ಅದು ದಿನದ ಮೊದಲ ಮಾರಾಟದ ಸಮಯ. ಶಿವಪುರವಾ ಗ್ರಾಮದ ಕೈಪಂಪ್ ಬಳಿ ನಿಂತಿದ್ದ 9-10 ಮಹಿಳೆಯರ ಗುಂಪಿನ ಬಳಿ ಬಚ್ಚು ತನ್ನ ಮೋಟಾರ್ ಸೈಕಲ್ ನಿಲ್ಲಿಸಿ ವ್ಯಾಪಾರಕ್ಕಿಳಿದಿದ್ದಾರೆ. "ದೀದಿ, ಪ್ಲೀಸ್ ಡಿಸೈನ್ ನೋಡಿ, ಸಿದ್ಧಿ ಬಜಾರ್ನ ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ನಿಮಗೆ ಇಂತಹ ಸೀರೆಗಳು ಸಿಗಲಿಕ್ಕಿಲ್ಲ, ನಿಮಗೆ ಇಷ್ಟವಿಲ್ಲದಿದ್ದರೆ ತಗೋಬೇಡಿ" ಎಂದು ಮಹಿಳಾ ತಂಡದೆದುರು ತಮ್ಮ ವ್ಯಾಪಾರದ ಕೌಶಲವನ್ನು ತೋರಿಸುತ್ತಿದ್ದರು.
ಇದಾದ ನಂತರ, ಬಚ್ಚು ದಿನದ ಬೋಣಿಗಾಗಿ ಭಾರಿ ರಿಯಾಯಿತಿಯನ್ನು ಕೊಡಲೂ ಒಪ್ಪುತ್ತಾರೆ: "ಒಂದೊಂದ್ ಸೀರೆಗೆ 700 ರೂ. ಆದ್ರೆ ನಾನು 400ಕ್ಕೆ ಕೊಡ್ತೀನಿ..."
ಗಥಾರ್ (ಚೀಲ)ನಲ್ಲಿರುವ 15-20 ನೈಲಾನ್ ಸೀರೆಗಳನ್ನು ಪರೀಕ್ಷಿದ ಮಹಿಳೆಯರಲ್ಲಿ ಒಬ್ಬರು 150 ರೂಪಾಯಿ ಕೊಡುವುದಾಗಿ ಹೇಳಿದರು. ಕೋಪಗೊಂಡ ಬಚ್ಚು ತನ್ನ ಸೀರೆಗಳನ್ನು ಒಟ್ಟುಗೂಡಿಸಲು ಪ್ರಾರಂಭಿಸುತ್ತಾರೆ, ಸೀರೆಯ ಖರೀದಿ ಬೆಲೆಯೇ 250 ರೂಪಾಯಿ ಎಂದು ಗೊಣಗುತ್ತಾ ಹಗ್ಗದಿಂದ ಚೀಲವನ್ನು ಕಟ್ಟತೊಡಗಿದರು.
ನಿರಾಶೆಗೊಂಡ ಬಚ್ಚು ತಮ್ಮ ಮೋಟಾರು ಸೈಕಲ್ನಲ್ಲಿ ದಾರಿಯಲ್ಲಿ ಸಿಗುವ ಮುಂದಿನ ಹಳ್ಳಿಯಾದ ಮಡ್ವಾ ಕಡೆಗೆ ಹೊರಟರು. "ಕೆಲವೊಮ್ಮೆ ಜನರು ಹೆಚ್ಚು ಸಮಯ ವ್ಯರ್ಥ ಮಾಡುತ್ತಾರೆ, ಆದರೆ ಏನನ್ನೂ ಖರೀದಿಸುವುದಿಲ್ಲ. ನಮ್ಮ ಸಮಯವು ಸೀರೆಗಳನ್ನು ತೆರೆಯುವುದು, ಮಡಚುವುದು ಮತ್ತು ನಂತರ ಕಟ್ಟುವುದರಲ್ಲಿ ವ್ಯರ್ಥವಾಗುತ್ತದೆ" ಎಂದು ಅವರು ಸ್ಥಳೀಯ ಬಗೇಲಿ ಭಾಷೆಯಲ್ಲಿ ಗೊಣಗಿದರು.
ಸುಮಾರು ಮೂರು ಕಿಲೋಮೀಟರ್ ನಂತರ, ಅವರು ಮದ್ವಾ ಗ್ರಾಮದ ಕೈಪಂಪ್ನಲ್ಲಿ ನೀರು ಕುಡಿಯಲು ನಿಂತವರು, "ನಾನು ಮನೆಯಿಂದ ಹೊರಟು ನಾಲ್ಕು ಗಂಟೆಗಳು ಕಳೆದಿವೆ, ಆದರೆ ಬೋಣಿಯನ್ನೂ ಮಾಡಿಲ್ಲ [ಬೋಣಿಯೆನ್ನುವುದು ಶುಭವೆಂದು ಪರಿಗಣಿಸಲಾಗುವ ದಿನದ ಮೊದಲ ಮಾರಾಟವಾಗಿದೆ,] ಇಂದು ಬೆಳಿಗ್ಗೆ ನಾನು ಕಾರಿನಲ್ಲಿ 150 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿದ್ದೇನೆ ಮತ್ತು ಇದುವರೆಗೆ. ಅಷ್ಟನ್ನೂ ಸಂಪಾದಿಸಲಾಗಲಿಲ್ಲ." ಎಂದು ಹೇಳಿದರು.









