ಅದು ಕಳ್ಳತನ
- 1970ರಲ್ಲಿ ಗಂಧಮಾರ್ದನ ಬಿ ಬ್ಲಾಕಿನಲ್ಲಿ ಗಣಿಗಾರಿಕೆಯನ್ನು ಓಡಿಷಾ ಮೈನಿಂಗ್ ಕಾರ್ಪೋರೇಷನ್ನಿಗೆ (OMC) ಗುತ್ತಿಗೆ ನೀಡಲಾಯಿತು.
- 2013ರಲ್ಲಿ ಷಾ ಆಯೋಗವು ತನ್ನ ವರದಿಯಲ್ಲಿ 2000 ದಿಂದ 2006 ನೇ ಇಸವಿಗಳ ನಡುವೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ 12 ಲಕ್ಷ ಟನ್ ಗಣಿಗಾರಿಕೆ ನಡೆದದ್ದೂ ಸೇರಿದಂತೆ ಹಲವಾರು ಅಕ್ರಮಗಳ ಬಗ್ಗೆ ಬೊಟ್ಟು ಮಾಡಿ ತೋರಿಸಿತ್ತು. ಕಿಯೋಂಜಾರ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಬಗ್ಗೆ ಅರಣ್ಯಾಪರಾಧ ಕಾಯಿದೆಯಡಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
- ಜನವರಿಯಲ್ಲಿ ರಾಜ್ಯ ಸರಕಾರವು OMC ಪರವಾಗಿ ಅದರ ವಾರ್ಷಿಕ ಉತ್ಪಾದನೆಯನ್ನು 92 ಲಕ್ಷ ಟನ್ನುಗಳಿಗೆ ಏರಿಸಲು ಮತ್ತು ಗಣಿಗಾರಿಕೆ ಪ್ರದೇಶವನ್ನು 1590 ಹೆಕ್ಟೇರುಗಳಿಗೆ ವಿಸ್ತರಿಸಲು ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿತು. ಈ ವಿಸ್ತರಣಾ ಪ್ರದೇಶದಲ್ಲಿ ಏಳು ಆದಿವಾಸಿ ಗ್ರಾಮಗಳ ಸಹಿತ 1400 ಹೆಕ್ಟೇರ್ ಅರಣ್ಯಭೂಮಿ ಸೇರಿದೆ.
- OMC ತನ್ನ ವಾರ್ಷಿಕ ಮಾರಾಟದ ಮೌಲ್ಯವನ್ನು 2416 ಕೋಟಿ ರೂಪಾಯಿಗಳೆಂದು ಅಂದಾಜಿಸಿದೆ. ಇಲ್ಲಿ ಮುಂದಿನ 33 ವರ್ಷಗಳಲ್ಲಿ ಅಂದಾಜು 3000 ಲಕ್ಷ ಟನ್ ಅದಿರು ಗಣಿಗಾರಿಕೆ ಮಾಡುವ ಗುರಿ ಇದೆ.
- ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳು ಈ ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಪರಿಶೀಲನೆ ನಡೆಸಿವೆ.
ಮೂಲ: ಅಕ್ರಮ ಗಣಿಗಾರಿಕೆಯ ಬಗ್ಗೆ ನ್ಯಾಯಮೂರ್ತಿ ಎಂ. ಬಿ. ಷಾ ಸಮಿತಿಯ ವರದಿ; ಗಂಧಮಾರ್ದನ ಬ್ಲಾಕ್ – ಬಿ ಬಗ್ಗೆ ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ
“ನಾನು ಒಡಿಯಾ ಭಾಷೆಯಲ್ಲಿ ಹೀಗೆ ಸಹಿಮಾಡ್ತೇನೆ. ನನ್ನ ಜೀವನದಲ್ಲಿ ನಾನು ಯಾವತ್ತೂ ಇಂಗ್ಲೀಷ್ ಕಲಿತದ್ದಿಲ್ಲ. ಹಾಗಿರುವಾಗ ನಾನು ಇಂಗ್ಲೀಷಿನಲ್ಲಿ ಸಹಿ ಮಾಡುವುದು ಹೇಗೆ ಸಾಧ್ಯ?” ಎಂದು ಗಾಬರಿಯಿಂದ ಕೇಳುತ್ತಾರೆ ಗೋಪಿನಾಥ್ ನಾಯ್ಕ್. ಉರುಮುಂದಾ ಗ್ರಾಮದ ಅವರು ಈಗಷ್ಟೇ ಅಲ್ಲಿಂದ ಸೈಕಲ್ಲಿನಲ್ಲಿ ಬಂದಿಳಿದಿದ್ದರು.
ಹಳ್ಳಿಗಳ ಅರಣ್ಯ ಹಕ್ಕುಗಳ ಸಮಿತಿಯ ಸದಸ್ಯರಾಗಿರುವ ನಾಯ್ಕ್, ಅವರದ್ದೆಂದು ಹೇಳಲಾಗಿರುವ ಇಂಗ್ಲಿಷ್ ಸಹಿಯನ್ನು ಆಗಷ್ಟೇ ನೋಡಿದ್ದರು. ಅವರ ಹಳ್ಳಿಯ ಗ್ರಾಮಸಭೆಯ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿ ಅವರು ಮಾಡಿರುವರೆನ್ನಲಾದ ಸಹಿ ಅದಾಗಿತ್ತು.
ನಿರ್ಣಯದಲ್ಲಿ ಉರುಮಂದಾ ಗ್ರಾಮದ ಗ್ರಾಮಸ್ಥರು ತಮ್ಮ 853 ಹೆಕ್ಟೇರ್ ಅರಣ್ಯ ಭೂಮಿಯನ್ನು ಓಡಿಷಾ ಮೈನಿಂಗ್ ಕಾರ್ಪೋರೇಷನ್ನಿಗೆ (OMC) ಬಿಟ್ಟುಕೊಡಲು ಒಪ್ಪಿದ್ದಾರೆಂದು ಹೇಳಲಾಗಿತ್ತು. ಜನವರಿ 2015 ರಲ್ಲಿ ಓಡಿಷಾ ರಾಜ್ಯ ಸರಕಾರ ಮತ್ತು OMC ಗಳು ಕೇಂದ್ರ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಇಲಾಖೆಗೆ (MoEFCC) ಗೆ ಸಲ್ಲಿಸಿದ್ದ ಒಪ್ಪಿಗೆ ಕೋರುವ ಅರ್ಜಿಯಲ್ಲಿ ಏಳು ಗ್ರಾಮಗಳ ವತಿಯಿಂದ ಈ ರೀತಿಯ ಒಂದೇ ವಿಧದ ಗ್ರಾಮಸಭಾ ನಿರ್ಣಯಗಳ ಪ್ರತಿಗಳನ್ನು ಇರಿಸಲಾಗಿತ್ತು.












