"ನಮ್ಮ ತಂದೆಯ ಸಾವಿನ ನಂತರ ಅವರ ಅಂತಿಮ ಕ್ರಿಯೆಯನ್ನು ಗೌರವಯುತವಾಗಿ ನಡೆಸಲಾಗುವುದಿಲ್ಲ ಎನ್ನುವ ಕುರಿತು ಚಿಂತೆಗೀಡಾಗಿದ್ದೆವು."
ಪಂಚನಾಥನ್ ಸುಬ್ರಮಣ್ಯಮ್ ಅವರ ನಿಧನದ ಎರಡು ತಿಂಗಳ ನಂತರವೂ ಅವರ ಮಗನಾದ ರಮೇಶ್ ತಂದೆಯ ಸಾವಿನ ನೋವಿನಲ್ಲೇ ಇದ್ದರು. “ನಾವು ಅವರನ್ನು ಕೋವಿಡ್ -19 ಲಕ್ಷಣಗಳ ಕಾರಣಕ್ಕಾಗಿ ತಂಜಾವೂರಿನ ಆಸ್ಪತ್ರೆಗೆ ಸೇರಿಸಿದಾಗ ಅವರನ್ನು ಆಸ್ಪತ್ರೆಯಿಂದ ಮರಳಿ ನೀರ್ಜೀವವಾಗಿ ಕರೆದೊಯ್ಯುತ್ತೇವೆನ್ನುವ ಕಲ್ಪನೆ ಕೂಡ ನಮಗಿರಲಿಲ್ಲ.” ಎಂದು ಹೇಳುತ್ತಾರೆ.
ಅದಕ್ಕಿಂತ ಹೆಚ್ಚಾಗಿ, ಭಾರತೀಯ ಸೇನೆಯಲ್ಲಿ ಕ್ಲರಿಕಲ್ ಹುದ್ದೆಯಿಂದ ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿದ್ದ 68 ವರ್ಷದ ಸುಬ್ರಮಣ್ಯಂ ಅವರಿಗೆ ಯಾವುದೇ ದೊಡ್ಡಮಟ್ಟದ ಆರೋಗ್ಯ ಸಂಬಂಧಿ ಸಮಸ್ಯೆಗಳಿರಲಿಲ್ಲ. ಮಿಲಿಟರಿಯೊಂದಿಗಿನ ತನ್ನ ಒಡನಾಟದ ಬಗ್ಗೆ ಅವರಿಗೆ ಹೆಮ್ಮೆಯಿತ್ತು “ಮತ್ತು ಅವರ ಫಿಟ್ನೆಸ್ ಕುರಿತು ಬಹಳ ಕಾಳಜಿವಹಿಸುತ್ತಿದ್ದರು. ಅವರು ತಮ್ಮ ದೈನಂದಿನ ವಾಕಿಂಗ್ ಎಂದಿಗೂ ತಪ್ಪಿಸಿಲ್ಲ ಮತ್ತು ಅವರ ಆಹಾರದ ವಿಷಯದಲ್ಲಿಯೂ ಕಟ್ಟುನಿಟ್ಟಾಗಿದ್ದರು" ಎಂದು ತಮಿಳುನಾಡಿನ ಕುಂಬಕೋಣಂ ಪಟ್ಟಣ ಮೂಲದ ರಮೇಶ್ (40) ವಿವರಿಸುತ್ತಾರೆ. "ಅವರನ್ನು ಆಸ್ಪತ್ರೆಗೆ ದಾಖಲಿಸುವಾಗಲೂ, ಅವರು ಗುಣಮುಖನಾಗುತ್ತಾರೆ ಎಂದೇ ನಾವು ಭಾವಿಸಿದ್ದೆವು."
