ಮಾಧ್ಯಮಗಳು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗದ ಒಂದು ಸತ್ಯವೆಂದರೆ, ಇದೊಂದು ಇದೊಂದು ಇತ್ತೀಚಿನ ವರ್ಷಗಳಲ್ಲಿ ಜಗತ್ತು ಕಂಡ ಅತ್ಯಂತ ದೊಡ್ಡ ಮತ್ತು ಶಾಂತಿಯುತ ಹೋರಾಟವೆನ್ನುವುದು. ಹಾಗೆಯೇ ಈ ಸರ್ವವ್ಯಾಪಿ ವ್ಯಾಧಿಯ ನಡುವೆಯೂ ಅದ್ಭುತವಾಗಿ ಆಯೋಜಿಸಲ್ಪಟ್ಟ ಹೋರಾಟವೂ ಹೌದು ಮತ್ತು ಅತಿದೊಡ್ಡ ಗೆಲುವನ್ನು ಪಡೆದ ಹೋರಾಟ ಕೂಡಾ ಹೌದು.
ಇದೊಂದು ಹೋರಾಟದ ಪರಂಪರೆಯನ್ನು ಮುನ್ನಡೆಸುವ ವಿಜಯ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿ ಮತ್ತು ದಲಿತ ಸಮುದಾಯಗಳು ಸೇರಿದಂತೆ ಎಲ್ಲಾ ರೀತಿಯ ರೈತರು, ಪುರುಷರು ಮತ್ತು ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದರು. ಈಗ ನಾವು ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಗುಂಗಿನಲ್ಲಿರುವಾಗಲೇ, ದೆಹಲಿ ಗಡಿಯಲ್ಲಿ ನೆಲೆನಿಂತ ರೈತರು ಆ ಮಹಾನ್ ಹೋರಾಟದ ಸ್ಫೂರ್ತಿಯನ್ನು ಮತ್ತೆ ನಮ್ಮೆದುರಿಗಿಟ್ಟಿದ್ದಾರೆ.
ಈ ತಿಂಗಳ 29ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ರದ್ದುಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. 'ಉತ್ತಮ ಪ್ರಯತ್ನಗಳ ಹೊರತಾಗಿಯೂ ರೈತರ ಒಂದು ವರ್ಗವನ್ನು ಮನವೊಲಿಸಲು ವಿಫಲವಾದ ನಂತರ' ಅವರು ಹಾಗೆ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ. ಅವರು ಒಂದು ವರ್ಗಕ್ಕೆ, ಅಪಖ್ಯಾತಿಗೊಳಗಾಗಿದ್ದ ಕಾನೂನುಗಳನ್ನು ಅವು ಅವರಿಗೆ ಒಳಿತು ಮಾಡಲೆಂದು ತಂದಂತಹ ಕಾನೂನುಗಳೆಂದು ಮನವರಿಕೆ ಮಾಡಿಕೊಡುವುದರಲ್ಲಿ ಸೋತಿದ್ದಾಗಿ ಹೇಳುವುದನ್ನು ಗಮನಿಸಿ. ಇಲ್ಲಿ ಅವರು ತನಗೆ ಈ ವರ್ಗವನ್ನು ಒಪ್ಪಿಸಲು ಕೌಶಲ ಸಾಲಲಿಲ್ಲವೆನ್ನುತ್ತಾರೆಯೇ ವಿನಹ ಈ ಐತಿಹಾಸಿಕ ಹೋರಾಟದಲ್ಲಿ ಜೀವ ತೆತ್ತ 600ಕ್ಕೂ ಹೆಚ್ಚು ರೈತರ ಕುರಿತಾಗಿ ಒಂದು ಮಾತನ್ನೂ ಹೇಳುವುದಿಲ್ಲ. ಬದಲಿಗೆ ರೈತರು ಈ ಒಳ್ಳೆಯ ಕಾನೂನನ್ನು ರೈತರು ಒಪ್ಪಲಿಲ್ಲವೆಂದು ಬೇಸರಿಸುತ್ತಾರೆ. ಹಾಗೂ ಈ ಕಾನೂನಿಲ್ಲಿಯೇ ವೈಫಲ್ಯಗಳಿದ್ದವು ಅಥವಾ ಈ ಕಾನೂನನ್ನು ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ರಾತ್ರೋ ರಾತ್ರಿ ಜನರ ಮೇಲೆ ಹೇರಿದ್ದು ತಪ್ಪೆನ್ನುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ.
