ಅಂದು ಬೆಳಗಿನ ಸುಮಾರು ಒಂಬತ್ತು ಗಂಟೆಯ ಹೊತ್ತಾಗಿತ್ತು. ಬೆಳಗು ಮೆಲ್ಲನೆ ಕಣ್ಣು ತೆರೆಯುತ್ತಿತ್ತು ಸುತ್ತಮುತ್ತಲಿನ ಜನರು ಉತ್ತರ ಮುಂಬೈನ ಉಪನಗರದಲ್ಲಿರುವ ಬೋರಿವಲಿ ನಿಲ್ದಾಣವನ್ನು ತಲುಪಲು ಜನರು ತರಾತುರಿಯಲ್ಲಿ ತಮ್ಮ ನಡುವೆ ಪೈಪೋಟಿ ನಡೆಸುತ್ತಿರುವುದು ಕಂಡುಬರುತ್ತಿತ್ತು. ಅಂಗಡಿಗಳ ಮಾಲಿಕರು ಆಗಷ್ಟೇ ತಮ್ಮ ಅಂಗಡಿಯ ಶಟರ್‌ಗಳನ್ನು ಮೇಲೆತ್ತಲು ಆರಂಭಿಸಿದ್ದರು. 24 ವರ್ಷದ ಲಕ್ಷ್ಮಣ ಕಾಟಪ್ಪನಿಗೂ ಅದು ಆ ದಿನದ ಕೆಲಸ ಆರಂಭಿಸುವ ಹೊತ್ತಾಗಿತ್ತು.
ಕಾಟಪ್ಪ ಭುಜಕ್ಕೆ ಕಪ್ಪು ಚೀಲವನ್ನು ನೇತುಹಾಕಿಕೊಂಡು, ಹೆಂಡತಿ ಮತ್ತು ತಮ್ಮ 13 ವರ್ಷದ ಎಲ್ಲಪ್ಪನೊಡನೆ ಬರಿಗಾಲಿನಲ್ಲಿ ನಡೆಯುತ್ತ ಅಲ್ಲಿದ್ದ ಮುಚ್ಚಿದ ಅಂಗಡಿಯೊಂದರ ಬಳಿ ನಿಂತರು. ಅಲ್ಲಿ ತಮ್ಮ ಚೀಲವನ್ನು ತೆರೆದು ಉದ್ದನೆಯ ಹಸಿರು ಘಾಗ್ರಾ ರೀತಿಯ ಉಡುಪು, ಹೇರ್ ಬ್ಯಾಂಡ್, ಭಂಡಾರ, ಮತ್ತು ಕೆಂಪು ಕುಂಕುಮದ ಸಣ್ಣ ಪೆಟ್ಟಿಗೆ, ಮಣಿಸರಗಳು, ಸಣ್ಣ ಕನ್ನಡಿ, ಚಾವಟಿ ಮತ್ತು ಕಾಲಿನ ಗೆಜ್ಜೆಗಳನ್ನು ಹೊರತೆಗೆದರು.
ಮುಚ್ಚಿದ ಅಂಗಡಿಯೆದುರು ನಿಂತು ಮೊದಲಿಗೆ ಲಕ್ಷ್ಮಣ್ ಹಸಿರು ಲಂಗವನ್ನು ತೊಟ್ಟು, ಪ್ಯಾಂಟ್ ಮತ್ತು ಅಂಗಿಯನ್ನು ಕಳಚಿದರು. ನಂತರ ತನ್ನ ತೆರೆದ ಎದೆಗೆ ಮತ್ತು ಮುಖಕ್ಕೆ ಕೆಂಪು ಮತ್ತು ಅರಶಿನ ಬಣ್ಣ ಬಳಿದುಕೊಳ್ಳತೊಡಗಿದರು. ಇದು ಮುಗಿದ ನಂತರ ಆಭರಣಗಳನ್ನು ತೊಟ್ಟುಕೊಂಡರು. ಎಲ್ಲಪ್ಪ ಕೂಡಾ ಇದೆಲ್ಲವನ್ನೂ ಮಾಡಿಕೊಂಡ ನಂತರ ಇಬ್ಬರೂ ಲಂಗಕ್ಕೆದೊಡ್ಡ ಗಂಟೆಗಳಿರುವ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು, ಕಾಲಿಗೆ ಗೆಜ್ಜೆಯನ್ನೂ ಧರಿಸಿದರು. ರೇಖಾ ಡೋಲು ಹಿಡಿದು ಅವರ ಪಕ್ಕದಲ್ಲಿ ಕುಳಿತರು.
ತಯಾರಿಗಳೆಲ್ಲ ಮುಗಿದ ನಂತರ ಪ್ರದರ್ಶನ ಆರಂಭಗೊಳ್ಳುತ್ತದೆ. ಇದೆಲ್ಲವೂ ನಡೆದಿದ್ದು ಮಾರ್ಚ್ 2020ರಲ್ಲಿ, ಆಗಿನ್ನೂ ಲಾಕ್‌ಡೌನ್ ಆರಂಭಗೊಂಡಿರಲಿಲ್ಲ.






















