ಈ ಬೃಹದಾಕಾರದ ಮರಗಳು ಬೇರು ಸಹಿತವಾಗಿ ಕಿತ್ತು ಬಿದ್ದಿರುವುದನ್ನು ನೋಡಿದಾಗ, ನನಗೆ ನನ್ನ ಮಕ್ಕಳನ್ನು ಕಳೆದುಕೊಂಡಿದ್ದೇನೆ ಎನ್ನಿಸುತ್ತದೆ. ನನ್ನ ಇಡೀ ಜೀವನದಲ್ಲಿ ಮರಗಳು ಮತ್ತು ಸಸ್ಯಗಳೊಂದಿಗೆಯೇ ಬದುಕುತ್ತಾ ಬಂದಿದ್ದೇನೆ" ಎಂದು ತಮ್ಮ ಸುತ್ತಮುತ್ತಲಿನ ವಿನಾಶದ ಚಿತ್ರಣವನ್ನು ನೋಡುತ್ತಾ 40 ರ ಹರೆಯದ ತೋಟದ ಮಾಲಿ ಮದನ್ ಬೈದ್ಯ ವಿವರಿಸುತ್ತಿದ್ದರು. "ಇವು ಕೇವಲ ಮರಗಳಲ್ಲ, ಅವು ಅನೇಕ ಪಕ್ಷಿಗಳು ಮತ್ತು ಚಿಟ್ಟೆಗಳ ನೆಲೆಗಳಾಗಿದ್ದವು. ಅವು ನಮಗೆ ಬಿಸಿಲಿನಲ್ಲಿ ನೆರಳು ನೀಡಿದರೆ, ಮಳೆಯಲ್ಲಿ ಕೊಡೆಗಳಾಗಿದ್ದವು" ಎಂದು ಹೇಳುತ್ತಿದ್ದರು. ಅವರು ವಾಸಿಸುವ ಶಾಹಿದ್ ಸ್ಮೃತಿ ಕಾಲೋನಿ ಬಳಿಯ ಕೋಲ್ಕತ್ತಾದ ಈಸ್ಟರ್ನ್ ಮೆಟ್ರೋಪಾಲಿಟನ್ ಬೈಪಾಸ್ನಲ್ಲಿರುವ ಬೈದ್ಯರವರ ಸ್ವಂತ ನರ್ಸರಿ ಅಪಾರ ಹಾನಿಗೆ ಒಳಗಾಗಿದೆ.
ಮೇ 20ರಂದು ನಗರದ ಸುಮಾರು 5,000 ಬೃಹದಾಕಾರದ ಮರಗಳು ಅಮ್ಫಾನ್ ನಿಂದಾಗಿ ಮುರಿದು ಬಿದ್ದಿವೆ ಎಂದು ಕೋಲ್ಕತಾ ಮಹಾನಗರ ಪಾಲಿಕೆ ಅಂದಾಜಿಸಿದೆ. ಅತಿ ಅಪಾಯಕಾರಿಯೆಂದು ವರ್ಗೀಕರಿಸಲ್ಪಟ್ಟ ಅಮ್ಫಾನ್ ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ 140-150 ಕಿಲೋಮೀಟರ್ ವೇಗದಲ್ಲಿ ಬೀಸಿ 165 ಕಿ.ಮೀ ವೇಗದವರೆಗೂ ತಲುಪಿತ್ತು. ಈ ಚಂಡಮಾರುತದಿಂದಾಗಿ ಕೇವಲ 24 ಗಂಟೆಗಳಲ್ಲಿ 236 ಮಿ.ಮೀ ಮಳೆಯಾಗಿದೆ ಎಂದು ಅಲಿಪೋರ್ ವಿಭಾಗದ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಸುಂದರ್ಬನ್ಸ್ ನಂತಹ ಪ್ರದೇಶಗಳಲ್ಲಿ ಅಮ್ಫಾನ್ ನಿಂದ ಉಂಟಾದ ಹಾನಿಯನ್ನು ಈ ಹಂತದಲ್ಲಿ ಅಂದಾಜು ಮಾಡುವುದು ಕಷ್ಟ. ಕೋಲ್ಕತಾ ಸೇರಿದಂತೆ ಉತ್ತರ ಮತ್ತು ದಕ್ಷಿಣ 24 ಪರಗಣಗಳು ಈ ಚಂಡಮಾರುತದಿಂದ ತತ್ತರಿಸಿಹೋಗಿವೆ. ಈವರೆಗೆ ಕೋಲ್ಕತ್ತಾದಲ್ಲಿ 19 ಮಂದಿ ಸೇರಿದಂತೆ ಕನಿಷ್ಠ 80 ಜನರು ರಾಜ್ಯಾದ್ಯಂತ ಚಂಡಮಾರುತಕ್ಕೆ ಬಲಿಯಾಗಿದ್ದಾರೆ.
ಅನೇಕ ಪ್ರದೇಶಗಳು ಈಗ ತತ್ತರಿಸಿಹೋಗಿವೆ, ಮತ್ತು ಸಾರಿಗೆ ಮತ್ತು ರಸ್ತೆ ಸಂಪರ್ಕಗಳಿಗೆ ಉಂಟಾಗಿರುವ ಹಾನಿ ಜೊತೆಗೆ ಮೇಳೈಸಿದ ಕೊರೋನಾ ಲಾಕ್ ಡೌನ್ ನಿರ್ಬಂಧ ನಿಜಕ್ಕೂ ಮಾರಕವಾಗಿದೆ. ಇದರಿಂದಾಗಿ ಆ ಪ್ರದೇಶಗಳಿಗೆ ಭೇಟಿ ನೀಡುವುದೇ ಈಗ ಅಸಾಧ್ಯವಾಗಿದೆ.ಲಾಕ್ಡೌನ್ನಿಂದ ಉಂಟಾಗಿರುವ ಪರಿಣಾಮಗಳು ಇದನ್ನೂ ಮೀರುವಂತಿವೆ.ಸಾಮಾನ್ಯವಾಗಿ ಇಂತಹ ಕೆಲಸಕ್ಕೆ ಆಸರೆಯಾಗುತ್ತಿದ್ದ ಕಾರ್ಮಿಕರು ಲಾಕ್ಡೌನ್ನಿಂದಾಗಿ ಬಹಳ ಹಿಂದೆಯೇ ನಗರವನ್ನು ತೊರೆದು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿನ ತಮ್ಮ ಗ್ರಾಮಗಳಿಗೆ ತೆರಳಿದ್ದರಿಂದ, ಈಗ ಪುನಃಸ್ಥಾಪನೆ ಪ್ರಯತ್ನಗಳು ಅತ್ಯಂತ ಕಷ್ಟಕರವಾಗಿವೆ.













