ಸುಪಾರಿ ಪುತೆಲ್ ಅವರಿಗೆ ಕಳೆದ ಒಂದು ದಶಕದಲ್ಲಿ ತಾನು ಆಸ್ಪತ್ರೆಗಳಲ್ಲಿ ಎಷ್ಟು ಸಮಯವನ್ನು ಕಳೆದೆನೆನ್ನುವುದು ನಿಖರವಾಗಿ ನೆನಪಿಲ್ಲ.
ಇಷ್ಟು ದೀರ್ಘ ವರ್ಷಗಳ ಕಾಲ ಅವರು ತನ್ನ ಅನಾರೋಗ್ಯದಿಂದ ಬಳಲುತ್ತಿದ್ದ 17 ವರ್ಷದ ಮಗನ ಚಿಕಿತ್ಸೆಗಾಗಿ ಒಡಿಶಾ ಮತ್ತು ಛತ್ತೀಸಗಢದ ಆಸ್ಪತ್ರೆಗಳಿಗೆ ಅಲೆಯುತ್ತಿದ್ದರು. ಅದರ ನಂತರ ಕೆಲವು ದಿನಗಳ ಕಾಲ ತನ್ನ ಪತಿ ಸುರೇಶ್ವರ್ ಅವರ ಚಿಕಿತ್ಸೆಗೆಗಾಗಿ ಮುಂಬೈಗೂ ಪ್ರಯಾಣ ಬೆಳೆಸಿದರು.
ಆದರೆ ಇಬ್ಬರೂ 2019ರಲ್ಲಿ ನಾಲ್ಕು ತಿಂಗಳ ಆಸುಪಾಸಿನಲ್ಲಿ ತೀರಿಕೊಳ್ಳುವುದರೊಂದಿಗೆ ಸುಪಾರಿಯವರನ್ನು ದುಃಖದ ಆಳ ಕಡಲಿನಲ್ಲಿ ನೂಕಿದರು.
ಅವರ ಪತಿ ಸುರೇಶ್ವರ ಅವರಿಗೆ ಕೇವಲ 44 ವರ್ಷವಾಗಿತ್ತು. ಸೆಪ್ಟೆಂಬರ್ 2019ರಲ್ಲಿ, ಅವರು ಮತ್ತು ಸುಪಾರಿ ಒಡಿಶಾದ ಬಾಲಂಗೀರ್ ಜಿಲ್ಲೆಯ ತಮ್ಮ ಮನೆಯಿಂದ ಸುಮಾರು 1,400 ಕಿ.ಮೀ. ದೂರದ ಮುಂಬೈಗೆ ವಲಸೆ ಬಂದಿದ್ದರು. ಅಲ್ಲಿ ಸ್ಥಳೀಯ ಕಾರ್ಮಿಕರ ದಲ್ಲಾಳಿಯೊಬ್ಬರು ದಂಪತಿಗಳನ್ನು ನಿರ್ಮಾಣ ಸ್ಥಳದಲ್ಲಿ ಕೆಲಸಕ್ಕಾಗಿ ನೇಮಿಸಿಕೊಂಡರು. "ನಾವು ನಮ್ಮ ಸಾಲಗಳನ್ನು ತೀರಿಸಲು ಮತ್ತು ನಮ್ಮ ಮನೆ [ನಿರ್ಮಾಣವನ್ನು] ಪೂರ್ಣಗೊಳಿಸಲು ಸ್ವಲ್ಪ ಹಣವನ್ನು ಸಂಪಾದಿಸುವ ಸಲುವಾಗಿ ಹೋಗಿದ್ದೆವು" ಎಂದು ಸುಪಾರಿ ಹೇಳಿದರು. ಇಬ್ಬರಿಗೂ ಸೇರಿ ದಿನವೊಂದಕ್ಕೆ 600 ರೂಪಾಯಿಗಳ ಕೂಲಿ ದೊರೆಯುತ್ತಿತ್ತು.
"ಒಂದು ಸಂಜೆ, ಮುಂಬೈನ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ನನ್ನ ಪತಿಗೆ ತೀವ್ರ ಜ್ವರ ಬಂತು" ಎಂದ 43 ವರ್ಷದ ಸುಪಾರಿ, ತುರೆಕೆಲಾ ಬ್ಲಾಕ್ನ 933 ಜನರ ಹಳ್ಳಿಯಾದ ಹಿಯಾಲ್ನಲ್ಲಿರುವ ತನ್ನ ಕಚ್ಚಾ ಮನೆಯ ಮುಂದೆ ನೆಲದ ಮೇಲೆ ಕುಳಿತು, ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅವರು ಮತ್ತು ಅವರ ಕುಟುಂಬ ಮಾಲಿ ಜಾತಿಗೆ ಸೇರಿದವರಾಗಿದ್ದು ಇದು ಇತರೇ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿ ಬರುತ್ತದೆ.
ಸುರೇಶ್ವರ ಅವರನ್ನು ಉತ್ತರ-ಕೇಂದ್ರ ಮುಂಬೈಯಲ್ಲಿನ ಸಿಯಾನ್ನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ ಸೇರಿಸುವ ಮೊದಲು, ಸುಪಾರಿ ಮತ್ತು ನಿರ್ಮಾಣ ಸ್ಥಳದ ಸೂಪರ್ವೈಸರ್ ಆಟೋರಿಕ್ಷಾಗಳು ಮತ್ತು ಆಂಬ್ಯುಲೆನ್ಸ್ ಮೂಲಕ ನಗರದ ಪರಿಧಿಯಲ್ಲಿರುವ ಮೂರು ಆಸ್ಪತ್ರೆಗಳಿಗೆ ಅಲೆದಾಡಿದ್ದರು.
"ಪ್ರತಿ ಆಸ್ಪತ್ರೆಯವರೂ ನಮ್ಮನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸುತ್ತಿದ್ದರು, ಏಕೆಂದರೆ [ಆ ಸಮಯದಲ್ಲಿ] ನಮ್ಮ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳು ನಮ್ಮೊಂದಿಗಿದ್ದಿರಲಿಲ್ಲ" ಎಂದು ಸುಪಾರಿ ಹೇಳಿದರು. "ಅವರಿಗೆ ಕಾಮಾಲೆ [ರೋಗಲಕ್ಷಣ] ಇತ್ತು. ಅವರ ದೇಹದ ಸೊಂಟದಿಂದ ಕೆಳಭಾಗ ಪಾರ್ಶ್ವವಾಯುವಿಗೆ ಒಳಗಾಯಿತು, ಆ ಸಮಯದಲ್ಲಿ ನಾನು ಅವರ ಪಾದಗಳನ್ನು ತಿಕ್ಕುತ್ತಿದ್ದೆ,” ಎಂದು ಅವರು ಹೇಳುತ್ತಾರೆ, ಆದರೆ ಆಕೆಗೆ ಅವರಿಗಿದ್ದಿದ್ದು ಯಾವ ರೋಗವೆಂದು ಸರಿಯಾಗಿ ತಿಳಿದಿರಲಿಲ್ಲ. ಮರುದಿನ, ಸುರೇಶ್ವರ ಅವರು 6 ನವೆಂಬರ್ 2019ರಂದು ಆಸ್ಪತ್ರೆಯಲ್ಲಿ ನಿಧನರಾದರು.








