ಮಾನ್ಯ ಭಾರತದ ಮುಖ್ಯ ನ್ಯಾಯಮೂರ್ತಿಗಳೇ,
ಮೊದಲಿಗೆ, “ದುರದೃಷ್ಟವಶಾತ್ ತನಿಖಾ ಪತ್ರಿಕೋದ್ಯಮದ ಪರಿಕಲ್ಪನೆಯು ಮಾಧ್ಯಮದ ಕ್ಯಾನ್ವಾಸಿನಿಂದ ಅಳಿಸಿ ಹೋಗುತ್ತಿದೆ… ನಾವು ಚಿಕ್ಕವರಿದ್ದಾಗ, ಪತ್ರಿಕೆಗಳು ಹೊರಗೆಳೆಯಬಹುದಾದ ದೊಡ್ಡ ದೊಡ್ಡ ಹಗರಣಗಳ ಸುದ್ದಿಗೆ ಕಾಯುತ್ತಿದ್ದೆವು. ಆಗಿನ ಪತ್ರಿಕೆಗಳು ಈ ವಿಷಯದಲ್ಲಿ ನಮ್ಮನ್ನು ನಿರಾಶೆ ಮಾಡುತ್ತಿರಲಿಲ್ಲ.” ಎನ್ನುವ ನಿಮ್ಮ ತೀಕ್ಷ್ಣ ಗ್ರಹಿಕೆಗೆ ಧನ್ಯವಾದಗಳು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಕುರಿತು ಸತ್ಯವನ್ನು ಹೇಳುವುದು ಅಪರೂಪವಾಗಿದೆ. ನಿಮ್ಮ ಹಳೆಯ ಭ್ರಾತೃತ್ವವನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನೀವು 1979ರಲ್ಲಿ ಈನಾಡುವಿಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ನಾನು ಕೂಡಾ ಪತ್ರಿಕೋದ್ಯಮ ಸೇರಿಕೊಂಡೆ.
ನೀವು ನಿಮ್ಮ ಭಾಷಣದಲ್ಲಿ ನೆನಪಿಸಿಕೊಂಡಿರುವ ಹಾಗೆ ನಾವು ಆ ರೋಮಾಂಚಕ ದಿನಗಳಲ್ಲಿ ನಾವು “ಇಂದು ಯಾವ ಹಗರಣ ಹೊರಬಂದಿರಬಹುದೆನ್ನುವ ಕುತೂಹಲದೊಂದಿಗೆ ಬೆಳಗನ್ನು ಬರಮಾಡಿಕೊಳ್ಳುತ್ತಿದ್ದೆವು.” ಆದರೆ ಇಂದು ಅಂತಹ ದೊಡ್ಡ ದೊಡ್ಡ ಹಗರಣಗಳನ್ನು ಬಯಲಿಗೆಳೆಯುವ ಪತ್ರಕರ್ತರನ್ನೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ನಂತಹ ಕಠಿಣ ಕಾನೂನುಗಳ ಅಡಿಯಲ್ಲಿ ಜೈಲಿಗೆ ಹಾಕಲಾದ ಸುದ್ದಿಗಳೊಡನೆ ಬೆಳಗನ್ನು ಎದುರಿಸುತ್ತಿದ್ದೇವೆ. ಸರ್. ಅಥವಾ ನೀವು ಇತ್ತೀಚೆಗೆ ಕಟುವಾಗಿ ಟೀಕಿಸಿರುವ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ನಂತಹ ಕಾನೂನುಗಳ ಭಯಾನಕ ದುರುಪಯೋಗವನ್ನು ಸಹ ನೋಡುತ್ತಿದ್ದೇವೆ.
