ಅತ ಸಂಜೆಯಾದರೆ ನಿರ್ಜನ ಉದ್ಯಾನವನಕ್ಕೆ ಹೋಗುತ್ತಿದ್ದ. ಒಂದು ಸಣ್ಣ ಫೋನ್ ಮತ್ತು ಕೈಯಲ್ಲಿ ದೊಡ್ಡ ಕೋಲು ಹಿಡಿದುಕೊಂಡು ಅಲ್ಲಿಯೇ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದ. ಒಂದು ವರ್ಷದೊಳಗೆ ಎರಡನೇ ಬಾರಿಗೆ, ಆ ಉದ್ಯಾನದಲ್ಲಿ ವಿಚಿತ್ರ ಮೌನ ನೆಲೆಯಾಗಿತ್ತು. ಮಕ್ಕಳು ಮತ್ತು ವೃದ್ಧರು ಮತ್ತೊಮ್ಮೆ ತಮ್ಮ ಮನೆಗಳಲ್ಲೇ ಉಳಿದು ಹೋಗಿದ್ದರು.
ಆತ ಕೆಲವು ದಿನಗಳಿಂದ ಉದ್ಯಾನವನದಲ್ಲಿ ಸುತ್ತಾಡಲು ಹೋಗುತ್ತಿದ್ದ. ಕತ್ತಲು ಹೆಚ್ಚಾಗುತ್ತಿದ್ದಂತೆ, ಬೀದಿದೀಪಗಳು ಬೆಳಗಲಾರಂಭಿಸಿ ಮರಗಳ ನೆರಳುಗಳು ನೆಲದ ಮೇಲೆ ಬೀಳಲು ಆರಂಭಿಸಿದ್ದವು. ತಣ್ಣನೆಯ ಗಾಳಿ ಬೀಸಲಾರಂಭಿಸಿತ್ತು, ನೆಲದ ಮೇಲೆ ಬಿದ್ದಿರುವ ಒಣ ಎಲೆಗಳು ಮನಸ್ಸನ್ನು ತಮ್ಮತ್ತ ಸೆಳೆಯುತ್ತಿದ್ದವು. ಆದರೂ ಆತನ ಮನಸ್ಸಿನಲ್ಲಿ ಕತ್ತಲು ಆಳವಾಗುತ್ತಿತ್ತು. ಆತ ಗಂಟೆಗಟ್ಟಲೆ ಶಾಂತವಾಗಿ ಕುಳಿತಿದ್ದ, ಆದರೆ ಅವನ ಎದೆಯೊಳಗೆ ದೊಡ್ಡ ಗಲಭೆಯೇ ಎದ್ದಿತ್ತು.
ಸುಮಾರು 25 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಇಲ್ಲಿನ ಸುತ್ತಮುತ್ತಲಿನವರಿಗೆ ಪರಿಚಿತನಾದರೂ ಬಹುತೇಕರಿಗೆ ಅಪರಿಚಿತನಾಗಿದ್ದ. ಅವನ ಸಮವಸ್ತ್ರವು ಅವನ ಕೆಲಸವನ್ನು ಸೂಚಿಸುತ್ತದೆ: ಅವನು ಹತ್ತಿರದ ಕಟ್ಟಡದ ಕಾವಲುಗಾರ ಎಂದು. ಅವನ ಹೆಸರು... ಯಾರು ಅದರ ಬಗ್ಗೆ ಕಾಳಜಿ ವಹಿಸುತ್ತಾರೆ? ಏಳು ವರ್ಷಗಳಿಂದ ಅವನು ಇಲ್ಲಿ ಕೆಲಸ ಮಾಡುತ್ತಿದ್ಸಾನೆ, ಆದರೆ ಅಲ್ಲಿನ ಫ್ಲಾಟುಗಳ ಮಾಲಿಕರ ಪಾಲಿಗೆ ಅನಾಮಿಕನಾಗಿಯೇ ಉಳಿದಿದ್ದ.
ಆತ ಉತ್ತರ ಪ್ರದೇಶದ ಬುಂದೇಲಖಂಡದಿಂದ ಇಲ್ಲಿಗೆ ಬಂದಿದ್ದ. ಕವಿ ಮತ್ತು ಕಥೆಗಾರನಾಗಿದ್ದ ಅವನ ತಂದೆಯನ್ನು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಕಾರಣದಿಂದಾಗಿ ಕೊಲ್ಲಲಾಗಿತ್ತು. ಅವರ ಏಕೈಕ ಆಸ್ತಿಯಾಗಿದ್ದ ಬರವಣಿಗೆ ಮತ್ತು ಪುಸ್ತಕಗಳನ್ನು ಸುಟ್ಟು ಹಾಕಲಾಗಿತ್ತು. ಅದೇ ಬೆಂಕಿಯಲ್ಲಿ ಅವರ ಗುಡಿಸಲು ಕೂಡಾ ಸುಟ್ಟು ಹೋಗಿತ್ತು. ಆ ಮುರಿದ ಗುಡಿಸಲಿನಲ್ಲಿ ನೊಂದ ತಾಯಿ ಮತ್ತು ಹತ್ತು ವರ್ಷದ ಮಗ ಮಾತ್ರವೇ ಉಳಿದಿದ್ದರು. ತಾಯಿಗೆ ಅವರು ತನ್ನ ಮಗನನ್ನೂ ಕೊಂದರೆ ಏನು ಮಾಡುವುದೆಂಬ ಚಿಂತೆ ಕಾಡತೊಡಗಿತು. ಆಕೆ ತನ್ನ ಮಗನಿಗೆ ನಿನ್ನಿಂದ ಎಷ್ಟು ದೂರ ಹೋಗಲು ಸಾಧ್ಯವೋ ಅಷ್ಟು ದೂರ ಹೋಗೆಂದು ಕಳುಹಿಸಿಕೊಟ್ಟರು.
ಆತ ಚೆನ್ನಾಗಿ ಓದಲು ಬಯಸಿದ್ದ, ದೊಡ್ಡ ಕನಸು ಕಂಡಿದ್ದ, ಆದರೆ ಬದುಕಿನ ಅನಿವಾರ್ಯತೆ ಮುಂಬೈನ ರೈಲು ನಿಲ್ದಾಣಗಳಲ್ಲಿ ಶೂಗಳಿಗೆ ಪಾಲಿಶ್ ಮಾಡುವಂತೆ ಮಾಡಿತು (ಆತ ಓಡಿ ಹೋಗಿದ್ದ ಸ್ಥಳ). ಆತ ಚರಂಡಿಗಳನ್ನು ಸ್ವಚ್ಛಗೊಳಿಸಿದ, ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಿದ ಮತ್ತು ನಂತರ ನಿಧಾನವಾಗಿ ಒಂದು ದಿನ ಕಾವಲುಗಾರನಾಗಿ ಬಡ್ತಿ ಪಡೆದ. ಈಗ ತನ್ನ ತಾಯಿಗೆ ಹಣವನ್ನು ಕಳುಹಿಸಬಹುದಿತ್ತು. ತಾಯಿ ಮಗನಿಗೆ ಮದುವೆ ಮಾಡಿಸಬೇಕೆಂದು ಬಯಸಿದ್ದರು.



