ಎಲೆಯಡಿಕೆ ತಿನ್ನುತ್ತಿದ್ದ ಅವರು, “ಖವ್ವಾಲಿಯನ್ನು ಕೇಳುವುದೆಂದರೆ ಇಷ್ಟವಿಲ್ಲ ಎನ್ನುವವರು ಇದ್ದರೆ ನನಗೆ ತೋರಿಸಿ! ಇದು ಎಲ್ಲರಿಗೂ ಇಷ್ಟವಾಗುವ ಕಲೆ” ಎಂದರು. ನಂತರ ಬಾಯಲ್ಲಿದ್ದ ಎಲೆಯಡಿಕೆ ಕರಗುತ್ತಿದ್ದಂತೆ, ಅವರು ತನ್ನ ಈ ಕಲೆಯ ಕುರಿತಾದ ಆಸಕ್ತಿಯ ಕುರಿತಾಗಿ ಮಾತನಾಡುತ್ತಾ, “ಪಬ್ಲಿಕ್ ಕೋ ಖುಷ್ ಕರ್ನೇ ಕಾ. ಬಸ್ [ಜನರನ್ನು ಖುಷಿಪಡಿಸಬೇಕು, ಅಷ್ಟೇ]” ಎಂದು ಹೇಳಿದರು.
“ಪಾಂವೋ ಮೇ ಬೇಡಿ, ಹಾತೋ ಮೇ ಕಡಾ ರೆಹನೇ ದೋ, ಉಸ್ಕೋ ಸರ್ಕಾರ್ ಕೀ ಚೌಕಟ್ ಪೇ ಪಡಾ ರಹನೇ ದೋ…” ಎನ್ನುವ ಜನಪ್ರಿಯ ಹಿಂದಿ ಚಿತ್ರದ ಹಾಡೊಂದು ನನಗೆ ನೆನಪಿಗೆ ಬಂತು.
ಈ ದರ್ಗಾಕ್ಕೆ ಬರುವ ಭಕ್ತರು ಅವರು ತಮ್ಮ ಖವ್ವಾಲಿ ಗಾಯನಕ್ಕೆ ಬಾಲಿವುಡ್ ಸಿನೆಮಾ ಸಂಗೀತ ಬೆರೆಸುವುದಕ್ಕೆ ವಿರೋಧಿಸುವುದಿಲ್ಲ. ಇನ್ನೂ ಕೆಲವರು ಅವರ ಹಾಡನ್ನು ಮೆಚ್ಚಿ 10, 20 ರೂಪಾಯಿಗಳಷ್ಟು ಮನಸ್ಸಿಗೆ ಬಂದಂತೆ ಹಣವನ್ನು ನೀಡಿ ಮುಂದಕ್ಕೆ ಸಾಗುತ್ತಾರೆ. ಇಲ್ಲಿನ ಸಂತನ ದರ್ಶನಕ್ಕೆ ಬರುವ ಹಾಗೂ ಚಾದರ್ ಅರ್ಪಿಸುವ ಭಕ್ತರಿಗೆ ದರ್ಗಾ ನೋಡಿಕೊಳ್ಳುವವರು ತಿಲ್ಗುಲ್ (ಎಳ್ಳು ಮತ್ತು ಬೆಲ್ಲ) ನೀಡುತ್ತಾರೆ. ಒಬ್ಬ ಮುಜಾವರ್ ದುಷ್ಟ ಶಕ್ತಿಗಳನ್ನು ಓಡಿಸಲೆಂದು ಭಕ್ತರ (ಸವಾಲಿಗಳು) ಹೆಗಲು ಮತ್ತು ಬೆನ್ನಿನ ಮೇಲೆ ನವಿಲು ಗರಿಯಿಂದ ತಟ್ಟುತ್ತಾರೆ. ಸಂತನಿಗೆ (ಪೀರ್) ಒಂದಷ್ಟು ಹಣವನ್ನು ಹಾಕಿದರೆ ಒಂದಷ್ಟನ್ನು ಗಾಯಕನಿಗೂ (ಖವ್ವಾಲ್) ಮೀಸಲಿಡಲಾಗುತ್ತದೆ.
ದರ್ಗಾಕ್ಕೆ ಅನೇಕ ಶ್ರೀಮಂತರು ಭೇಟಿ ನೀಡುತ್ತಾರೆ ಎಂದು ಅಮ್ಜದ್ ಹೇಳುತ್ತಾರೆ. ಸಮಾಧಿಗೆ ಹೋಗುವ ರಸ್ತೆಯಲ್ಲಿ ಚಾದರ್ ಮತ್ತು ಚುನರಿಯನ್ನು ಮಾರಾಟ ಮಾಡುವ ಅನೇಕ ಸಣ್ಣ ಅಂಗಡಿಗಳಿವೆ. ಪೂಜಾ ಸ್ಥಳವು ಸದಾ ಅನೇಕರಿಗೆ ಆಹಾರ ಮತ್ತು ಉದ್ಯೋಗವನ್ನು ನೀಡುತ್ತದೆ.