ನಿಮ್ಮ ಭಾಷಣದಲ್ಲಿ ನೀವು ಹೇಳಿದಂತೆ, "ಈ ಹಿಂದೆ, ಹಗರಣಗಳು ಮತ್ತು ದುರ್ನಡತೆಯ ಬಗ್ಗೆ ಪತ್ರಿಕೆಗಳ ವರದಿಗಳು ಗಂಭೀರ ಪರಿಣಾಮಗಳಿಗೆ ಕಾರಣವಾಗುವ ಅಲೆಗಳನ್ನು ಸೃಷ್ಟಿಸುವುದನ್ನು ನಾವು ನೋಡಿದ್ದೇವೆ." ಅಯ್ಯೋ, ಈ ದಿನಗಳಲ್ಲಿ ಗಂಭೀರ ಪರಿಣಾಮಗಳು ಅಂತಹ ವರದಿಗಳನ್ನು ಮಾಡುವ ಪತ್ರಕರ್ತರು ಎದುರಿಸುತ್ತಿದ್ದಾರೆ. ನೇರ ವರದಿ ಮಾಡುವವರಿಗೂ ಸಹ. ಉತ್ತರ ಪ್ರದೇಶದಲ್ಲಿ ನಡೆದ ಆ ಭಯಾನಕ ದೌರ್ಜನ್ಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಲು ಹತ್ರಾಸ್ ಗೆ ಹೋಗುವಾಗ ಬಂಧಿಸಲ್ಪಟ್ಟ ಸಿದ್ದಿಕ್ ಕಪ್ಪನ್ ಈಗ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ, ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರ ಪ್ರಕರಣ ವು ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಪುಟಿಯುವುದನ್ನು ನೋಡುತ್ತಾ ಜೈಲಿನಲ್ಲಿ ಕುಳಿತಿದ್ದಾರೆ, ಅತ್ತ ಕಪ್ಪನ್ ಆರೋಗ್ಯವು ಹದಗೆಡುತ್ತಲೇ ಸಾಗುತ್ತಿದೆ.
ಉದಾಹರಣೆಗಳನ್ನು ನೋಡುವಾಗ ಖಂಡಿತವಾಗಿಯೂ – ತನಿಖಾ ಮತ್ತು ಇತರ ಮಾದರಿಯ – ಪತ್ರಿಕೋದ್ಯಮವೂ ಇಲ್ಲವಾಗಲಿದೆ.
ನ್ಯಾಯಮೂರ್ತಿ ರಮಣ ಅವರೇ, ಹಿಂದಿನ ಹಗರಣ ಮತ್ತು ಹಗರಣಗಳ ಹೊರಗೆಡವುವಿಕೆಗೆ ಹೋಲಿಸಿದರೆ, ನಿಮಗೆ "ಇತ್ತೀಚಿನ ವರ್ಷಗಳಲ್ಲಿ ಅಂತಹ ದೊಡ್ಡ ವರದಿಗಳು ನೆನಪಿಗೆ ಬರುವುದಿಲ್ಲ" ಎಂದು ನೀವು ಸರಿಯಾಗಿಯೇ ಹೇಳುತ್ತೀರಿ. ನಮ್ಮ ತೋಟದಲ್ಲಿನ ಎಲ್ಲ ಹೂಗಳೂ ನಮಗೆ ಗುಲಾಬಿಯಂತೆಯೇ ತೋರುತ್ತದೆ. ನಿಮ್ಮ ತೋಟದಲ್ಲಿರುವ ಹೂವುಗಳಾವುವು ಎಂದು ತೀರ್ಮಾನಿಸುವ ಹಕ್ಕನ್ನು ನಾನು ನಿಮಗೇ ಬಿಡುತ್ತೇನೆ."
ಕಾನೂನು ಮತ್ತು ಮಾಧ್ಯಮಗಳೆರಡರ ಬಗ್ಗೆ ನಿಮ್ಮ ಆಳವಾದ ಜ್ಞಾನ ಮತ್ತು ನೀವು ಭಾರತೀಯ ಸಮಾಜದ ತೀಕ್ಷ್ಣ ವೀಕ್ಷಕರಾಗಿರುವರಿಂದಾಗಿ- ಸರ್, ನೀವು ಇನ್ನೂ ಸ್ವಲ್ಪ ಮುಂದೆ ಹೋಗಿ ಕೇವಲ ತನಿಖಾ ಮಾತ್ರವಲ್ಲ, ಹೆಚ್ಚಿನ ಭಾರತೀಯ ಪತ್ರಿಕೋದ್ಯಮವನ್ನು ಮುಳುಗಿಸಿದ ಅಂಶಗಳನ್ನು ಸಹ ನೀವು ನೋಡಬೇಕೆಂದು ನಾನು ಬಯಸುತ್ತೇನೆ. ಇದಕ್ಕೆ ಕಾರಣವೇನೆಂದು ನಮ್ಮದೇ ಸ್ವಂತ ತೀರ್ಮಾನಗಳಿಗೆ ಬರಲು ನೀವು ನಮ್ಮನ್ನು ಆಹ್ವಾನಿಸಿರುವುದರಿಂದ, ನಿಮ್ಮ ಪರಿಗಣನೆಗೆ ನಾನು ಕಂಡುಕೊಂಡ ಮೂರು ಕಾರಣಗಳನ್ನು ನೀಡಬಹುದೇ?
