ಕಾಕಡೆಯವರು ಬ್ಯಾಂಕಿನಿಂದ 3 ಲಕ್ಷಗಳ ಸಾಲವನ್ನು ಮಾಡಿಕೊಂಡಿದ್ದರೆ ಖಾಸಗಿ ಲೇವಾದೇವಿಯವರಿಂದ 5 ಲಕ್ಷಗಳ ಸಾಲವನ್ನು ಹೊಂದಿದ್ದಾರೆ. ''ನನಗೆ ಬಿತ್ತನೆಯ ಖರ್ಚು ಮರಳಿ ಬಂದರೂ ಸಾಕು (ಆ ಒಂದು ಎಕರೆಗೆ ಹಾಕಿದ್ದು). ಪ್ರಕೃತಿಯ ದಯೆಯನ್ನು ನಂಬಿಕೊಂಡು ಬದುಕುತ್ತಿರುವವರು ನಾವು. ಕಳೆದ 10 ವರ್ಷಗಳಿಂದ ಹವಾಮಾನದ ಅನಿಶ್ಚಿತತೆಯು ಗಣನೀಯವಾಗಿ ಹೆಚ್ಚಿದೆ. ಅಕ್ಟೋಬರ್ ನ ರಬಿ ಋತುವು ಬರುವ ಮೊದಲು ಒಂದಿಷ್ಟು ಕಾಸಿಗಾಗಿ ಯಾರಲ್ಲಾದರೂ ಬೇಡುವ ಪರಿಸ್ಥಿತಿಯು ಬರದಿದ್ದರೆ ಅಷ್ಟೇ ಸಾಕು'', ಎಂದು ತಮ್ಮ ಅಳಲನ್ನು ಕಾಕಡೆ ತೋಡಿಕೊಳ್ಳುತ್ತಿದ್ದಾರೆ.
ತನ್ನ ಹತ್ತಿಯ ಬೆಳೆಯ ಕೆಲ ಭಾಗವನ್ನು ಕಾಕಡೆ ಹಾಗೆಯೇ ಕಾಪಿಡುವ ಯೋಚನೆಯಲ್ಲಿದ್ದಾರೆ. ಏಕೆಂದರೆ ತನ್ನ ಎಲ್ಲಾ 10 ಎಕರೆಗಳಲ್ಲಿ ಇತರ ಬೆಳೆಯನ್ನು ಬೆಳೆಯುವ ಸಾಮಥ್ರ್ಯವು ಅವರಿಗಿಲ್ಲ. ಹಾಗೆ ಬೆಳೆಯುವುದೇ ಆದರೆ ಅದಕ್ಕಾಗುವ ಖರ್ಚನ್ನು ಹೊಂದಿಸಲು ಅವರ ಕೈಯಲ್ಲಿ ಕಾಸಿಲ್ಲ. ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ಮರಾಠಾವಾಡಾದಲ್ಲಾದ ಮಳೆಯ ನಂತರ ಮಳೆಗಾಲವು ಚೆನ್ನಾಗಿಯೇ ಆಗಲಿದೆ ಎಂಬ ಭರವಸೆ ಅವರದ್ದು. ಮಳೆಯು ಮುಂದುವರಿದದ್ದೇ ಆದಲ್ಲಿ ಹತ್ತಿಯ ಬೆಳೆಯನ್ನು ನವೆಂಬರ್ ನಲ್ಲಿ ಕಟಾವು ಮಾಡಿ ತಕ್ಕಮಟ್ಟಿನ ಗಳಿಕೆಯನ್ನು ಪಡೆಯಬಹುದು. ಆದರೆ ಮೊದಲ ಬಿತ್ತನೆಯಲ್ಲಿ ಒಣಗಿಹೋದ ಬೆಳೆಗಳನ್ನಂತೂ ಈಗ ಏನು ಮಾಡಲೂ ಸಾಧ್ಯವಿಲ್ಲ.
