ವಸೀಮ್ ಅಕ್ರಮ್ ಬಜರ್ಡಿಹಾದ ಕಿರಿದಾದ ಬೀದಿಗಳಲ್ಲಿ ಪವರ್ ಲೂಮ್‌ಗಳ ಸದ್ದಿನ ನಡುವೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಬನಾರಸಿ ಸೀರೆಗಳನ್ನು ನೇಯುವ ಪರಂಪರೆಗೆ ಸೇರಿದ ಅವರ ಕುಟುಂಬದ ಹಲವು ತಲೆಮಾರುಗಳಿಗೆ ಸಾಕ್ಷಿಯಾಗಿರುವ ಅದೇ ಎರಡು ಅಂತಸ್ತಿನ ಇಟ್ಟಿಗೆ-ಸಿಮೆಂಟ್ ಮನೆಯಲ್ಲಿ ತನ್ನ 14ನೇ ವಯಸ್ಸಿನಿಂದಲೂ ಈ ನೇಯ್ಗೆ ಕೆಲಸವನ್ನು ಮಾಡುತ್ತಿದ್ದಾರೆ.
ಅವರ ಅಜ್ಜ-ಮುತ್ತಜ್ಜರು ಕೈಮಗ್ಗದಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರ ಪೀಳಿಗೆಯ ಹೆಚ್ಚಿನವರು ಪವರ್ ಲೂಮ್ ಮೂಲಕ ನೇಯ್ಗೆ ಕಲಿತರು. 2000ನೇ ಇಸವಿಯ ವೇಳೆಗೆ ಇಲ್ಲಿ ಪವರ್‌ಲೂಮ್‌ಗಳು ಬಂದಿದ್ದವು ಎಂದು 32 ವರ್ಷದ ವಾಸಿಂ ಹೇಳುತ್ತಾರೆ. "ನಾನು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ನೇರವಾಗಿ ಮಗ್ಗದ ಕೆಲಸವನ್ನೇ ಕಲಿತೆ"
ವಾರಣಾಸಿಯ ಬಜಾರ್ಡಿಹಾ ಪ್ರದೇಶದಲ್ಲಿ, 1,000ಕ್ಕೂ ಹೆಚ್ಚು ಕುಟುಂಬಗಳು (ಸ್ಥಳೀಯ ನೇಕಾರರ ಅಂದಾಜಿನ ಪ್ರಕಾರ) ನೇಕಾರ ಸಮುದಾಯಕ್ಕೆ ಸೇರಿವೆ ಮತ್ತು ನೇಯ್ಗೆ ಕೆಲಸ ಮಾಡುತ್ತಾರೆ. ಅವರು ಸಗಟು ವ್ಯಾಪಾರಿಗಳಿಂದ ಆರ್ಡರ್‌ಗಳು, ಸಾಲಗಳು ಮತ್ತು ಸಂಗ್ರಹಗಳನ್ನು ಸುರಕ್ಷಿತವಾಗಿರಿಸಲು ಪರಸ್ಪರ ಸಹಕಾರ ನೀಡುತ್ತಾರೆ ಮತ್ತು ಪ್ರತಿಯೊಬ್ಬರಿಗೂ ಕೆಲಸ ಸಿಗುವಂತೆ ನೋಡಿಕೊಳ್ಳುತ್ತಾರೆ.
ಆದರೆ ಮಾರ್ಚ್ 2020ರಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದಾಗಿ, ಮಗ್ಗಗಳು ತಮ್ಮ ಸದ್ದು ನಿಲ್ಲಿಸಿ ಮೌನವಾಗಿದ್ದವು. ಇಲ್ಲಿನ ಬುನಕಾರರು (ಮಗ್ಗದ ಮಾಲೀಕರು ಮತ್ತು ನೇಯ್ಗೆ ವ್ಯಾಪಾರದಲ್ಲಿ ತೊಡಗಿರುವ ಇತರ ಜನರನ್ನು ಸ್ಥಳೀಯವಾಗಿ ಕರೆಯುವ ಹೆಸರು) ಯಾವುದೇ ಕೆಲಸವಿಲ್ಲದೆ ಕುಳಿತಿದ್ದರು. ಆ ಸಮಯದಲ್ಲಿ ಸೀರೆಯ ಆರ್ಡರ್‌ಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಮಗ್ಗದ ಮನೆಗಳನ್ನು ಮುಚ್ಚಲಾಗಿತ್ತು. ವಾಸಿಮ್ ಹೇಳುತ್ತಾರೆ, “ಲಾಕ್‌ಡೌನ್‌ನ ಮೊದಲ 2-4 ತಿಂಗಳುಗಳಲ್ಲಿ ನನ್ನ ಎಲ್ಲಾ ಉಳಿತಾಯವು ಖರ್ಚಾಯಿತು. ನಾನು [ರಾಜ್ಯ ನಡೆಸುತ್ತಿರುವ] ನೇಕಾರರ ಸೇವಾ ಕೇಂದ್ರಕ್ಕೆ ಹೋದೆ ಮತ್ತು ನಮಗೆ [ಆ ಅವಧಿಗೆ] ಯಾವುದಾದರೂ ಸರ್ಕಾರದ ಯೋಜನೆ ಇದೆಯೇ ಎಂದು ಕೇಳಿದೆ; ಆದರೆ ಅಲ್ಲಿ ಯಾವುದೇ ಯೋಜನೆ ಇರಲಿಲ್ಲ."