ಮೊದಲನೆಯದಾಗಿ, ಮಾಧ್ಯಮ ಮಾಲೀಕತ್ವದ ರಚನಾತ್ಮಕ ವಾಸ್ತವಗಳು ಬೃಹತ್ ಲಾಭದ ಬೆನ್ನುಬಿದ್ದಿರುವ ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕೃತವಾಗಿವೆ.
ಎರಡನೆಯದಾಗಿ, ಸ್ವತಂತ್ರ ಪತ್ರಿಕೋದ್ಯಮದ ಮೇಲೆ ಪ್ರಭುತ್ವದ ಆಕ್ರಮಣ ಮತ್ತು ನಿರ್ದಯ ದಬ್ಬಾಳಿಕೆಯ ಅಭೂತಪೂರ್ವ ಮಟ್ಟಗಳು.
ಮೂರನೆಯದಾಗಿ, ನೈತಿಕತೆಯ ಬೇರು ಕೊಳೆಯುತ್ತಿರುವುದು ಮತ್ತು ಹಲವಾರು ಹಿರಿಯ ವೃತ್ತಿಪರರು ಪ್ರಭುತ್ವದ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ.
ಸುದ್ದಿಗಾರಿಕೆಯ ಕಸುಬುದಾರಿಕೆಯನ್ನು ಕಲಿಸುವವನಾಗಿ, ನಾನೂ ಈಗ ನನ್ನ ವಿದ್ಯಾರ್ಥಿಗಳನ್ನು ನೀವು ಸ್ಟೆನೋಗ್ರಾಫರ್ ಆಗಲು ಬಯಸುತ್ತೀರೋ, ಪತ್ರಕರ್ತರಾಗಲು ಬಯಸುತ್ತೀರೋ? ಎನ್ನುವುದನ್ನು ಕೇಳಲು ಮರೆಯುವುದಿಲ್ಲ.
ಸುಮಾರು 30 ವರ್ಷಗಳ ಕಾಲ ನಾನು ಭಾರತೀಯ ಮಾಧ್ಯಮಗಳು ರಾಜಕೀಯವಾಗಿ ಸ್ವತಂತ್ರವಾಗಿವೆ ಆದರೆ ಲಾಭದಾಸೆಯ ಸೆರೆವಾಸದಲ್ಲಿವೆ ಎಂದು ವಾದಿಸಿದ್ದೆ. ಇಂದು ಕೂಡಾ ಅವು ಲಾಭದಾಸೆಯ ಸೆರೆಮನೆಯಲ್ಲಿಉಳಿದಿವೆ, ಆದರೆ ಅವುಗಳಲ್ಲಿನ ಕೆಲವು ಸ್ವತಂತ್ರ ಧ್ವನಿಗಳು ಇಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಹೆಚ್ಚು ಸೆರೆವಾಸಕ್ಕೆ ಒಳಗಾಗುತ್ತಿವೆ.
ಮಾಧ್ಯಮ ಸ್ವಾತಂತ್ರ್ಯದ ಹೀನಾಯ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಕಡಿಮೆ ಚರ್ಚೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ. ನಾಲ್ವರು ಪ್ರಮುಖ ಬುದ್ಧಿಜೀವಿಗಳು, ಅವರೆಲ್ಲರೂ ಪತ್ರಕರ್ತರಾಗಿದ್ದರು, ಕಳೆದ ಕೆಲವು ವರ್ಷಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಪೂರ್ಣಾವಧಿ ಮಾಧ್ಯಮದ ವ್ಯಕ್ತಿಯಾಗಿದ್ದರು. (ಹಾಗೆಯೇ, ರೈಸಿಂಗ್ ಕಾಶ್ಮೀರ ಪತ್ರಿಕೆಯ ಸಂಪಾದಕಿ ಸುಜಾತಾ ಬುಖಾರಿಯವರನ್ನೂ ಗುಂಡಿಕ್ಕಿ ಕೊಲ್ಲಲಾಯಿತು). ಆದರೆ ಉಳಿದ ಮೂವರು ಮಾಧ್ಯಮಗಳಲ್ಲಿ ಖಾಯಂ ಬರಹಗಾರರು ಮತ್ತು ಅಂಕಣಕಾರರಾಗಿದ್ದರು. ನರೇಂದ್ರ ದಾಬೋಲ್ಕರ್ ಅವರು ಸುಮಾರು 25 ವರ್ಷಗಳಿಂದ ಮೂಢನಂಬಿಕೆ ವಿರುದ್ಧ ಹೋರಾಡುತ್ತಿರುವ ಪತ್ರಿಕೆಯ ಸಂಸ್ಥಾಪಕ ಮತ್ತು ಸಂಪಾದಕರಾಗಿದ್ದರು. ಗೋವಿಂದ ಪನ್ಶಾರೆ ಮತ್ತು ಎಂಎಂ ಎಂ ಕಲಬುರ್ಗಿ ಹಿರಿಯ ಲೇಖಕರು ಮತ್ತು ಅಂಕಣಕಾರರು.