ತನ್ನ ಜಮೀನಿನ ಒಂದು ಭಾಗದಲ್ಲಿ 'ದೋಬರ್ ಪೆರ್ನಿ' (ಎರಡನೇ ಸುತ್ತಿನ ಬಿತ್ತನೆ) ಯ ನಿರ್ಧಾರವನ್ನು ಕೈಗೊಂಡು ಕಾಕಡೆಯವರು ತಾನು ಕಟ್ಟಿದ ಬಾಜಿಯನ್ನು ಸೋಲಿನತ್ತ ಕೊಂಡೊಯ್ಯುತ್ತಿದ್ದಾರೆ. ಜೂನ್ ತಿಂಗಳ ಮಧ್ಯಭಾಗದಲ್ಲಿ ಮರಾಠಾವಾಡಾದ ರೈತರು ಖಾರಿಫ್ ಋತುವಿನ ಮೊದಲ ಸುತ್ತಿನ ಬಿತ್ತನೆಯನ್ನು ಮಾಡಿದರೆಂದರೆ ಬೆಳೆಯು ಚೆನ್ನಾಗಿ ಬೆಳೆಯಲು ಒಳ್ಳೆಯ ಮಳೆಯಾಗಲೇಬೇಕು. ಒಂದು ಪಕ್ಷ ಮಳೆಯು ಕಮ್ಮಿಯಾದರೆ ಅಥವಾ ಬರದೇ ಹೋದರೆ ಈ ಬಿತ್ತನೆಯಲ್ಲಿ ಗಳಿಕೆಯು ಚೆನ್ನಾಗಿರುವುದಿಲ್ಲ ಎಂಬುದು ರೈತನಿಗೆ ತಿಳಿದಾಗಿರುತ್ತದೆ. ಇದರ ನಂತರ ಹಿಂಜರಿಕೆಯಿಂದಲೇ ಹೇಗಾದರೂ ಒಂದಿಷ್ಟು ಧೈರ್ಯ ಮತ್ತು ಕಾಸನ್ನು ಒಟ್ಟುಮಾಡಿ ಎರಡನೇ ಸುತ್ತಿನ ಬಿತ್ತನೆಗಾಗಿ ಆಗಸ್ಟ್ ತಿಂಗಳ ಮೊದಲ ವಾರದ ಆಸುಪಾಸಿನಲ್ಲಿ ರೈತ ಹೇಗೋ ತಯಾರಾಗುತ್ತಾನೆ. ಅದೂ ಕೂಡ ಹೂಡಿದ ಅಸಲಾದರೂ ಮರಳಿ ಬರಲಿ ಎಂಬ ಕ್ಷೀಣ ನಿರೀಕ್ಷೆಯೊಂದಿಗೆ. ದೋಬರ್ ಪೆರ್ನಿಯ ನಂತರ ಮಳೆಯಾದರೆ ರೈತ ಈ ಜೂಜನ್ನು ಗೆದ್ದಂತೆ. ಆಗದೇ ಹೋದರೆ ಇದು ರೈತನಿಗೆ ಬೀಳುವ ಎರಡನೇ ದೊಡ್ಡ ಹೊಡೆತವಾಗಿ ಪರಿಣಮಿಸುತ್ತದೆ.
''ನಮ್ಮ ಕುಟುಂಬದಲ್ಲಿ ಒಟ್ಟು 16 ಜನರಿದ್ದೇವೆ. ನನ್ನ ಮೂವರು ಗಂಡುಮಕ್ಕಳಿಗೂ ಮದುವೆಯಾಗಿದೆ. ಒಂದಿಷ್ಟು ಹೆಚ್ಚುವರಿ ಸಂಪಾದನೆಗಾಗಿ ಮೂವರು ಆಸುಪಾಸಿನ ಹಳ್ಳಿಗಳಲ್ಲಿ ಕೃಷಿಕಾರ್ಮಿಕರಾಗಿ ದುಡಿಯುತ್ತಾರೆ. ವಿದ್ಯಾಭ್ಯಾಸ ಮಾಡುವ ನನ್ನ ಮೊಮ್ಮಕ್ಕಳು ಆಗಾಗ ನನಗೆ ಸ್ವಲ್ಪ ನೆರವಾಗುತ್ತಾರೆ. ಅವರು ಎಳೆಯ ವಯಸ್ಸಿನವರು'', ಎನ್ನುವ ಕಾಕಡೆ 80 ರ ಈ ಇಳಿವಯಸ್ಸಿನಲ್ಲೂ ಮೆಲ್ಲನೆ ತನ್ನ ಜಮೀನಿನತ್ತ ನಡೆದುಕೊಂಡು ಹೋಗುತ್ತಾ ಈ ಅನಿಶ್ಚಿತತೆಯು ಅವರನ್ನು ಅದೆಷ್ಟರ ಮಟ್ಟಿಗೆ ಕಂಗಾಲಾಗಿಸುತ್ತದೆ ಎಂಬುದನ್ನು ಹೇಳುತ್ತಿದ್ದಾರೆ.
