5 ರೂ.ಗಳಿಗಾಗಿ ಪಟ್ಟುಹಿಡಿದಿರುವ ತನ್ನ 7 ವರ್ಷದ ಮೊಮ್ಮಗಳತ್ತ ಗಮನಸೆಳೆದ ವಂದನ ಉಂಬರ್ಸದ, “ಸೋಮವಾರದಿಂದಲೂ (ಮಾರ್ಚ್ 16) ನಮಗೆ ಯಾವುದೇ ಕೆಲಸ ದೊರೆತಿಲ್ಲ”, ನಾನು ಹಣವನ್ನು ತರುವುದಾದರೂ ಎಲ್ಲಿಂದ? ಎಂದು ಅಲವತ್ತುಕೊಂಡರು.
ಮಹಾರಾಷ್ಟ್ರದ ವಾಡಾ ತಾಲ್ಲೂಕಿನ ಹಲವಾರು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದುಡಿಯುತ್ತಿರುವ 55ರ ವಯಸ್ಸಿನ ವಂದನ, ಪಾಲ್ಘರ್ ಜಿಲ್ಲೆಯ ಕವಟೆಪಾಡಾದಲ್ಲಿನ ತನ್ನ ಮನೆಯ ಅಂಗಳದಲ್ಲಿ ಕುಳಿತು ಹೀಗೆಂದರು: “ಏನು ನಡೆಯುತ್ತಿದೆಯೆಂಬುದು ನಮಗೆ ತಿಳಿದಿಲ್ಲ. ನಮ್ಮ ಸುತ್ತಮುತ್ತ ರೋಗವೊಂದು ಹಬ್ಬುತ್ತಿದ್ದು, ಸರ್ಕಾರವು ಮನೆಯಿಂದ ಹೊರಬರದಂತೆ ತಿಳಿಸಿರುವ ಕಾರಣ ಮನೆಯಲ್ಲೇ ಇರಬೇಕೆಂದು ನನ್ನ ಮಗನು ತಿಳಿಸಿದ.”
ಆಗ 4ರ ಸಮಯ. ವಂದನಾರ ನೆರೆಹೊರೆಯ ಅನೇಕರು ವಿವಿಧ ವಿಷಯಗಳನ್ನು ಚರ್ಚಿಸಲು ಅದರಲ್ಲೂ ಮುಖ್ಯವಾಗಿ ಪ್ತಸ್ತುತದಲ್ಲಿನ ಕೊವಿಡ್-19 ಆಪತ್ತಿನ ಬಗ್ಗೆ ಚರ್ಚಿಸಲು ಆಕೆಯ ಮನೆಯ ಹೊರಗೆ ಸೇರಿದ್ದರು. ಅವರಲ್ಲಿನ ಒಬ್ಬ ತರುಣಿ ಮಾತ್ರ, ಮಾತನಾಡುವಾಗ ಪ್ರತಿಯೊಬ್ಬರೂ ಪರಸ್ಪರ ಅಂತರವನ್ನು ಕಾಯ್ದುಕೊಳ್ಳತಕ್ಕದ್ದೆಂದು ತಿಳಿಸಿದಳು. ಇಲ್ಲಿನ ಜನರ ಅಂದಾಜಿನಂತೆ, ಕವಟೆಪಾಡಾದಲ್ಲಿ ಸುಮಾರು 70 ಮನೆಗಳಿದ್ದು, ಪ್ರತಿಯೊಂದು ಕುಟುಂಬವೂ ಆದಿವಾಸಿಗಳ ವರ್ಲಿ ಸಮುದಾಯಕ್ಕೆ ಸೇರಿದೆ.
ರಾಜ್ಯಾದ್ಯಂತದ ಲಾಕ್ಡೌನ್ ಪ್ರಾರಂಭಗೊಳ್ಳುವವರೆಗೂ, ವಂದನ ಮತ್ತು ಆಕೆಯ ನೆರೆಯಲ್ಲಿನ ಮನಿತ ಉಂಬರ್ಸದ, ಮುಂಜಾನೆ 8ಕ್ಕೆ ತಮ್ಮ ದಿನಚರಿಯನ್ನು ಪ್ರಾರಂಭಿಸಿ, ಒಂದು ಗಂಟೆಯ ಅವಧಿಯಲ್ಲಿ 10 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಸವೆಸಿ, ವಾಡಾ ಪಟ್ಟಣದ ಕಟ್ಟಡ ನಿರ್ಮಾಣ ಸ್ಥಳಗಳಿಗೆ ತೆರಳುತ್ತಿದ್ದರು. ಅಲ್ಲಿ 9ರಿಂದ 6ರವರೆಗಿನ ತಮ್ಮ ದುಡಿಮೆಗೆ ಅವರು, 200 ರೂ.ಗಳನ್ನು ಗಳಿಸುತ್ತಿದ್ದರು. ಇದರಿಂದಾಗಿ ಮಾಹೆಯಾನ ಸುಮಾರು 4 ಸಾವಿರ ರೂ.ಗಳನ್ನು ಗಳಿಸುತ್ತಿದ್ದೆಯೆಂಬುದಾಗಿ ವಂದನ ತಿಳಿಸಿದರು. ಆದರೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರರ ಬಳಿ ಈಗ ಆಕೆಗೆ ಯಾವುದೇ ಕೆಲಸವಿಲ್ಲ.
“ನನ್ನ ಮಕ್ಕಳಿಗೂ ಯಾವುದೇ ಕೆಲಸವು ದೊರೆಯುತ್ತಿಲ್ಲ. ನಾವು ಆಹಾರ ಪದಾರ್ಥಗಳನ್ನು ಖರೀದಿಸಬೇಕಿದೆ. ದುಡಿಮೆಯೇ ಇಲ್ಲದೆ ನಮಗೆ ಹಣವು ದೊರೆಯುವುದಾದರೂ ಹೇಗೆ? ನಮ್ಮ ಪಡಿತರ ಇನ್ನೇನು ಮುಗಿಯುವುದರಲ್ಲಿದೆ. ಕೇವಲ ಚಟ್ನಿಯನ್ನಷ್ಟೇ ತಯಾರಿಸಿ ಅದನ್ನೇ ನಮ್ಮ ಮಕ್ಕಳಿಗೆ ಉಣಬಡಿಸಬೇಕೆ? ಇದು ಶೀಘ್ರದಲ್ಲೇ ಕೊನೆಗೊಳ್ಳಲೆಂದು ನಾನು ಆಶಿಸುತ್ತೇನೆ”, ಎಂಬುದು ಆಕೆಯ ಪ್ರಶ್ನೆ.
ವಂದನ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು 11 ಮೊಮ್ಮಕ್ಕಳಿದ್ದಾರೆ. 168 ಜಿಲ್ಲೆಗಳನ್ನು ಹೊಂದಿದ್ದು, 154,416ರಷ್ಟು ಜನಸಂಖ್ಯೆಯಿರುವ ವಾಡಾ ತಾಲ್ಲೂಕಿನ ಇಟ್ಟಿಗೆಯ ಗೂಡುಗಳು ಅಥವ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಆಕೆಯ ಮಕ್ಕಳು ದುಡಿಯುತ್ತಾರೆ. ಅತಿಯಾದ ಮದ್ಯಪಾನದಿಂದ ಉಂಟಾದ ಸಮಸ್ಯೆಗಳಿಂದಾಗಿ 15 ವರ್ಷಗಳ ಹಿಂದೆ ಸ್ಥಳೀಯ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದ ಈಕೆಯ ಪತಿ ಲಕ್ಷ್ಮಣ್ ಸಾವಿಗೀಡಾದರು.