ಈ ನಾಲ್ವರಲ್ಲಿ ಒಂದು ಸಮಾನ ಅಂಶವಿತ್ತು: ಅವರೆಲ್ಲರೂ ವಿಚಾರವಾದಿಗಳಾಗಿದ್ದರು ಮತ್ತು ಭಾರತೀಯ ಭಾಷೆಯಲ್ಲಿ ಬರೆಯುವ ಪತ್ರಕರ್ತರಾಗಿದ್ದರು. ಇದುವೇ ಅವರಿಗೆ ಕೊಲೆಗಾರರ ಬೆದರಿಕೆ ಹೆಚ್ಚಾಗಲು ಕಾರಣವಾದ ವಿಷಯವೂ ಹೌದು. ಈ ಹತ್ಯೆಗಳನ್ನು ಸರ್ಕಾರಕ್ಕೆ ಸೇರದ ಜನರು ನಡೆಸಿದ್ದು, ಅವರು ಉನ್ನತ ಮಟ್ಟದ ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿದ್ದರು. ಈ ಪಟ್ಟಿಯು ಹಲವಾರು ಇತರ ಸ್ವತಂತ್ರ ಪತ್ರಕರ್ತರ ಹೆಸರನ್ನು ಸಹ ಒಳಗೊಂಡಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಧ್ಯಮದ ಸ್ವಾತಂತ್ರ್ಯ ಅತ್ಯಂತ ಕೆಳಮಟ್ಟದಲ್ಲಿದೆ ಎಂಬ ವಾಸ್ತವವನ್ನು ನ್ಯಾಯಾಂಗವು ಎದುರಿಸಿದರೆ, ಬಹುಶಃ ಪತ್ರಿಕೋದ್ಯಮದ ಅತ್ಯಂತ ಶೋಚನೀಯ ಮತ್ತು ಖಿನ್ನತೆಯ ಸ್ಥಿತಿಯನ್ನು ಸ್ವಲ್ಪ ಸುಧಾರಿಸಬಹುದು. ಸರಕಾರಗಳ ಆಧುನಿಕ ತಾಂತ್ರಿಕ ಸ್ಥಿತಿಯ ದಮನಕಾರಿ ಸಾಮರ್ಥ್ಯಗಳು - ನೀವು ನಿಸ್ಸಂದೇಹವಾಗಿ ಪೆಗಾಸಸ್ ಪ್ರಕರಣದ ವಿಚಾರಣೆಯಲ್ಲಿ ನೋಡಿದಂತೆ - ಬಿಕ್ಕಟ್ಟಿನ ದುಃಸ್ವಪ್ನಗಳನ್ನು ಸಹ ಕುಬ್ಜಗೊಳಿಸುತ್ತವೆ.
ಫ್ರಾನ್ಸ್ ಮೂಲದ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ 2020ರಲ್ಲಿ ಹೊರಡಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 142ನೇ ಸ್ಥಾನಕ್ಕೆ ಕುಸಿಯಿತು.
ಈ ಸರ್ಕಾರದ ಮಾಧ್ಯಮ ಸ್ವಾತಂತ್ರ್ಯದ ಬಗೆಗಿನ ನನ್ನ ನೇರ ಅನುಭವವನ್ನು ಹೇಳುತ್ತೇನೆ. ಅಪಮಾನಕರ 142ನೇ ರ್ಯಾಂಕ್ನಿಂದ ಕೆರಳಿದ ಕೇಂದ್ರ ಸಂಪುಟ ಕಾರ್ಯದರ್ಶಿ ಸೂಚ್ಯಂಕ ಮಾನಿಟರಿಂಗ್ ಸಮಿತಿ ರಚನೆಗೆ ಆದೇಶ ನೀಡಿದ್ದು, ಇದು ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ. ಸದಸ್ಯನಾಗುವಂತೆ ನನ್ನನ್ನು ಕೇಳಿದಾಗ, ʼಡಬ್ಲ್ಯೂಪಿಎಫ್ಐʼಯ ಶ್ರೇಯಾಂಕಗಳನ್ನು ತಿರಸ್ಕರಿಸುವ ಬದಲು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ನೈಜ ಸ್ಥಿತಿಯ ಮೇಲೆ ನಾವು ಹೆಚ್ಚು ಗಮನಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರಿಂದ ಆಹ್ವಾನವನ್ನು ನಾನು ಒಪ್ಪಿಕೊಂಡೆ.
