"ತುರ್ತು ಸಂದರ್ಭಗಳಲ್ಲಿ ನಾನು ಇಲ್ಲಿಯೇ ಎಲ್ಲವನ್ನೂ ಮುಗಿಸಿಕೊಳ್ಳುತ್ತೇನೆ" ಎಂದು ದಡ್ಡವಾಗಿ ಬೆಳೆದಿರುವ ಮುಳ್ಳುಗಂಟಿ ಚಹಾ ಗಿಡಗಳ ನಡುವೆ ಇರುವ ಜಾಗವನ್ನು ತೋರಿಸುತ್ತಾ ದಿಯಾ ಟೊಪ್ಪೊ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. “ಇವತ್ತು ಬೆಳಿಗ್ಗೆ ಜೇನುನೊಣವೊಂದು ನನಗೆ ಕಚ್ಚಿತು; ನಿಮಗೆ ಇಲ್ಲಿ ಹಾವುಗಳೂ ಕಚ್ಚಬಹುದು,” ಎಂದು ಅವರು ಆತಂಕದಿಂದ ಹೇಳುತ್ತಾರೆ.
ಕೂಲಿ ಕಾರ್ಮಿಕರ ದಿನನಿತ್ಯದ ಕೆಲಸದ ಪರಿಸ್ಥಿತಿ ಕಠಿಣವಾಗಿ ಪರಿಣಮಿಸಿದೆ, ಆದರಲ್ಲೂ ನೀವು ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯಾಗಿದ್ದರೆ ಸಂಡಾಸಿಗೆ ಹೋಗಲು ಬ್ರೇಕ್ ತೆಗೆದುಕೊಳ್ಳುವುದೂ ಅಪಾಯಗಳನ್ನು ಮೈಮೇಲೆ ಎಳೆದುಕೊಂಡಂತೆ.
“ಬಾಲ್ಯದಲ್ಲಿ ಅನೇಕ ಬಾರಿ ನಾನು ಸಂಡಾಸಿಗೆ ಹೋಗಲು ನಾನು ಕ್ವಾರ್ಟರ್ಸ್ಗೆ ಸೈಕಲ್ ನಲ್ಲಿ ಹೋಗಲು ಯೋಚಿಸುತ್ತಿದ್ದೆ,” ಎಂದು 53 ವರ್ಷ ಪ್ರಾಯದ ಆ ಕಾರ್ಮಿಕೆ ಹೇಳುತ್ತಾರೆ. ಆದರೆ ಅದಕ್ಕೆ ಹಿಡಿಯುವ ಸಮಯ ಚಹಾ ಎಲೆಗಳನ್ನು ಕೀಳುವ ಕೆಲಸದ ಸಮಯವನ್ನು ಕಡಿಮೆ ಮಾಡುತ್ತದೆ: “ನಾನು [ಎಲೆಗಳನ್ನು ಕೀಳುವ] ದೈನಂದಿನ ಟಾರ್ಗೆಟನ್ನು ಪೂರ್ಣಗೊಳಿಸಬೇಕು. ನನಗೆ ರಿಸ್ಕ್ ತೆಗೆದುಕೊಳ್ಳಲು (ವೇತನ ಕಡಿತ) ಸಾಧ್ಯವಿಲ್ಲ,” ಎಂದು ಮುಂದುವರಿಸುತ್ತಾರೆ.
ಅವರ ಸಹೋದ್ಯೋಗಿ ಸುನಿತಾ ಕಿಸ್ಕು (ಹೆಸರು ಬದಲಾಯಿಸಲಾಗಿದೆ) ಅವರು “ನಮ್ಮಲ್ಲಿ ಎರಡು ಆಯ್ಕೆಗಳಿವೆ, ಒಂದೋ ಇಡೀ ದಿನ [ಮೂತ್ರ ವಿಸರ್ಜನೆಯನ್ನು] ನಿಯಂತ್ರಿಸಿಕೊಳ್ಳುವುದು ಇಲ್ಲವೇ ಇಲ್ಲೇ ಎಲ್ಲಾದರೂ ಜಾಗದಲ್ಲಿ ಮೂತ್ರ ಮಾಡುವುದು. ಆದರೆ ಇಲ್ಲಿರುವ ಕೀಟಗಳು ಮತ್ತು ಜಿಗಣೆಗಳನ್ನು ನೋಡಿದರೆ ತುಂಬಾ ಭಯವಾಗುತ್ತದೆ,” ಎನ್ನುತ್ತಾರೆ.
ಕೆಲವು ಟೀ ಕಂಪನಿಗಳು ಛತ್ರಿ, ಚಪ್ಪಲ್ (ಸ್ಯಾಂಡಲ್), ಟ್ರಿಪೋಲ್ (ಟಾರ್ಪೌಲಿನ್) ಮತ್ತು ಜುರಿ (ಬ್ಯಾಗ್) ಗಳನ್ನು ಕೊಡುತ್ತವೆ. “ಟ್ರಿಪೋಲ್ ಗಿಡಗಳಲ್ಲಿರುವ ನೀರಿನಿಂದ ನಮ್ಮ ಬಟ್ಟೆಗಳು ಒದ್ದೆಯಾಗದಂತೆ ರಕ್ಷಿಸುತ್ತದೆ. ಬೂಟುಗಳಂತಹ ಇತರ ವಸ್ತುಗಳನ್ನು ನಾವೇ ಖರೀದಿಸಬೇಕು” ಎನ್ನುತ್ತಾರೆ ದಿಯಾ.
"ನಾವು ಸತತವಾಗಿ 10 ಗಂಟೆಗಳ ಕಾಲ ಕೆಲಸ ಮಾಡಬೇಕು" ಎಂದು 26 ವರ್ಷದ ಸುನೀತಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಅವರು ಶೌಚಾಲಯಕ್ಕೆ ಹೋಗಲು ಕೆಲಸ ಮಾಡುವ ತೋಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಹೋದರೆ ಕೆಲವು ಗಂಟೆಗಳ ಸಂಬಳವನ್ನು ಕಳೆದುಕೊಳ್ಳುತ್ತಾರೆ. ಎರಡು ಮಕ್ಕಳ ತಾಯಿಯಾಗಿರುವ ಇವರಿಗೆ ಇದು ಸಣ್ಣ ವಿಷಯವಲ್ಲ.