ಸರಿ, ಈಗ ಖಲಿಸ್ತಾನಿಗಳು, ದೇಶವಿರೋಧಿಗಳು, ರೈತರಂತೆ ವೇಷ ಹಾಕುವ ನಕಲಿ ಕಾರ್ಯಕರ್ತರು, ಶ್ರೀ ಮೋದಿಯವರ ತಣ್ಣನೆಯ ಮೋಡಿಗೆ ಮರುಳಾಗಲು ನಿರಾಕರಿಸಿದ ಜನರು 'ರೈತರ ಒಂದು ವರ್ಗ' ಎನ್ನುವ ಪದವಿ ಪಡೆದಿದ್ದಾರೆ. ಹಾಗಿದ್ದರೆ ಅವರು ನಿಜವನ್ನು ಮನಗಾಣಲು ನಿರಾಕರಿಸಿದರೆ? ಹಾಗಿದ್ದರೆ ಇವರನ್ನು ಯಾವ ರೀತಿಯಲ್ಲಿ ಮತ್ತು ಯಾವ ವಿಧಾನ ಬಳಸಿ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು? ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದ ಅವರಿಗೆ ರಾಜಧಾನಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕವೆ? ಕಂದಕಗಳು ಮತ್ತು ಮುಳ್ಳುತಂತಿಗಳಿಂದ ಅವರನ್ನು ತಡೆಯುವ ಮೂಲಕವೆ? ಜಲಫಿರಂಗಿಗಳಿಂದ ಅವರನ್ನು ಘಾಸಿಗೊಳಿಸುವ ಮೂಲಕವೆ? ಅವರ ಶಿಬಿರಗಳನ್ನು ಸಣ್ಣ ಗುಲಾಗ್ಗಳಾಗಿ ಪರಿವರ್ತಿಸುವ ಮೂಲಕವೆ? ಪರಮಾಪ್ತ ಮಾಧ್ಯಮಗಳ ಮೂಲಕ ಪ್ರತಿದಿನ ರೈತರನ್ನು ನಿಂದಿಸುವ ಮೂಲಕವೆ? ಅಥವಾ ಅವರ ಮೇಲೆ ಕೇಂದ್ರ ಮಂತ್ರಿಯ ಅಥವಾ ಅವರ ಮಗನ ಹೆಸರಿನಲ್ಲಿದೆಯೆನ್ನಲಾಗುವ ವಾಹನಗಳನ್ನು ಹತ್ತಿಸುವ ಮೂಲಕವೆ? ಯಾವುದರ ಮೂಲಕ ಮನವೊಲಿಸಲು ಪ್ರಯತ್ನಿಸಲಾಗಿತ್ತು? ಈ ರೀತಿಯ ಪ್ರಯತ್ನಗಳೇ ಸರ್ಕಾರವು ಜನರ ಮನವೊಲಿಸಲು ಬಳಸುವ ವಿಧಾನಗಳೆ? ಒಂದು ಇವುಗಳೇ "ಮನವೊಲಿಸುವ ಉತ್ತಮ ಪ್ರಯತ್ನ"ವಾಗಿದ್ದಲ್ಲಿ ಸರ್ಕಾರ ಅಂತಹ ಪ್ರಯತ್ನಗಳನ್ನು ಮಾಡದಿರಲಿ ಎನ್ನುವುದೇ ನಮ್ಮ ಬಯಕೆ.











