ್ನಂತೆಯೇ ಜಗತ್ತನ್ನು ನೋಡುತ್ತಾರೆಯೇ ಎಂದು ಅವಳು ಯೋಚಿಸುತ್ತಾಳೆ. ಆ ಮಧ್ಯಾಹ್ನ ಅವನು ಅಲ್ಲಿದ್ದನೆಂದು ಅವರಿಗೆ ತಿಳಿದಿತ್ತೇ? ಅವನು ಸಾಯುವುದನ್ನು ಯಾರಾದರೂ ನೋಡಿದ್ದಾರಾ?
ಅಬ್ದುಲ್ ಚಾಚಾ ಅವರ ಅಂಗಡಿಯ ಬಳಿ ಆಟೋದಿಂದ ಇಳಿದಾಗ ಮಳೆ ಇನ್ನೂ ಜೋರಾಗಿತ್ತು. ರಸ್ತೆಯಲ್ಲಿ ನೀರು ನಿಂತಿತ್ತು. ಆಟೋದವ ಮುಂದೆ ಹೋಗಲು ನಿರಾಕರಿಸಿದ. ಚಾಚಾ ಅವಳನ್ನು ಗುರುತಿಸಿ, ಛತ್ರಿಯೊಂದಿಗೆ ಓಡಿ ಬಂದು ಒಂದು ಮಾತನ್ನೂ ಆಡದೆ ಅದನ್ನು ಅವಳಿಗೆ ಹಸ್ತಾಂತರಿಸಿದನು. ಅವನು ತಲೆಯಾಡಿಸಿದನು. ಅವಳು ಅದನ್ನು ಅರ್ಥಮಾಡಿಕೊಂಡಳು, ಮುಗುಳ್ನಗೆಯೊಂದಿಗೆ ಅದನ್ನು ಸ್ವೀಕರಿಸಿದಳು, ಹಿಂತಿರುಗಿ ತಲೆಯಾಡಿಸಿದಳು ಮತ್ತು ಜಲಾವೃತವಾದ ರಸ್ತೆಯನ್ನು ದಾಟಿ ಸ್ವಲ್ಪ ದೂರದಲ್ಲಿ ಅಪಾರ್ಟ್ಮೆಂಟ್ ತಲುಪಲು ಪ್ರಾರಂಭಿಸಿದಳು. ಹವಾಮಾನವು ಬದಲಾಗುತ್ತಿದೆ ಎನ್ನುವುದರ ಕುರಿತು ಅವಳು ಒಂದು ನಿಮಿಷವೂ ಯೋಚಿಸಲಿಲ್ಲ.
ಒಂದು ಗಂಟೆಯ ನಂತರ ದೊಡ್ಡ ಸದ್ದನ್ನು ಕೇಳಿ ಅವಳು ಕಿಟಕಿಯ ಬಳಿಗೆ ಧಾವಿಸಿದಾಗ ಅವಳಿಗೆ ಯಾವುದೋ ಹೊಸ ಕಾಡು ಮುಖ್ಯ ರಸ್ತೆಗೆ ಧಾವಿಸಿದಂತೆ ಭಾಸವಾಯಿತು. ಅವಳು ಎಲ್ಲವನ್ನೂ ಗಮನಿಸಲು ಸ್ವಲ್ಪ ಸಮಯ ಹಿಡಿಯಿತು, ದೂರದಲ್ಲಿದ್ದ ಹಳೆಯ ಮರ ಈಗ ಬಿದ್ದಿದೆ. ಮತ್ತು ಮರದ ಸಂಧಿಯಿಂದ ಬಿಳಿ ಪಾರಿವಾಳದಂತೆ ಅವರ ತಲೆ ಬುರುಡೆ ಇಣುಕಿ ನೋಡುತ್ತಿತ್ತು.
ಒಂದು ಹಳೆಯ ಮರ
ಸೂರ್ಯನ ಕಿರಣಗಳು
ಎಲೆಯ ಮೇಲೆ ಪ್ರತಿಫಲಿಸುವುದು
ಊಸರವಳ್ಳಿಯೊಂದು
ಕೆಂಪಿನಿಂದ ಹಸಿರು
ಹಸಿರಿನಿಂದ
ಕಿತ್ತಳೆಗೆ
ಕಿತ್ತಳೆಯಿಂದ
ತುಕ್ಕಿನ ಬಣ್ಣಕ್ಕೆ ಬಣ್ಣ ಬದಲಾಯಿಸುವುದನ್ನು
ಯಾರು ನೋಡುತ್ತಾರೆ
ಈಗ...