ಇಲ್ಲಿ ಹಜರತ್ ಪೀರ್ ಖಮರ್ ಅಲಿ ದರ್ವೇಶ್ ತಾರತಮ್ಯ ಮಾಡುವುದಿಲ್ಲ. ದರ್ಗಾದ ಮೆಟ್ಟಿಲುಗಳ ಮೇಲೆ, ಜನರ ಕರುಣೆ ಮತ್ತು ಹಣವನ್ನು ಬಯಸುವ ದುರ್ಬಲ ಬಿಕ್ಷುಕರನ್ನು (ಫಕೀರ) ಕಾಣಬಹುದು. ಒಂಬತ್ತು ಗಜಗಳ ಸೀರೆಯನ್ನು ಧರಿಸಿದ ವಯಸ್ಸಾದ ಹಿಂದೂ ಮಹಿಳೆಯೊಬ್ಬರು ಹಜರತ್ ಖಮರ್ ಅಲಿ ದರ್ವೇಶಿಯ ಆಶೀರ್ವಾದ ಪಡೆಯಲು ಬಂದಿದ್ದರು. ಅಂಗವಿಕಲರು, ಅನಾಥರು ಮತ್ತು ಖವ್ವಾಲ್ ಗಾಯಕರು ಎಲ್ಲರೂ ಅವನ ಕರುಣೆಯಲ್ಲಿ ಬದುಕು ನಡೆಸುತ್ತಿದ್ದಾರೆ.
ಆದರೆ ಅಮ್ಜದ್ ಭಿಕ್ಷುಕರಲ್ಲ. ಅವರೊಬ್ಬ ಕಲಾವಿದ. ಬೆಳಗ್ಗೆ 11 ಗಂಟೆಗೆ ದರ್ಗಾಕ್ಕೆ ಬಂದು ಸಮಾಧಿಯ ಮುಂದೆ ಜಾಗ ಮಾಡಿಕೊಂಡು ತಮ್ಮ ʼವೇದಿಕೆʼಯನ್ನು ಸ್ಥಾಪಿಸುತ್ತಾರೆ. ನಂತರ ಮೆಲ್ಲಗೆ ಆದರೆ ಸ್ಥಿರವಾಗಿ ಭಕ್ತರ ಬರುವಿಕೆ ಶುರುವಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ, ಸಮಾಧಿಯ ಸುತ್ತಲಿನ ಬಿಳಿ ಅಮೃತಶಿಲೆ ಮತ್ತು ಗ್ರಾನೈಟ್ ನೆಲವು ಬಿಸಿಯಾಗಿರುತ್ತದೆ. ಭಕ್ತರು ಕಲ್ಲಿನ ಸುಡುವ ಬಿಸಿಯಿಂದ ತಮ್ಮ ಪಾದಗಳನ್ನು ರಕ್ಷಿಸಿಕೊಳ್ಳಲು ಜಿಗಿದು ಓಡುತ್ತಾರೆ. ಇಲ್ಲಿಗೆ ಬರುವವರ ಹಿಂದೂಗಳ ಸಂಖ್ಯೆ ಮುಸ್ಲಿಮರ ಸಂಖ್ಯೆಯನ್ನೇ ಮೀರಿಸುತ್ತದೆ.
ಮಹಿಳೆಯರಿಗೆ ಮಜರ್ (ಸಂತನ ಸಮಾಧಿ) ಬಳಿ ಹೋಗಲು ಅನುಮತಿಯಿಲ್ಲ. ಹೀಗಾಗಿ ಇಲ್ಲಿ ಮುಸ್ಲಿಂ ಮಹಿಳೆಯರು ಸೇರಿದಂತೆ ಅನೇಕರು ಜಗಲಿಯಲ್ಲಿ ಕುಳಿತು ಕಣ್ಣು ಮುಚ್ಚಿ ಕುರಾನಿನ ಆಯತ್ ಪಠಿಸುತ್ತಾರೆ. ಅವರ ಪಕ್ಕದಲ್ಲಿ ಹತ್ತಿರದ ಹಳ್ಳಿಯ ಹಿಂದೂ ಮಹಿಳೆಯ ಮೇಲೆ ಆತ್ಮವೊಂದು ಆಹಾವನೆಯಾಗಿತ್ತು. ಇದನ್ನು "ಪೀರಾಚಾ ವಾರಾ [ಪೀರ್ ನ ಆತ್ಮ]" ಎಂದು ಜನರು ಹೇಳುತ್ತಿದ್ದರು.