“ನಮಗೆ ಆಹಾರದ ಪೊಟ್ಟಣಗಳು ಬೇಡ, ನಾವು ದಿನಸಿ ಅಂಗಡಿಯಿಂದ ಅಕ್ಕಿ ಖರೀದಿಸುತ್ತೇವೆ. ಪ್ರವಾಹದ ನೀರಿಗೆ ಏನಾದರೂ ಪರಿಹಾರ ಹುಡುಕಿ!” ಇದು ಸೆಮ್ಮಂಜೇರಿಯಲ್ಲಿ ಗುಂಪುಗೂಡಿದ್ದ ಮಹಿಳೆಯರು ಹೇಳಿದ ಮಾತುಗಳು.
ಕಾಂಚೀಪುರಂ ಜಿಲ್ಲೆಯ ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿರುವ ಚೆನ್ನೈ ನಗರದಿಂದ ದಕ್ಷಿಣಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶವು 2020ರ ನವೆಂಬರ್ 25ರಂದು ತೀವ್ರ ಪ್ರವಾಹಕ್ಕೀಡಾಗಿತ್ತು.
ಈ ತಗ್ಗು ಪ್ರದೇಶದ ನಿವಾಸಿಗಳಿಗೆ ಈ ರೀತಿಯ ಪ್ರವಾಹ ಹೊಸದೂ ಅಲ್ಲ ಅಥವಾ ಅಸಾಮಾನ್ಯವೂ ಅಲ್ಲ. 2015ರಲ್ಲಿ, ಚೆನ್ನೈ ಐತಿಹಾಸಿಕ ಹಾಗೂ ಕೆಟ್ಟ ನಿರ್ವಹಣೆಯ ಪ್ರವಾಹವನ್ನು ಎದುರಿಸಿದ್ದ ಸಮಯದಲ್ಲಿ ಸೆಮ್ಮಂಜೇರಿಯೂ ನೀರಿನಲ್ಲಿ ಮುಳುಗಿತ್ತು. ಆದರೆ ಕೆಲವು ಅಕ್ಕಪಕ್ಕದ ಪ್ರದೇಶಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಬೀದಿಗಳು ಮತ್ತು ಮಳೆನೀರಿನ ಚರಂಡಿಗಳು ಸ್ವಲ್ಪ ಉತ್ತಮವಾಗಿ ನಿರ್ಮಿಸಲ್ಪಟ್ಟಿವೆ.
ಬಹುಶಃ ಸೆಮ್ಮಂಜೇರಿ (ಅಥವಾ ಸೆಮ್ಮಂಚೇರಿ) ಹೌಸಿಂಗ್ ಬೋರ್ಡ್ ಪ್ರದೇಶವು ವಿವಿಧ ನಗರ ‘ಅಭಿವೃದ್ಧಿ’ ಮತ್ತು ಮೂಲಸೌಕರ್ಯ ಯೋಜನೆಗಳಿಂದಾಗಿ ಸ್ಥಳಾಂತರಗೊಂಡ ಕುಟುಂಬಗಳಿಗೆ ನೆಲೆಯಾಗಿರುವ ಕಾರಣ ನಿರ್ಲಕ್ಷಿಸಲಾಗಿರಬಹುದು. ಇಲ್ಲಿ ವಾಸಿಸುವವರಲ್ಲಿ ಅನೇಕರು ಚೆನ್ನೈ ನಗರದಲ್ಲಿ ಮನೆಗೆಲಸ ಮಾಡುವವರು, ನೈರ್ಮಲ್ಯ ಕಾರ್ಮಿಕರು, ಆಟೋರಿಕ್ಷಾ ಚಾಲಕರು ಅಥವಾ ಅನೌಪಚಾರಿಕ ವಲಯದ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು.
ತಮಿಳುನಾಡಿಗೆ ಭೀಕರ ಚಂಡಮಾರುತ ನಿವಾರ್ ಅಪ್ಪಳಿಸಿದಾಗ ಕಡಲೂರಿನಲ್ಲಿ ಸುಮಾರು 250 ಮಿ.ಮೀ ಮತ್ತು ಚೆನ್ನೈಯಲ್ಲಿ ಭೂಕುಸಿತದ ಸಮಯದಲ್ಲಿ 100 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಯಿತು, ಸೆಮ್ಮಂಜೇರಿಯಲ್ಲಿನ ಮನೆಗಳ ಒಳಗೆ ಒಂದು ಅಡಿಯಷ್ಟು ಮತ್ತು ಮನೆಗಳ ಹೊರಗೆ 2 ಅಡಿಗಳಷ್ಟು ನೀರು ನಿಂತಿತು.















