ಕಳೆದ ಕೆಲ ವರ್ಷಗಳಿಂದ ದಿಲೀಪ್ ಕೋಲಿಯವರು ಹಲವಾರು ಏರುಪೇರುಗಳನ್ನು ಕಂಡಿದ್ದರು. ಮೀನುಗಳು ಸಿಗದಿರುವುದು, ಮಾರಾಟದ ಇಳಿಕೆ ಮತ್ತು ಚಂಡಮಾರುತಗಳ ಹೊಡೆತ, ಇಂತಹ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ 2020 ರ ಮಾರ್ಚ್ನಿಂದ ಶುರುವಾಗಿದ್ದ ಲಾಕ್ ಡೌನ್ ದಿನಗಳು ಮಾತ್ರ ಅದೆಲ್ಲವುಗಳಿಗಿಂತಲೂ ತುಂಬಾ ಕಠಿಣವಾಗಿದ್ದವು.
“ಲಾಕ್ ಡೌನ್ ದಿನಗಳಿಗೆ ಹೋಲಿಸಿದರೆ, ನಾವು ಮೊದಲು ಅನುಭವಿಸಿದ್ದು ಅದರ ಅರ್ಧಕ್ಕೂ ಸಮವಿಲ್ಲ. ಆ ದಿನಗಳು ಹೇಗಿದ್ದವೆಂದರೆ, ಮೀನು ಹಿಡಿಯುವ ಜನರು ಹಿಡಿಯಲು ತಯಾರಿದ್ದರು, ಮೀನು ತಿನ್ನುವ ಜನರ ತಿನ್ನಲು ತಯಾರಿದ್ದರು. ಆದರೆ ವ್ಯಾಪಾರ ಮಾಡಲಿಕ್ಕೇ ಅನುಕೂಲ ಇದ್ದಿಲ್ಲ ಕಣ್ರೀ (ಸೆಪ್ಟಂಬರ್ 2020ರ ತನಕ, ಲಾಕ್ಡೌನ್ನಿಂದಾಗಿ). ಹಿಡಿದ ಮೀನುಗಳನ್ನು ವಾಪಸ್ಸು ಸಮುದ್ರಕ್ಕೇ ಎಸೆದು ಬರಬೇಕಾದಂತ ಪರಿಸ್ಥಿತಿಯಿತ್ತು” ಅಂದರು ದಿಲೀಪ್.
ಸುಮಾರು ಐವತ್ತು ವರ್ಷದವರಾದ ದಿಲೀಪ್, ದಕ್ಷಿಣ ಮುಂಬಯಿಯ ಕೋಲಾಬಾ ಪ್ರದೇಶದ ಕೋಲೀವಾಡದವರು. ಕಳೆದ ಮೂವತ್ತೈದು ವರ್ಷಗಳಿಂದ ದಕ್ಷಿಣ ಮುಂಬಯಿಯ ಸಸೂನ್ ಹಡಗುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ʼʼಲಾಕ್ ಡೌನ್ನಲ್ಲಿ ನಮಗೆ ಕನಿಷ್ಟ ದಿನಸಿ ಸಾಮಾನುಗಳನ್ನಾದರೂ ಕೊಳ್ಳಲು ಆಗುತ್ತಿತ್ತು. ಆದರೆ ನಮ್ಮ ಕೆಲವು ಹತ್ತಿರದ ಜನರು ಉಣ್ಣಲಿಕ್ಕೆ ಅನ್ನವಿಲ್ಲದೇ, ಕೊಳ್ಳಲು ಹಣವಿಲ್ಲದೇ, ಆ ಕೆಟ್ಟ ದಿನಗಳನ್ನು ಕಳೆದಿದ್ದರು” ಎಂದು ನಿಟ್ಟುಸಿರಿಟ್ಟರು.
