ಶಿವಪೂಜನ್ ಪಾಂಡೆ ತನಗೆ ಇನ್ನೊಬ್ಬ ಟ್ಯಾಕ್ಸಿ ಡ್ರೈವರ್‌ನಿಂದ ಪೋನ್ ಕರೆ ಬಂದಾಗ, ತಾನು ತುರ್ತು ತತ್ಕಾಲ್ ರೈಲ್ವೆ ಟಿಕೆಟ್ ಖರೀದಿಸಿ ಜುಲೈ 4ರಂದು ಉತ್ತರ ಪ್ರದೇಶದ ಮಿರ್ಜಾಪುರ ನಿಲ್ದಾಣದಿಂದ ರೈಲು ಹತ್ತಿದರು.
ಮರುದಿನ ಮುಂಬೈ ತಲುಪಿದರು. ಆದರೆ ಅವರು ಅಲ್ಲಿಗೆ ತಕ್ಷಣ ಆಗಮಿಸಿದರೂ ಕೂಡ, 63 ವರ್ಷದ ಶಿವಪೂಜನ್ ಅವರಿಗೆ ತಮ್ಮ ಟ್ಯಾಕ್ಸಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕೊರೊನಾ ಸಾಂಕ್ರಾಮಿಕ-ಲಾಕ್‌ಡೌನ್ ಸಂದರ್ಭದಲ್ಲಿ ಹಲವಾರು ತಿಂಗಳುಗಳಿಂದ ನಗರದ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ 42 ಕ್ಯಾಬ್‌ಗಳಲ್ಲಿ ಒಂದಾಗಿದ್ದ ಕ್ಯಾಬ್ ಅನ್ನು ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಮೂಲಕ ಹರಾಜು ಮಾಡಲಾಗಿತ್ತು.
ಇದರಿಂದಾಗಿ ಶಿವಪೂಜನ್ ಅವರು ತಮ್ಮ ಜೀವನಾದರವನ್ನು ಕಳೆದುಕೊಂಡಿದ್ದಾರೆ-ಅವರು 1987ರಿಂದ ಟ್ಯಾಕ್ಸಿ ಓಡಿಸುತ್ತಿದ್ದರು ಮತ್ತು 2009ರಲ್ಲಿ ತಮ್ಮದೇ ಆದ ಕಪ್ಪು-ಹಳದಿ ಬಣ್ಣದ ಮಾರುತಿ ಓಮ್ನಿ ಕಾರನ್ನು ಸಾಲ ಮಾಡಿ ಖರೀದಿಸಿದ್ದರು.
“ಹಿಂಗ್ ಮಾಡೋದರಿಂದ ಅವರಿಗೆ ಏನ್ ಸಿಗುತ್ತೆ ಹೇಳಿ?” ನನ್ನ ಇಡೀ ಜೀವನವನ್ನು ಈ ಕೆಲ್ಸಾ ಮಾಡುದರಲ್ಲಿಯೇ ನಾನು ಕಳೆದಿದ್ದೇನೆ ಮತ್ತು ನಮ್ಮ ಕಡೆ ಇರುವ ಅಲ್ಪ ಸ್ವಲ್ಪ ದುಡಿಮೆಯನ್ನೆಲ್ಲಾ ಈಗ ಅವರು ಕಸಿದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ನಮಗೆ ಮಾಡಬಹುದಾದ ಕೆಟ್ಟ ಕೆಲಸವೆಂದರೆ ಇದು” ಎಂದು ಮಧ್ಯಾಹ್ನದ ವೇಳೆ ಸಹಾರ್ ವಿಮಾನ ನಿಲ್ದಾಣದ ಪೂಟ್ ಪಾತ್ ಮೇಲೆ ನಿಂತು ಅವರು ಆಕ್ರೋಶದಿಂದ ಪ್ರಶ್ನಿಸಿದರು.
ಸಂಜಯ್ ಮಾಲಿ ಅವರು ಕೂಡ ಇತ್ತೀಚೆಗೆ ಎದುರಿಸಿದ ಅತಿ ಕೆಟ್ಟ ಜುಲ್ಮಾನೆ ಇದಾಗಿದೆ. ಅವರ ವ್ಯಾಗನ್-ಆರ್ 'ಕೂಲ್ ಕ್ಯಾಬ್' ಮಾರ್ಚ್ 2020ರಿಂದ ಉತ್ತರ ಮುಂಬೈನ ಮರೋಲ್ ಪ್ರದೇಶದ ಅನ್ನವಾಡಿಯಲ್ಲಿ ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿತ್ತು, ಇದು ಸಹಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಷ್ಟೇನೂ ದೂರವಿಲ್ಲ.
ಜೂನ್ 29, 2021 ರ ರಾತ್ರಿ, ಅವರ ಕ್ಯಾಬ್ ಅನ್ನು ಪಾರ್ಕಿಂಗ್ ಸ್ಥಳದಿಂದ ತೆರವುಗೊಳಿಸಲಾಯಿತು. ಮರುದಿನ ಸ್ನೇಹಿತರೊಬ್ಬರು ಈ ವಿಚಾರವಾಗಿ ಮಾಹಿತಿ ನೀಡಿದರು. “ಏನಾಯಿತು ಎಂದು ಆಗ ನನಗೆ ಅರ್ಥವಾಗಲಿಲ್ಲ,” ಎಂದು 42 ವರ್ಷದ ಸಂಜಯ್ ಹೇಳುತ್ತಾರೆ.














