ಲಾತೂರ್ ನಗರದಲ್ಲಿ ತನ್ನ ಶಾಲೆಯನ್ನು ಮುಚ್ಚಿದ್ದರ ಬಗ್ಗೆ ಪಾರಾಸ್ ಮದಿಕರ್ ಯಾವುದೇ 11 ವರ್ಷದ ವಿದ್ಯಾರ್ಥಿ ಪ್ರತಿಕ್ರಿಯಿಸಬಹುದಾದ ರೀತಿಯಲ್ಲಿಯೇ ಪ್ರತಿಕ್ರಿಯಿಸಿದ್ದ. ತಮ್ಮ 4ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಮತ್ತು ರಜೆ ಮತ್ತಷ್ಟು ವಿಸ್ತರಿಸಲಾಗುವುದು ಎಂದು ಅವನು ಸಂತೋಷಪಟ್ಟಿದ್ದ.
ಆದರೆ ಆ ರೀತಿ ಆಗಲಿಲ್ಲ. ಅವನ ತಂದೆ, 45 ವರ್ಷದ ಶ್ರೀಕಾಂತ್, ತನ್ನ ಡ್ರೈವರ್ ಕೆಲಸ ಕಳೆದುಕೊಂಡಿದ್ದರು ಮತ್ತು ಅವರು ಸಿಕ್ಕಿದ ಕೆಲಸವನ್ನು ಮಾಡಬೇಕಾದ ಒತ್ತಡಕ್ಕೆ ಸಿಲುಕಿದರು. ಅದೂ ಅವರ ಹಿಂದಿನ ಆದಾಯದ ಮೂರನೇ ಎರಡರಷ್ಟು ಕಡಿಮೆಗೆ. ಮಾರ್ಚ್ 25ರಂದು ಲಾಕ್ ಡೌನ್ ಘೋಷಿಸಿದ ನಂತರ, ತಾಯಿ 35 ವರ್ಷದ ಸರಿತಾ ಸಹ ತಾವು ಮಾಡುತ್ತಿದ್ದ ಅಡುಗೆ ಕೆಲಸವನ್ನು ಕಳೆದುಕೊಂಡರು.
ಪಾರಸ್ ದಿನದ ಆರಂಭದ ಭಾಗವನ್ನು ತನ್ನ ತಲೆಯ ಮೇಲೆ ಸೊಪ್ಪುಗಳನ್ನು ಹೊತ್ತು ಮಾರುವ ಮೂಲಕ ಕಳೆಯುತ್ತಾನೆ. ವಿಪರ್ಯಾಸವೆಂದರೆ, ಈ ಬಡ ವಿದ್ಯಾರ್ಥಿ ತರಕಾರಿಗಳನ್ನು ಮಾರುವ ಎರಡು ಪ್ರದೇಶಗಳನ್ನು ಸರಸ್ವತಿ ಮತ್ತು ಲಕ್ಷ್ಮಿ ಕಾಲೋನಿ ಎಂದು ಕರೆಯಲಾಗುತ್ತದೆ (ಜ್ಞಾನ ಮತ್ತು ಸಂಪತ್ತಿನ ದೇವತೆಯ ಹೆಸರನ್ನು ಇಡಲಾಗಿದೆ). ಅವನ 12 ವರ್ಷದ ಸಹೋದರಿ, ಸೃಷ್ಟಿ, ರಾಮ್ ನಗರ ಮತ್ತು ಸೀತಾರಾಮ್ ನಗರ ಕಾಲೋನಿಗಳಲ್ಲಿ ತರಕಾರಿಗಳನ್ನು ಮಾರುತ್ತಾಳೆ.
"ಪ್ರತಿದಿನ ಸಂಜೆ ನನ್ನ ಕುತ್ತಿಗೆ ಎಷ್ಟು ನೋಯುತ್ತಿರತ್ತದೆಂದು ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ! ಮನೆಗೆ ತಲುಪಿದಾಗ, ನನ್ನ ತಾಯಿ ಬೆಚ್ಚಗಿನ ಬಟ್ಟೆ ಮತ್ತು ಎಣ್ಣೆಯಿಂದ ಮಸಾಜ್ ಮಾಡುತ್ತಾರೆ, ಇದರಿಂದಾಗಿ ಮರುದಿನ ಬೆಳಿಗ್ಗೆ ನಾನು ಮತ್ತೆ ಭಾರವನ್ನು ಹೊತ್ತುಕೊಳ್ಳಲು ಸಾಧ್ಯವಾಗುತ್ತಿದೆ” ಎಂದು ಪುಟ್ಟ ಪಾರಸ್ ಹೇಳುತ್ತಾನೆ. ಸೃಷ್ಟಿಯ ಸಮಸ್ಯೆ ವಿಭಿನ್ನವಾದುದು: "ಮಧ್ಯಾಹ್ನದ ಹೊತ್ತಿಗೆ ನನ್ನ ಹೊಟ್ಟೆ ಕೆಟ್ಟದಾಗಿ ನೋಯುತ್ತದೆ" ಎಂದು ಅವಳು ಹೇಳುತ್ತಾಳೆ. "ಊಟ ಮಾಡುವ ಮೊದಲು ನಾನು ನಿಂಬೂ ಪಾನಿ ಕುಡಿಯುತ್ತೇನೆ - ಇದು ನನಗೆ ಸ್ವಲ್ಪ ಸಮಾಧಾನ ನೀಡುತ್ತದೆ." ಲಾಕ್‌ಡೌನ್‌ಗೆ ಮೊದಲು ಇಬ್ಬರು ಮಕ್ಕಳಲ್ಲಿ ಯಾರೊಬ್ಬರೂ ದೈಹಿಕ ಶ್ರಮದ ಕೆಲಸವನ್ನು ಮಾಡಿಲ್ಲ. ಈಗ ಅವರು ಕೆಟ್ಟ ಪರಿಸ್ಥಿತಿಯಲ್ಲಿ, ಒಂದು ತುಂಡು ರೊಟ್ಟಿ ಸಂಪಾದಿಸುವ ಸಲುವಾಗಿ ಹೊರಗೆ ಬೀದಿಗಳಲ್ಲಿ ತಿರುಗುತ್ತಿದ್ದಾರೆ.