ಇನ್ನು ಇಲ್ಲಿಂದ 3 ಕಿಲೋಮೀಟರ್ ದೂರಕ್ಕೆ ಹೋದರೆ ಖುಪ್ಸಾ ಎಂಬ ಹೆಸರಿನ ಹಳ್ಳಿಯೊಂದರಲ್ಲಿ 49 ರ ಪ್ರಾಯದ ಸಾಹೇಬರಾವ್ ದಸಾಲ್ಕರ್ ಕಾಕಡೆಯವರ ಹೆಜ್ಜೆಯನ್ನೇ ಅನುಸರಿಸಿದ್ದಾನೆ. ಹತ್ತಿಯನ್ನು ಬೆಳೆಯುತ್ತಿರುವ ತನ್ನ 12 ಎಕರೆ ಭೂಮಿಯಲ್ಲಿ 1.5 ಎಕರೆಯ ಭಾಗವನ್ನು ಆತ ಬದಲಿ ಬೆಳೆಗಾಗಿ ಬದಲಾಯಿಸಿದ್ದಾನೆ; ಈತನಿಗೂ ಕೂಡ ಇತರ ಬೆಳೆಗಳಿಂದ ಏನಾದರೂ ಗಳಿಕೆಯಾಗಬಹುದು ಎಂಬ ನಿರೀಕ್ಷೆ. ''1.5 ಎಕರೆಯ ಭೂಮಿಯಲ್ಲಿ ನನಗೆ 25,000 ರೂಪಾಯಿಗಳ ನಷ್ಟವಾಗಿದೆ. ಈಗ ನಾನು ಆ ಜಾಗದಲ್ಲಿ ಎಲೆಕೋಸನ್ನು ನೆಟ್ಟಿದ್ದೇನೆ. ನಂತರ ಒಳ್ಳೆಯ ಮಳೆಯು ಬಂದಿದ್ದೇ ಆದಲ್ಲಿ ಎಕರೆಯೊಂದಕ್ಕೆ 2-3 ಕ್ವಿಂಟಾಲ್ ಹತ್ತಿಯ ಬೆಳೆಯಾದರೂ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ನಾನು ದೊಡ್ಡ ಪ್ರಮಾಣದಲ್ಲೇನೂ ಹತ್ತಿಯ ಬೆಳೆಯನ್ನು ಎಲೆಕೋಸಿನ ಜೊತೆ ಬದಲಾಯಿಸಿಲ್ಲ (ಮಳೆ ನಿಜಕ್ಕೂ ಚೆನ್ನಾಗಿದ್ದರೆ 6-8 ಕ್ವಿಂಟಾಲ್ ಬೆಳೆಯೂ ಬರಬಹುದು). ಹೀಗಾದರೂ (ಒಂದು ಕ್ವಿಂಟಾಲ್ ಗೆ 4000 ರೂಪಾಯಿಗಳ ದರದಂತೆ) ಕೊಂಚ ಸಂಪಾದನೆಯಾಗಲಿ ಎಂಬ ಲೆಕ್ಕಾಚಾರ ನನ್ನದು'', ಎನ್ನುತ್ತಿದ್ದಾರೆ ಸಾಹೇಬರಾವ್.