"ಇದು ಆಚರಣೆಗೆ ಸೂಕ್ತ ದಿನ. ಹವಾಮಾನ ಕೂಡ ಸುಂದರವಾಗಿದೆ," ಎಂದು ಲೇಹ್ ಜಿಲ್ಲೆಯ ರಸ್ತೆ ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕೆಲಸ ಮಾಡುವ ಪೆಮಾ ರಿಂಚೆನ್ ಹೇಳಿದರು.
ಲಡಾಖ್ನ ಹಾನ್ಲೆ (ಆನ್ಲೆ ಎಂದೂ ಉಚ್ಚರಿಸಲಾಗುತ್ತದೆ) ಗ್ರಾಮದ ನಿವಾಸಿಯಾಗಿರುವ 42 ವರ್ಷದ ರಿಂಚೆನ್ ಟಿಬೆಟಿಯನ್ ಕ್ಯಾಲೆಂಡರಿನ ಪ್ರಮುಖ ಹಬ್ಬವಾದ ಸಗಾ ದಾವಾವನ್ನು ಉಲ್ಲೇಖಿಸುತ್ತಿದ್ದಾರೆ. ಇದನ್ನು ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬೌದ್ಧರು ಆಚರಿಸುತ್ತಾರೆ. ಟಿಬೆಟಿಯನ್ ಭಾಷೆಯಲ್ಲಿ, 'ಸಗಾ' ಎಂದರೆ ನಾಲ್ಕು ಮತ್ತು 'ದಾವಾ' ಎಂಬುದು ತಿಂಗಳು. ಸಗ ದಾವಾ ಮಾಸವನ್ನು 'ಪುಣ್ಯಗಳ ತಿಂಗಳು' ಎಂದು ಕರೆಯಲಾಗುತ್ತದೆ - ಈ ಅವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳಿಗೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
"ಈ ಹಿಂದೆ, ಪ್ರತಿಯೊಂದು ಊರು ಆಯಾ ಪ್ರದೇಶಗಳಲ್ಲಿ ಸಾಗಾ ದಾವಾವನ್ನು ಆಚರಿಸುತ್ತಿತ್ತು. ಆದರೆ ಈ ವರ್ಷ [2022], ಆರು ಊರುಗಳು ಒಟ್ಟಿಗೆ ಆಚರಿಸಲಿವೆ," ಎಂದು ಹನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿರುವ ನಾಗಾ ಎನ್ನುವ ಊರಿನ ನಿವಾಸಿ 44 ವರ್ಷದ ಸೋನಂ ದೋರ್ಜೆ ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಎರಡು ವರ್ಷಗಳ ನಿರ್ಬಂಧಿತ ಆಚರಣೆಗಳ ನಂತರ, ಪುಂಗುಕ್, ಖುಲ್ಡೋ, ನಾಗಾ, ಶಾಡೋ, ಭೋಕ್ ಮತ್ತು ಜಿಂಗ್ಸೋಮಾ ಎನ್ನುವ ಊರುಗಳು ಒಟ್ಟಿಗೆ ಸೇರಿ ಆಚರಿಸಲು ನಿರ್ಧರಿಸದವು. ಈ ವಿರಳ ಜನಸಂಖ್ಯೆಯ ಕುಗ್ರಾಮಗಳು 1,879 ಜನರ ಜನಸಂಖ್ಯೆಯನ್ನು ಹೊಂದಿರುವ ಹಾನ್ಲೆ ಗ್ರಾಮದ ಒಂದು ಭಾಗವಾಗಿದೆ (ಜನಗಣತಿ 2011).
ಬೌದ್ಧರ ಮಹಾಯಾನ ಪಂಥದಿಂದ ಆಚರಿಸಲ್ಪಡುವ ಸಗಾ ದಾವಾವನ್ನು ಟಿಬೆಟಿಯನ್ ಚಾಂದ್ರಮಾನ ಪಂಚಾಂಗದ ನಾಲ್ಕನೇ ತಿಂಗಳಿನ 15ನೇ ದಿನದಂದು ಆಚರಿಸಲಾಗುತ್ತದೆ; 2022ರಲ್ಲಿ, ಇದು ಜೂನ್ ತಿಂಗಳಲ್ಲಿ ಬಂದಿತು. ಟಿಬೆಟಿಯನ್ ಭಾಷೆಯಲ್ಲಿ, 'ಸಗಾ' ನಾಲ್ಕನೇ ಸಂಖ್ಯೆ ಮತ್ತು 'ದಾವಾ' ತಿಂಗಳು. ಸಗಾ ದಾವಾ ಮಾಸವನ್ನು 'ಪುಣ್ಯಗಳ ತಿಂಗಳು' ಎಂದು ಕರೆಯಲಾಗುತ್ತದೆ - ಈ ಅವಧಿಯಲ್ಲಿ ಮಾಡಿದ ಉತ್ತಮ ಕಾರ್ಯಗಳು ಅನೇಕ ಬಾರಿ ಪ್ರತಿಫಲವನ್ನು ಪಡೆಯುತ್ತವೆ ಎಂದು ಹೇಳಲಾಗುತ್ತದೆ. ಈ ಹಬ್ಬವು ಬುದ್ಧನನ್ನು ಸ್ಮರಿಸುತ್ತದೆ ಮತ್ತು ಅವನ ಜನನ, ಜ್ಞಾನೋದಯ ಮತ್ತು ಪರಿನಿರ್ವಾಣ ಅಥವಾ ಸಂಪೂರ್ಣ ನಿರ್ವಾಣವನ್ನು ಸೂಚಿಸುತ್ತದೆ.