ಇಲ್ಲಿನ ಮೀನುಗಾರರು ಮಳೆಗಾಲದಲ್ಲಿ ಮುಂಜಾನೆ ನಾಲ್ಕು ಗಂಟೆಗೇ ಕೆಲಸ ಶುರು ಮಾಡುತ್ತಾರೆ. ದಡದಿಂದ ತೀರಾ ದೂರ ಹೋಗದಂತೆ, ಸಮುದ್ರದೊಳಗೆ ನಲವತ್ತು ನಿಮಿಷಗಳ ಸುತ್ತುಗಳನ್ನು ಹಾಕುತ್ತಿರುತ್ತಾರೆ. ಆದರೆ ಅಲೆಗಳು ಬದಲಾಗುವ ಸಮಯದಲ್ಲಿ ಮಾತ್ರ ಸುಮಾರು ಒಂದು ಗಂಟೆಯ ಕಾಲ ಕಾದಿದ್ದು, ನಂತರ ಸಮದ್ರಕ್ಕೆ ಇಳಿಯುವುದು ರೂಢಿ. ಈ ಉಬ್ಬರವಿಳಿತಗಳ ಸೂಚನೆಗಳನ್ನೆಲ್ಲಾ ಚಂದ್ರನನ್ನು ನೋಡಿಯೇ ಗೊತ್ತುಮಾಡಿಕೊಳ್ಳುತ್ತಾರಾದ್ದರಿಂದ ಆ ಸಮಯದಲ್ಲಿ ಸಮುದ್ರಕ್ಕೆ ಇಳಿಯುವುದಿಲ್ಲ. ಹೀಗೆ ಮುಂಜಾನೆ ಹಿಡಿದ ಕೆಲಸ, ಮದ್ಯಾಹ್ನ ಎರಡಕ್ಕೋ ಮೂರಕ್ಕೋ ಮುಗಿಯುತ್ತದೆ.
ದಿಲೀಪ್ ಅವರು ʼಕೋಲಿʼ ಎಂಬ ಸಮುದಾಯಕ್ಕೆ ಸೇರಿದವರು. ಅದೇ ಸಮುದಾಯಕ್ಕೆ ಸೇರಿದ ಕೆಲವರು ದಿಲೀಪ್ ಅವರ ಹಡಗಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರೆಲ್ಲಾ ಅಲ್ಲಿಂದ ಸುಮಾರು 140 ಕಿಲೋಮೀಟರ್ ದೂರದ, ರಾಯಗಢ ಜಿಲ್ಲೆಯ ತಲ ತಾಲೂಕಿಗೆ ಸೇರಿದ ವಾಶಿ ಹವೇಲಿ ಎನ್ನುವ, ಸುಮಾರು ಒಂದು ಸಾವಿರದಷ್ಟು (1040 ಜನಸಂಖ್ಯೆ) ಜನರಿರುವ ಒಂದು ಸಣ್ಣ ಊರಿನಿಂದ ಬಂದವರು. ಪ್ರತೀವರ್ಷ ಜೂನ್ ನಿಂದ ಅಗಸ್ಟ್ ವರೆಗೆ, ಅಂದರೆ ಗಣೇಶ ಹಬ್ಬದವರೆಗೂ ಅಲ್ಲಿ ಕೆಲಸ ಮಾಡಿ, ಮುಂದೆ ಮತ್ತೆ ಬೇರೆ ಬೇರೆ ಕರಾವಳಿ ಊರುಗಳಲ್ಲಿ ಕೆಲಸ ನೋಡಿಕೊಳ್ಳುತ್ತಾರೆ. ಮುಖ್ಯವಾಗಿ ರತ್ನಗಿರಿ ಮತ್ತು ರಾಯಗಢಗಳಲ್ಲಿ ಉಳಿದುಕೊಳ್ಳುವ ಅವರು, ಬೇರೆಯವರ ಹಡಗುಗಳಲ್ಲಿ ಕೆಲಸ ಮಾಡಿ ತಿಂಗಳಿಗೆ 10,000-12,000 ರೂಪಾಯಿಗಳಷ್ಟು ಸಂಪಾದಿಸುತ್ತಾರೆ.