ಆದರೆ ಆಗಸ್ಟ್ 14ರಂದು ಸುಬ್ರಮಣ್ಯಂ ನಿಧನರಾದಾಗ, ರಮೇಶ್ ಮತ್ತು ಅವರ ಕುಟುಂಬದವರು ವಿಚಲಿತರಾದರು. ಅದಕ್ಕೆ ಕಾರಣ ಕೇವಲ ಸುಬ್ರಮಣ್ಯಂ ಅವರ ಸಾವು ಮಾತ್ರವಲ್ಲದೆ ರಾಜ್ಯದಲ್ಲಿ ನಡೆಯುತ್ತಿದ್ದ ಕೋವಿಡ್ -19 ಸಂತ್ರಸ್ತರ ಅಂತ್ಯಕ್ರಿಯೆಗಳ ರೀತಿ ಮತ್ತು ಅಂತಹ ಶವಗಳನ್ನು ಜನರು ನಡೆಸಿಕೊಳ್ಳುತ್ತಿದ್ದ ರೀತಿ. ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಅವರು ಗೊಂದಲಕ್ಕೊಳಗಾಗಿದ್ದರು."ಸಂಬಂಧಿಕರು ಮತ್ತು ಸ್ನೇಹಿತರು ಅಷ್ಟೇನೂ ಬೆಂಬಲ ನೀಡಲಿಲ್ಲ" ಎಂದು ರಮೇಶ್ ಹೇಳುತ್ತಾರೆ. "ಬಹುಶಃ ಇದು ಅರ್ಥ ಮಾಡಿಕೊಳ್ಳುವಂತಹದ್ದೇ ಇಂದು ಕೊರೋನಾ ಸಾವು ಎಲ್ಲರಲ್ಲೂ ದೊಡ್ಡ ಕಳವವಳಕ್ಕೆ ಕಾರಣವಾಗಿದೆ"
ಕೊನೆಗೆ ಅನಿರೀಕ್ಷಿತ ಮೂಲದಿಂದ ಪ್ರಾಯೋಗಿಕ ಸಹಾಯಗಳು ಬಂದವು. ಹಾಗೆ ಸಹಾಯಕ್ಕೆ ಬಂದವರು ತಮಿಳುನಾಡು ಮುಸ್ಲಿಮ್ ಮುನ್ನೇಟ್ರ ಕಳಗಂ. ಇದೊಂದು ಆ ರಾಜ್ಯದಲ್ಲಿನ ಸರ್ಕಾರೇತರ ಸಂಸ್ಥೆ. ಸುಬ್ರಮಣ್ಯಂ ನಿಧನರಾದ ಸ್ವಲ್ಪ ಸಮಯದ ನಂತರ, ಆರು ಟಿಎಂಎಂಕೆ ಸ್ವಯಂಸೇವಕರು ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಅವರು ಕುಟುಂಬಕ್ಕೆ ಆಸ್ಪತ್ರೆಯಿಂದ ಶವವನ್ನು ಪಡೆಯುವುದರಿಂದ ಹಿಡಿದು ಗೌರವಯುತವಾದ ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಹೂಳುವ ತನಕ ಸಹಾಯ ಮಾಡಿದರು. (ಕೆಲವು ಹಿಂದೂ ಸಮುದಾಯಗಳು ಕುಂಬಕೋಣಂನಲ್ಲಿ ಸುಡುವ ಬದಲು ಹೂಳುತ್ತಾರೆ).
ಕುಟುಂಬದ ಮಟ್ಟಿಗೆ ಇದೊಂದು ಬಹಳ ದೊಡ್ಡ ಸಹಾಯವಾಗಿದ್ದರೂ, ಟಿಎಂಎಂಕೆ ಮಟ್ಟಿಗೆ ಅವರು ಮಾರ್ಚ್ ಅಂತ್ಯದಿಂದ ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಅವರು ನಡೆಸಿದ 1,100 ಅಂತ್ಯಕ್ರಿಯೆಗಳಲ್ಲಿ ಸುಬ್ರಮಣ್ಯಂ ಅವರ ಅಂತ್ಯಕ್ರಿಯೆಯೂ ಒಂದು. ಸತ್ತವರ ಸಮುದಾಯ ಅಥವಾ ಜಾತಿಯನ್ನು ಲೆಕ್ಕಿಸದೆ ಅಂತ್ಯಕ್ರಿಯೆಗಳನ್ನು ಮಾಡಲಾಗುತ್ತದೆ - ಕುಟುಂಬದ ಧಾರ್ಮಿಕ ಸಂಪ್ರದಾಯಗಳು ಮತ್ತು ಅವರು ಬಯಸಿದಂತೆ ಅಂತಿಮ ವಿಧಿಗಳನ್ನು ನಡೆಸಲಾಗುತ್ತದೆ. ಕೊವಿಡ್ -19 ಎಂದು ಖಚಿತಗೊಂಡ ಪ್ರಕರಣಗಳಲ್ಲಿ ಟಿಎಂಎಂಕೆ ಎಂಟು ಅಡಿ ಆಳದ ಹೊಂಡಗಳಲ್ಲಿ ಸಮಾಧಿ ಮಾಡುವ ಮೂಲಕ ಸ್ಥಳೀಯ ಆಡಳಿತ ವಿಧಿಸಿರುವ ಪ್ರೋಟೋಕಾಲ್ಗಳನ್ನು ಕೂಡ ಅನುಸರಿಸಿದೆ.









