ಬಹಳ ಹಿಂದೇನಲ್ಲ, ಇತ್ತೀಚೆಗೆ ನಾನು ಒಡಿಶಾದ ನುವಾಪಾಡ ಜಿಲ್ಲೆಯಿಂದ ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಗೆ ಹೋಗುವಾಗ, ಗರಿಯಾಬಂದ್‌ನ ಬ್ಲಾಕ್ ಹೆಡ್‌ಕ್ವಾರ್ಟರ್ಸ್ ದಿಯೋಭೋಗ್ ಮೂಲಕ ಹೋದೆ. ಅಲ್ಲಿ, ಬೈಸಿಕಲ್‌ಗಳಲ್ಲಿ ಯುವಕರು ಮತ್ತು ಮಕ್ಕಳ ಗುಂಪನ್ನು ನಾನು ನೋಡಿದೆ ಬಹುಶಃ ಈ ರೀತಿಯ ಗುಂಪು ಎಲ್ಲಿಯೂ ಹೆಚ್ಚು ಕಾಣಸಿಗುವುದಿಲ್ಲ.
ಅವರು ಬಹಳ ಚಂದದ ಆಕರ್ಷಕ, ಬಹುತೇಕ ರಾಜ-ಕಳೆಯ ಉಡುಪನ್ನು ಧರಿಸಿಕೊಂಡಿದ್ದರು. ಅವರು ಹೂಮಾಲೆಗಳು, ಹೊಳೆಯುವ ಆಕರ್ಷಕ ವೈಸ್ಟ್ ಕೋಟ್‌ಗಳ ಜೊತೆಗೆ, ಕಾಲ್ಗೆಜ್ಜೆಗಳನ್ನು ಮತ್ತು ವಿವಿಧ ರೀತಿಯ ಕಿರೀಟಗಳನ್ನು ಧರಿಸಿದ್ದರು. ಅವರಲ್ಲೊಬ್ಬರು ಮದುಮಗ ಹಾಕಿಕೊಳ್ಳುವಂತಹ ಪೇಟವನ್ನು ಇಟ್ಟುಕೊಂಡಿದ್ದರು, ಬಹುಷಃ ಅವರು ನಾಟಕದ ಗುಂಪಿನ ಭಾಗವಾಗಿರಬೇಕು ಎಂದು ನನಗೆ ಅನ್ನಿಸಿತು.
ಅವರನ್ನು ನಿಲ್ಲಿಸಿ ಅವರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದಾಗ, "ನಾವು ದೇವರ ಮುಂದೆ ನೃತ್ಯ ಮಾಡಲು ದೇವಭೋಗ್ ಎನ್ನುವಲ್ಲಿಗೆ ಹೋಗುತ್ತಿದ್ದೇವೆ" ಎಂದು ಸುಮಾರು 25 ವರ್ಷ ವಯಸ್ಸಿನ ಸೊಂಬಾರು ಯಾದವ್ ಹೇಳಿದರು.
ಗುಲ್ಶನ್ ಯಾದವ್, ಕೀರ್ತನ್ ಯಾದವ್, ಸೋಂಬಾರು, ದೇವೇಂದ್ರ, ಧನರಾಜ್ ಮತ್ತು ಗೋಬಿಂದ್ರ ಅವರು ನಾನು ಅವರನ್ನು ಭೇಟಿಯಾದ ಸ್ಥಳದಿಂದ ಸುಮಾರು 7-8 ಕಿಲೋಮೀಟರ್ ದೂರದಲ್ಲಿರುವ ನುಗುಡಾ ಗ್ರಾಮದವರು, ದೇವಭೋಗ್ ಬ್ಲಾಕ್‌ನ ಕೊಸಾಮ್ಕಣಿ ಗ್ರಾಮ ಪಂಚಾಯಿತಿಯವರಾಗಿದ್ದಾರೆ. ಅವರ ಹಳ್ಳಿಯಲ್ಲಿ, ಅವರು ಕೃಷಿಕರಾಗಿದ್ದಾರೆ, ಕೃಷಿ ಕಾರ್ಮಿಕರಾಗಿದ್ದಾರೆ ಅಥವಾ ಶಾಲೆಯಲ್ಲಿ ಕೆಲಸ ಮಾಡುವವರಾಗಿರುತ್ತಾರೆ.
ಅನುವಾದ: ಅಶ್ವಿನಿ ಬಿ.