“ಹೇಗಿದ್ದೀಯ? ಏನು ಮಾಡುತ್ತಿದ್ದೀಯ? ಇನ್ನೂ ಎಷ್ಟು ದಿನಗಳವರೆಗೂ ಇದು ಮುಂದುವರಿಯುತ್ತದೆ? ಇದು ಅಷ್ಟೊಂದು ತೀವ್ರವಾಗಿದೆಯೇ? ನಮ್ಮ ಸ್ಥಳದಲ್ಲೂ ಪೋಲೀಸರಿದ್ದಾರೆಯೇ? ಜನರು (ಕೃಷಿ ಕಾರ್ಮಿಕರು) ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದಾರೆಯೇ?” ಎಂಬುದಾಗಿ ಚೆನಕೊಂಡ ಬಾಲಾಸಾಮಿ, ತನ್ನ ಮಗನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು.
ಬಾಲಾಸಾಮಿ ಹಾಗೂ ಇತರೆ ನಾಲ್ಕು ಪಶುಪಾಲಕರು ದೀಪಾವಳಿಯ ನಂತರ, ನವೆಂಬರ್ನಲ್ಲಿ, ತೆಲಂಗಾಣದ ವನಪರ್ತಿ ಜಿಲ್ಲೆಯ ತಮ್ಮ ಹಳ್ಳಿಯಾದ ಕೆಥೆಪಲ್ಲೆಯಿಂದ ಹೊರಟರು. ಸುಮಾರು ಒಂದು ಸಾವಿರ ಮೇಕೆ ಹಾಗೂ ಕುರಿಗಳ ಉಸ್ತುವಾರಿ ವಹಿಸಿರುವ ಇವರು, ಪ್ರಾಣಿಗಳಿಗೆ ಮೇವನ್ನು ಅರಸುತ್ತಾ ಅಂದಿನಿಂದಲೂ ಪ್ರಯಾಣವನ್ನು ಮುಂದುರಿಸುತ್ತಲೇ ಇದ್ದಾರೆ .
ಯಾದವ ಸಮುದಾಯದ ಈ ಪಶುಪಾಲಕರು. ತೆಲಂಗಾಣದಲ್ಲಿ ಇತರೆ ಹಿಂದುಳಿದ ವರ್ಗದ ಪಟ್ಟಿಯಲ್ಲಿದ್ದಾರೆ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿ ದೇಶದಲ್ಲಿ ಲಾಕ್ಡೌನ್ ಜಾರಿಯಾದ ಎರಡು ದಿನಗಳ ಮೊದಲು, ಮಾರ್ಚ್ 23ರಂದು, ಕೆಥೆಪಲ್ಲೆಯಿಂದ ಸುಮಾರು 160 ಕಿ.ಮೀ. ದೂರದ ಕೊಪ್ಪೊಲೆ ಎನ್ನುವ ಹಳ್ಳಿಯನ್ನು ಇವರು ತಲುಪಿದರು.
ನಲ್ಗೊಂಡ ಜಿಲ್ಲೆಯ ಗುರ್ರುಂಪೊಡೆ ಮಂಡಲ್ನ ಕೊಪ್ಪೊಲೆಯಲ್ಲಿ, ಅಲ್ಪ ಪ್ರಮಾಣದಲ್ಲಿ ಆಗಾಗ್ಗೆ ಇವರು ಕೊಳ್ಳುತ್ತಿದ್ದ ಅಕ್ಕಿ, ಬೇಳೆ, ತರಕಾರಿ, ಎಣ್ಣೆ ಹಾಗೂ ಇತರೆ ದಿನಸಿ ವಸ್ತುಗಳನ್ನು ಖರೀದಿಸುವುದು ಲಾಕ್ಡೌನ್ ನಂತರದಲ್ಲಿ ಕಷ್ಟವಾಯಿತು.
ಸಾರ್ವಜನಿಕ ಸಾರಿಗೆ ಸೇವೆಗಳು ಮತ್ತು ಲಾಕ್ಡೌನ್ ಕುರಿತ ಅನಿಶ್ಚಿತತೆಯಿಂದಾಗಿ, ಜಾನುವಾರುಗಳಿಗೆ ಔಷಧಗಳ ಖರೀದಿ, ತಮ್ಮ ಸ್ವಂತ ಹಳ್ಳಿಗಳಿಗೆ ಹಾಗೂ ಕುಟುಂಬಗಳಿಗೆ ಆಗಾಗ ನೀಡುವ ಭೇಟಿ, ಮೊಬೈಲ್ಗಳ ರೀಚಾರ್ಜ್ ಹಾಗೂ ಜಾನುವಾರುಗಳ ಹಿಂಡಿಗೆ ಹೊಸ ಮೇವಿನ ತಾಣವನ್ನು ಕಂಡುಕೊಳ್ಳುವುದು ಕ್ಲಿಷ್ಟಕರವಷ್ಟೇ ಅಲ್ಲ, ಅಸಾಧ್ಯವಾಗುತ್ತಿದೆ.








