"ನಾನು ಹುಡುಗನಾಗಿದ್ದಾಗ, ನಮ್ಮ ದ್ವೀಪವು ದೊಡ್ಡ ಹವಳದ ಮೇಲೆ ನಿಂತಿದೆಯೆಂದು ಎಂದು ನನಗೆ ಹೇಳಲಾಗಿತ್ತು. ಎಲ್ಲಾ ಹವಳವು ಕೆಳಗೆ ಇದೆ, ಅದನ್ನು ಎತ್ತಿ ಹಿಡಿದಿದೆ. ಮತ್ತು ನಮ್ಮ ಸುತ್ತಲೂ ಸಾಗರದಿಂದ ನಮ್ಮನ್ನು ರಕ್ಷಿಸುವ ಒಂದು ಆವೃತ ಪ್ರದೇಶವಿದೆ ಹೇಳುತ್ತಿದ್ದರು” ಎಂದು ಬಿತ್ರಾ ದ್ವೀಪದಲ್ಲಿ ವಾಸಿಸುವ 60 ವರ್ಷದ ಮೀನುಗಾರ ಬಿ. ಹೈದರ್ ಹೇಳುತ್ತಾರೆ.
"ನಾನು ಚಿಕ್ಕವನಿದ್ದಾಗ, ಉಬ್ಬರ ಕಡಿಮೆಯಿರುವ ಸಮಯದಲ್ಲಿ ನಾವು ಹವಳಗಳನ್ನು ನೋಡಬಹುದಿತ್ತು" ಎಂದು ಬಿತ್ರಾದ ಮತ್ತೊಬ್ಬ ಮೀನುಗಾರ 60 ವರ್ಷದ ಅಬ್ದುಲ್ ಖಾದರ್ ಹೇಳುತ್ತಾರೆ. "ಅದು ಸುಂದರವಾಗಿತ್ತು. ಈಗ ಅವುಗಳಲ್ಲಿ ಹೆಚ್ಚು ಉಳಿದಿಲ್ಲ. ಆದರೆ ದೊಡ್ಡ ಅಲೆಗಳನ್ನು ದೂರವಿರಿಸಲು ನಮಗೆ ಆ ಹವಳ ಬೇಕು.”
ಲಕ್ಷದ್ವೀಪ ದ್ವೀಪಸಮೂಹದ ದ್ವೀಪಗಳ ಕಥೆಗಳು, ಕಲ್ಪನೆಗಳು, ಜೀವನ, ಜೀವನೋಪಾಯ ಮತ್ತು ಪರಿಸರ ವ್ಯವಸ್ಥೆಗಳ ಕೇಂದ್ರವಾದ ಆ ಹವಳ - ಇಲ್ಲಿನ ಮೀನುಗಾರರು ದಶಕಗಳಿಂದ ಗಮನಿಸುತ್ತಿರುವ ಇತರ ಹಲವು ಬದಲಾವಣೆಗಳ ಜೊತೆಗೆ ನಿಧಾನವಾಗಿ ದೂರವಾಗುತ್ತಿದೆ.
"ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಪ್ರಕೃತಿ ಬದಲಾಗಿದೆ” ಎಂದು ಅಗಟ್ಟಿ ದ್ವೀಪದ 61 ವರ್ಷದ ಮುನಿಯಾಮಿನ್ ಕೆ.ಕೆ. ಹೇಳುತ್ತಾರೆ, ಅವರು ತನ್ನ 22ನೇ ವಯಸ್ಸಿನಲ್ಲಿ ಮೀನುಗಾರಿಕೆ ಪ್ರಾರಂಭಿಸಿದರು. “ಆ ದಿನಗಳಲ್ಲಿ, ಮಾನ್ಸೂನ್ ಸರಿಯಾದ ಸಮಯದಲ್ಲಿ [ಜೂನ್ನಲ್ಲಿ] ಬರುತ್ತಿತ್ತು, ಆದರೆ ಇಂದು ಮಾನ್ಸೂನ್ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ದಿನಗಳಲ್ಲಿ, ಮೀನುಗಳು ಕಡಿಮೆಯಾಗಿವೆ. ಆ ದಿನಗಳಲ್ಲಿ ನಾವು ಮೀನು ಹಿಡಿಯಲು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ, ಮೀನಿನ ಎಲ್ಲಾ ಹಿಂಡುಗಳು ಹತ್ತಿರದಲ್ಲೇ ವಾಸಿಸುತ್ತಿದ್ದವು. ಆದರೆ ಈಗ ಮೀನುಗಳನ್ನು ಹುಡುಕುವ ಜನರು ಹಲವಾರು ದಿನಗಳವರೆಗೆ, ಕೆಲವೊಮ್ಮೆ ವಾರಗಳವರೆಗೆ ಕಡಲಿನಲಿನಲ್ಲಿರುತ್ತಾರೆ"
ಕೇರಳದ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿನ ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಅಗಟ್ಟಿ ಮತ್ತು ಬಿತ್ರಾ ನಡುವಿನ ಅಂತರವು ದೋಣಿಯಲ್ಲಿ ಸುಮಾರು ಏಳು ಗಂಟೆಗಳ ಪ್ರಯಾಣದಷ್ಟು, ಅಲ್ಲಿ ಹೆಚ್ಚು ನುರಿತ ಮೀನುಗಾರರು ವಾಸಿಸುತ್ತಾರೆ. ಮಲಯಾಳಂ ಮತ್ತು ಸಂಸ್ಕೃತ ಎರಡರಲ್ಲೂ 'ಲಕ್ಷದ್ವೀಪ' ಎಂದರೆ ಒಂದು ಲಕ್ಷ ದ್ವೀಪಗಳು. ಆದರೆ ನಮ್ಮ ಯುಗದ ವಾಸ್ತವವೆಂದರೆ, ಈಗ ಕೇವಲ 36 ದ್ವೀಪಗಳಿವೆ, ಅವು ಒಟ್ಟು 32 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿವೆ. ಆದಾಗ್ಯೂ, ದ್ವೀಪಸಮೂಹದ ನೀರು 400,000 ಚದರ ಕಿಲೋಮೀಟರ್ಗಳಷ್ಟು ವ್ಯಾಪಿಸಿದೆ ಮತ್ತು ಸಮುದ್ರ ಜೀವಜಾಲ ಮತ್ತು ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.
ಕೇವಲ ಒಂದು ಜಿಲ್ಲೆಯನ್ನು ಹೊಂದಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ, 64,500 ಜನಸಂಖ್ಯೆಯಲ್ಲಿ (ಜನಗಣತಿ 2011) ಪ್ರತಿ ಏಳನೇ ವ್ಯಕ್ತಿಯು ಮೀನುಗಾರನಾಗಿದ್ದಾನೆ, ಇದು 9,000ಕ್ಕೂ ಹೆಚ್ಚು ಜನರ ವೃತ್ತಿಯಾಗಿದೆ.






