ತಟ್ಟ ಲಕ್ಷ್ಮಿ ಮತ್ತು ಪೋತದ ಲಕ್ಷ್ಮಿ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದಾರೆ. ಟಿ ಲಕ್ಷ್ಮಿ ಅವರಿಗೆ ಸರ್ಕಾರ ಪಾವತಿಸಿದ ಹಣವನ್ನು ಪಿ ಲಕ್ಷ್ಮಿ ಅವರ ಖಾತೆಗೆ ಜಮಾ ಮಾಡಲಾಗಿದೆ - ಮತ್ತು ಪೋತದ ಲಕ್ಷ್ಮಿ ಅವರ ಹಣವನ್ನು ಆಂಧ್ರಪ್ರದೇಶದ ಮುಂಗಪಾಕ್ ಮಂಡಲದಲ್ಲಿರುವ ತಟ್ಟ ಲಕ್ಷ್ಮಿಯವರ ಸ್ಟೇಟ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಹೀಗಾಗಿ ಟಿ. ಲಕ್ಷ್ಮಿ ಇನ್ನೂ ಸರಿಸುಮಾರು 16,000 ರೂ.ಗಳನ್ನು ಪಡೆಯಲು ಕಾಯುತ್ತಿದ್ದಾರೆ, ಮತ್ತು ಪಿ. ಲಕ್ಷ್ಮಿ ಸುಮಾರು 9,000 ರೂ.ಗಳಿಗಾಗಿ ಕಾಯುತ್ತಿದ್ದಾರೆ. ಇಬ್ಬರೂ ಮಹಿಳೆಯರು ದಲಿತರಾಗಿದ್ದಾರೆ, ಇಬ್ಬರಿಗೂ ಭೂಮಿ ಇಲ್ಲ, ಮತ್ತು ಇಬ್ಬರೂ ಮನರೇಗಾ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ - ಮುನಗಪಕ ಗ್ರಾಮದ ಟಿ. ಲಕ್ಷ್ಮಿ ಮತ್ತು ಅದೇ ಮಂಡಲದ ಗಣಪರ್ತಿ ಗ್ರಾಮದ ಪಿ. ಲಕ್ಷ್ಮಿ.
2016-17ನೇ ಸಾಲಿನಲ್ಲಿ ಟಿ.ಲಕ್ಷ್ಮಿ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಅಡಿಯಲ್ಲಿ 95 ದಿನಗಳ ಕಾಲ ಕೆಲಸ ಮಾಡಿದ್ದರು. ಅವರು ತಮ್ಮ ವೇತನವನ್ನು ಪಡೆದಿಲ್ಲ (ಕ್ಷೇತ್ರ ಸಹಾಯಕರು ಪೂರ್ಣ 95 ದಿನಗಳವರೆಗೆ ಲೆಕ್ಕ ಹಾಕುವುದಿಲ್ಲ) ಏಕೆಂದರೆ ಏಪ್ರಿಲ್ 2015ರಿಂದ, ಕಾರ್ಮಿಕರು ತಮ್ಮ ಆಧಾರ್ ಕಾರ್ಡುಗಳನ್ನು ತಮ್ಮ ಮನರೇಗಾ ಜಾಬ್ ಕಾರ್ಡ್ಗಳಿಗೆ ಲಿಂಕ್ ಮಾಡಬೇಕು ಎಂದು ಸರ್ಕಾರ ಒತ್ತಾಯಿಸಿದೆ.
"ಮುನಗಪಕ ಮಂಡಲದ ಕಂಪ್ಯೂಟರ್ ಆಪರೇಟರ್ 18 ಅಂಕಿಯ ಜಾಬ್ ಕಾರ್ಡ್ ಸಂಖ್ಯೆ ಮತ್ತು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಡಿಜಿಟಲೀಕರಣಗೊಳಿಸುವಾಗ ಮಾಡಿದ ತಪ್ಪಿನಿಂದಾಗಿ, ನಾನು ಪಡೆಯಬೇಕಾಗಿದ್ದ ಪಾವತಿಯನ್ನು [ಸದ್ಯಕ್ಕೆ, ಆಕೆಗೆ ನೀಡಬೇಕಾದ ಒಟ್ಟು ಮೊತ್ತದ ಅರ್ಧದಷ್ಟು] ಗಣಪರ್ತಿ ಗ್ರಾಮದ ಪಿ. ಲಕ್ಷ್ಮಿಗೆ ವರ್ಗಾಯಿಸಲಾಯಿತು" ಎಂದು ಅವರು ಹೇಳುತ್ತಾರೆ.







