ಕಷ್ಟಗಳನ್ನೇ ಕಂಡಿರುವ ಮನೆಯೊಂದರಲ್ಲಿ - ನಗುವು ಇನ್ನೂ ಉಳಿದಿದೆ.
ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿರುವ ತಮಿಳುನಾಡಿನಲ್ಲಿ - ಹೂವನ್ನು ಅರಳಿಸುತ್ತಿರುವ ಕೃಷಿಭೂಮಿಯೊಂದಿದೆ.
ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆಯಿಂದ ರಾಜ್ಯವು ಬಸವಳಿದಿದ್ದರೆ - ಇಲ್ಲೊಂದು ಚಿಕ್ಕ ತುಂಡುಭೂಮಿಯಲ್ಲಿ ಸಾವಯವ ಗೊಬ್ಬರಗಳನ್ನೇ ಬಳಸಲಾಗುತ್ತಿದೆ.
ಭೀಕರ ಕೃಷಿ ವಿಕೋಪದ ಮಧ್ಯದಲ್ಲೂ - ಇಬ್ಬರು ಮಕ್ಕಳನ್ನು ಹೊಂದಿರುವ ಈ ಏಕಾಂಗಿ ತಾಯಿ ಲೆಕ್ಕಾಚಾರದ ಹೆಜ್ಜೆಗಳನ್ನಿಟ್ಟು ಸೆಣಸಾಡುತ್ತಿದ್ದಾಳೆ. ಅಲ್ಲದೆ ಈವರೆಗಿನ ಪಯಣದಲ್ಲಿ ಕೃಷಿಕಳಾಗಿ ಏಳಿಗೆಯನ್ನೂ ಕಂಡಿದ್ದಾಳೆ.
`ಪರಿ' ತಂಡದಿಂದ ಮೊಟ್ಟಮೊದಲ ಬಾರಿಗೆ ವರದಿಯಾಗಿದ್ದ ಚಂದ್ರಾಳ ಕಥೆಯು ಮುಂದೆ ಚೆನ್ನೈಯಲ್ಲೂ ಗುರುತಿಸಲ್ಪಟ್ಟು, 'ಗೃಹೋದ್ಯಮಿ' ಪ್ರಶಸ್ತಿಗೆ ಪಾತ್ರಳಾದ ಚಂದ್ರಾ ಪುರಸ್ಕಾರವನ್ನು ಸ್ವೀಕರಿಸಲು ಈ ವಾರ ಚೆನ್ನೈಗೆ ತೆರಳಿದ್ದಳು. 'ಮನೆಯಲ್ಲಿದ್ದುಕೊಂಡೇ ಉದ್ಯಮಗಳನ್ನು ನಡೆಸುವ ಮಹಿಳೆಯರಿಗೆ' ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಶಿವಗಂಗೈ ಜಿಲ್ಲೆಯ ಮುತ್ತೂರು ಹಳ್ಳಿಯಲ್ಲಿರುವ ಮೇಲಕಾಡು ಎಂಬ ಬಸ್ತಿಯೊಂದರಲ್ಲಿ ನೆಲೆಸಿರುವ ಚಂದ್ರಾ ಸುಬ್ರಮಣ್ಯನ್ ಯಾವ ಪುರುಷ ಕೃಷಿಕನಿಗೂ ಕಮ್ಮಿಯಿಲ್ಲವೆಂಬಂತೆ ಅವರಿಗಿಂತ ಹೆಚ್ಚು ಶ್ರಮಪಟ್ಟು ದುಡಿಯುವ ಛಾತಿಯುಳ್ಳವರು. ಕೆಲಸದ ಅವಧಿಯಲ್ಲಿ ಬಾಲಕರು ಧರಿಸುವ ದಿರಿಸನ್ನು ಹಾಕಿಕೊಂಡಿರುವ ಚಂದ್ರಾ ''ಇದು ನನ್ನ ಮಗನ ಅಂಗಿ'' ಎನ್ನುತ್ತಾ ಮುಸಿಮುಸಿ ನಗುತ್ತಿದ್ದಾಳೆ. 29 ರ ಪ್ರಾಯದ ಚಂದ್ರಾಳ ಮಗನಿಗೀಗ 10 ರ ಪ್ರಾಯ. ತನ್ನ ನೈಟಿಯ ಮೇಲೆ ಈ ಅಂಗಿಯನ್ನು ಧರಿಸಿರುವ ಈಕೆ, ಮೈಮೇಲೆ ಹೀಗೆ ಪದರಗಳಲ್ಲಿ ಬಟ್ಟೆಗಳನ್ನು ಧರಿಸಿದ್ದರೂ ಮುಂಚೆಗಿಂತ ಮತ್ತಷ್ಟು ತೆಳ್ಳಗಾದವಳಂತೆ ಕಾಣುತ್ತಿದ್ದಾಳೆ. ಯಾಕಿಷ್ಟು ತೆಳ್ಳಗಾಗುತ್ತಾ ಹೋಗುತ್ತಿರುವೆ ಎಂದು ಕೇಳಿದರೆ ತನ್ನ ಜಮೀನಿನ ಸುತ್ತ ತಾನೇ ಕೈಯಾರೆ ನಿರ್ಮಿಸಿರುವ ವರಪ್ಪು (ಪಾಗಾರ) ವನ್ನು ತೋರಿಸಿ ''ಸಿಕ್ಕಾಪಟ್ಟೆ ಕೆಲಸ'' ಅನ್ನುತ್ತಾಳೆ ಈಕೆ. ''ಈ ಭಾಗದಲ್ಲಿ ತೀರಾ ಸಪೂರವಾಗಿತ್ತು. ಹೀಗಾಗಿ ಮರಳನ್ನು ಹಾಕಿ ಇದನ್ನು ಸದೃಢಗೊಳಿಸಿದೆ'', ಎನ್ನುತ್ತಿದ್ದಾಳೆ ಚಂದ್ರಾ. ಅಂದಹಾಗೆ ಈ ಕೆಲಸದ ಬಗ್ಗೆ ಯೋಚಿಸಿಯೇ ಬಹಳಷ್ಟು ಗಂಡಸರು ಇದರ ಸಹವಾಸವೇ ಬೇಡವೆಂದು ದೈನ್ಯದಿಂದ ಕೇಳಿಕೊಳ್ಳುವುದನ್ನು ನಾನು ನೋಡಿದ್ದೇನೆ.