ಒಂದರ ನಂತರ ಒಂದು
ಎಲೆಯುದುರುವುದರ
ಕುರಿತು
ಯಾರು ತಲೆ
ಕೆಡಿಸಿಕೊಳ್ಳುತ್ತಾರೆ
ಕಾಲದಿಂದ ಕಾಲಕ್ಕೆ
ಬದಲಾಗುವ
ಮರದ ಎಲೆ, ಕೊಂಬೆಗಳ ಆಕಾರ, ಬಣ್ಣ
ಇವುಗಳ ಕುರಿತು ಈಗ
ಯಾರು ಯೋಚಿಸಬಲ್ಲರು
ಅಳಿಲೊಂದು ಮರದ
ಮೇಲೆ
ಉಳಿಸಿ ಹೋದ ಹಲ್ಲಿನ
ಗುರುತು
ಹೇಗೆ ಆಯಿತೆಂದು
ತಿಳಿಯದ
ಮರದ ಕಾಂಡದ ಮೇಲಿನ
ಗುರುತು
ಯಾರು ನೋಡುತ್ತಾರೆ
ಶಿಸ್ತಿನ
ಸಾಲಿನಲ್ಲಿ ಸಾಗುವ ಕಟ್ಟಿರುವೆಗಳ ಸಾಲನ್ನು
ಅವುಗಳ ಮರದ
ಕಾಂಡವನ್ನೇ ಕೊರೆಯುವ
ಆತ್ಮವಿಶ್ವಾಸ
ನೋಡುವ ತಾಳ್ಮೆ ಯಾರಿಗಿದೆ ಈಗ
ಕತ್ತಲಿನಲ್ಲಿ ಮರ
ಕಂಪಿಸುವುದು
ಮರದ
ತಿರುಳುಗಳಲ್ಲಿನ
ಚಂಡಮಾರುತದ ಸೂಚನೆ
ಆಹ್ವಾನಿಸದೆ ಬಂದು
ಟೆಂಟು ಹಾಕಿದ
ಅಣಬೆಗಳ ಗುಂಪು
ಇವನ್ನೆಲ್ಲ ನೋಡಲು
ಯಾರ ಬಳಿ ಸಮಯವಿದೆ?
ನನ್ನ ಬೇರುಗಳ ಆಳದ
ಗ್ರಹಿಕೆ ಯಾರಿಗಿದೆ,
ಅವರ ಕುರುಡು ಅಗೆತದ
ಕೊನೆಯಲ್ಲಿ
ಕೊನೆಯ ಭರವಸೆಯ
ಬಣ್ಣವನ್ನು
ಜಲಚರದ ಕಣ್ಣಿನಲ್ಲಿ
ಹುಡುಕುತ್ತಿದ್ದಾರೆಯೇ?
ಜಾರುವ ಮಣ್ಣಿನಲ್ಲಿ
ಬೀಳದೆ ನಿಲ್ಲುವ
ನನ್ನ ಬಿಗಿ ಹಿಡಿತದ
ಅನುಭವ ಯಾರಿಗಿದೆ
ಕಾಳ್ಗಿಚ್ಚಿಗೆ
ಸುಟ್ಟು
ನನ್ನ ನರಗಳಲ್ಲಿ
ನೆತ್ತರು ಒಣಗುತ್ತಿರುವುದು
ಯಾರಿಗೆ ಕಾಣುವುದು?
ಅವರಿಗೆ ಕಾಣುವುದು
ನನ್ನ ಪತನ ಮಾತ್ರವೇ.
ಈ ಕವಿತೆಯನ್ನು ಮೊದಲು ಕೌಂಟ್ ಎವೆರಿ ಬ್ರೀತ್ ಎಂಬ ಹವಾಮಾನ ಕುರಿತಾದ ಸಂಕಲನದಲ್ಲಿ ಪ್ರಕಟಿಸಲಾಯಿತು. ಸಂ. ವಿನಿತಾ ಅಗರ್ವಾಲ್, ಹವಾಕಲ್ ಪಬ್ಲಿಷರ್ಸ್, 2023.
ಅನುವಾದ: ಶಂಕರ. ಎನ್. ಕೆಂಚನೂರು