ಮಣಿರಾಮನ ಜೀವವನ್ನು ಉಳಿಸಿದ್ದು ವತ್ಸಲಾ.
“ಅಂದು ನಾವು ಪಾಂಡವ್ ಜಲಪಾತದ ಬಳಿ ಹೋಗಿದ್ದೆವು. ವತ್ಸಲಾ ಮೇಯಲು ಹೋಗಿದ್ದಳು. ನಾನು ಅವಳನ್ನು ಹುಡುಕಿಕೊಂಡು ಹೋಗುವ ದಾರಿಯಲ್ಲೇ ನನಗೆ ಹುಲಿ ಎದುರಾಗಿತ್ತು” ಎಂದು ಮಣಿರಾಮ್ ಕತೆ ಆರಂಭಿಸುತ್ತಾರೆ.
ನಾನು ಸಹಾಯಕ್ಕಾಗಿ ಕೂಗಿಕೊಂಡ ತಕ್ಷಣ ಓಡಿ ಬಂದ ವತ್ಸಲಾ ತನ್ನ ಕಾಲನ್ನು ಬಾಗಿಸಿ ನನ್ನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡಳು. ನಾನು ಕುಳಿತುಕೊಂಡ ನಂತರ ಅವಳು ತನ್ನ ಕಾಲಿನಿಂದ ಮರವೊಂದನ್ನು ಅಲ್ಲಾಡಿಸಿ ಬೀಳಿಸಿದಳು. ಟೈಗರ್ ಭಾಗ್ ಗಯಾ [ಇದರಿಂದ ಭಯಗೊಂಡ ಹುಲಿ ಅಲ್ಲಿಂದ ಕಾಲ್ಕಿತ್ತಿತು]” ಎಂದು ನಿರಾಳತೆಯ ದನಿಯಲ್ಲಿ ಈ ಮಾವುತ (ಮಹವತ್) ಹೇಳುತ್ತಾರೆ.
ಪನ್ನಾ ಹುಲಿ ಮೀಸಲು ಪ್ರದೇಶದ ಹಿರಿಯ ಜೀವವಾದ ವತ್ಸಲಾ 100 ವರ್ಷಗಳಿಗಿಂತಲೂ ಹಿರಿಯಳು ಎಂದು ಹೇಳಲಾಗುತ್ತದೆ - ಇದು ವಿಶ್ವದ ಅತ್ಯಂತ ಹಿರಿಯ ಜೀವಂತ ಆನೆ. "ಕೆಲವರು ಆಕೆಗೆ 110 ವರ್ಷ ಎಂದು ಹೇಳುತ್ತಾರೆ, ಕೆಲವರು ಆಕೆಗೆ 115 ವರ್ಷ ಎಂದು ಹೇಳುತ್ತಾರೆ. ಇದು ನಿಜವಿರಬಹುದು ಎನ್ನಿಸುತ್ತದೆ" ಎಂದು 1996ರಿಂದ ವತ್ಸಲಾಳ ಆರೈಕೆ ಮಾಡುತ್ತಿರುವ ಗೊಂಡ್ ಆದಿವಾಸಿ ಮಣಿರಾಮ್ ಹೇಳುತ್ತಾರೆ.
ವತ್ಸಲಾ ಕೇರಳ ಮತ್ತು ಮಧ್ಯಪ್ರದೇಶದಕ್ಕೆ ಸೇರಿದ ಏಷ್ಯಾಟಿಕ್ ಆನೆ (ಎಲಿಫಾಸ್ ಮ್ಯಾಕ್ಸಿಮಸ್). ಮಣಿರಾಮ್ ಅವಳು ಈಗ ಬಹಳ ಸೌಮ್ಯ ಸ್ವಭಾವದವಳು ಆದರೆ ತನ್ನ ಯೌವನದ ದಿನಗಳಲ್ಲಿ ವತ್ಸಲಾ ತುಂಟಿಯಾಗಿದ್ದಿರಬಹುದು ಎನ್ನುತ್ತಾರೆ. ವತ್ಸಲಾಳ ಕಣ್ಣು ಮತ್ತು ಕಿವಿ ಮಂದವಾಗಿದ್ದರೂ ಅಪಾಯ ಎದುರಾದಾಗ ತನ್ನ ಹಿಂಡನ್ನು ಎಚ್ಚರಿಸುವುದರಲ್ಲಿ ಅವಳು ಇಂದಿಗೂ ಮುಂದೆ.
ಮಣಿರಾಮ್ ಹೇಳುವಂತೆ ಈ ಆನೆಯ ವಾಸನೆಯ ಬಲ ಈಗಲೂ ಬಲವಾಗಿದ್ದು, ಅದು ಇನ್ನೊಂದು ಪ್ರಾಣಿಯ ಇರುವಿಕೆಯನ್ನು ಕ್ಷಣ ಮಾತ್ರದಲ್ಲೇ ಗ್ರಹಿಸಬಲ್ಲದರು ಎನ್ನುತ್ತಾರೆ. ಅಂತಹ ಸಂದರ್ಭಗಳಲ್ಲಿ ವತ್ಸಲಾ ಕೂಡಲೇ ತನ್ನ ಗುಂಪನ್ನು ಬಳಿಗೆ ಕರೆದು, ವಿಶೇಷವಾಗಿ ಮರಿಗಳನ್ನು ಸುರಕ್ಷಿತವಾಗಿಸುತ್ತಾಳೆ. “ಒಂದು ವೇಳೆ ಎದುರಿಗಿರುವ ಪ್ರಾಣಿ ದಾಳಿಗೆ ಮುಂದಾದರೆ ಅವಳು ಕಲ್ಲು, ಕೋಲು ಅಥವಾ ಮರದ ಕೊಂಬೆಯನ್ನು ಹಿಡಿದು ಅದನ್ನು ಓಡಿಸುತ್ತಾಳೆ” ಎಂದು ಮಣಿರಾಮ್ ಹೇಳುತ್ತಾರೆ. “ಪೆಹಲೇ ಬಹುತ್ ತೇಜ್ ಥೀ [ಮೊದಲು ಬಹಳ ಚುರುಕಾಗಿದ್ದಳು].”