13 ಸದಸ್ಯರ ಸಮಿತಿಯಲ್ಲಿ 11 ಅಧಿಕಾರಿಗಳು ಮತ್ತು ಸರ್ಕಾರಿ ನಿಯಂತ್ರಿತ ಸಂಸ್ಥೆಗಳ ಸಂಶೋಧಕರು ಇದ್ದರು. ಪತ್ರಿಕಾ ಸ್ವಾತಂತ್ರ್ಯ ಸಮಿತಿಯಲ್ಲಿ ಇಬ್ಬರೇ ಇಬ್ಬರು ಪತ್ರಕರ್ತರನ್ನು ಮಾತ್ರ ಸೇರಿಸಲಾಗಿತ್ತು! ಮತ್ತು ಅವರಲ್ಲಿ ಒಬ್ಬರು ಯಾವುದೇ ಸಭೆಗಳಲ್ಲಿ ಏನನ್ನೂ ಹೇಳಲಿಲ್ಲ. ಸಭೆಗಳು ಚೆನ್ನಾಗಿ ನಡೆದವು, ಆದರೆ ಅಲ್ಲಿ ನಾನೊಬ್ಬನೇ ಮಾತನಾಡಿದ್ದು ಅಥವಾ ಪ್ರಶ್ನೆಗಳನ್ನು ಕೇಳಿದ್ದು. ನಂತರ, ಕಾರ್ಯಕಾರಿ ಸಮಿತಿಯು ಕರಡು ವರದಿಯನ್ನು ಸಿದ್ಧಪಡಿಸಿತು, ಅದರಲ್ಲಿ ಕರಡು ಎಂಬ ಪದದ ಉಪಸ್ಥಿತಿ ಎಲ್ಲಿಯೂ ಕಂಡುಬರಲಿಲ್ಲ. ಈ ವರದಿಯಲ್ಲಿ, ಸಭೆಗಳಲ್ಲಿ ಪ್ರಸ್ತಾಪಿಸಲಾದ ಗಂಭೀರ ವಿಷಯಗಳ ಬಗ್ಗೆ ಏನನ್ನೂ ಬರೆಯಲಾಗಿರಲಿಲ್ಲ. ಕೊನೆಗೆ, ಈ ವರದಿಯೊಡನೆ ನಾನು ಸ್ವತಂತ್ರ ಅಥವಾ ಭಿನ್ನಾಭಿಪ್ರಾಯಗಳಿಂದ ಕೂಡಿದ ಪತ್ರವೊಂದನ್ನು ಬರೆದು ಸೇರಿಸಿದೆ.
ನಂತರ ಒಮ್ಮೆಲೇ, ಸಮಿತಿ ಎಲ್ಲವೂ ಮಾಯವಾಯಿತು. ಭಾರತದ ಇಬ್ಬರು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಿಗೆ ಮಾತ್ರ ಉತ್ತರದಾಯಿತ್ವ ಹೊಂದಿರುವ ದೇಶದ ದೊಡ್ಡ ಅಧಿಕಾರಶಾಹಿಗಳ ಸೂಚನೆಯ ಮೇರೆಗೆ ರಚಿಸಲಾದ ಸಮಿತಿಯು ಕಣ್ಮರೆಯಾಯಿತು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾಡಲಾದ ಈ ವರದಿಯ ಬಗ್ಗೆ ಆರ್ ಟಿಐ ತನಿಖೆಯಲ್ಲೂ ಪತ್ತೆಯಾಗಿಲ್ಲ! ಆದರೆ, ನನ್ನ ಬಳಿ ಆ ಕರಡು ಪ್ರತಿ ಇದೆ. ಈ ಸಮಿತಿಯ ಮುಖ್ಯ ಕಾರ್ಯ ತನಿಖಾ ಪತ್ರಿಕೋದ್ಯಮವಾಗಿರಲಿಲ್ಲ, ಪತ್ರಿಕೋದ್ಯಮದ ತನಿಖೆಯಾಗಿತ್ತು; ಭಾರತದಲ್ಲಿ ನಡೆಯುತ್ತಿರುವಂತೆ. ಮತ್ತು ನಾನು ಅಸಮ್ಮತಿ ಟಿಪ್ಪಣಿ ಬರೆದ ತಕ್ಷಣ, ವರದಿ ಸಂಪೂರ್ಣವಾಗಿ ಕಣ್ಮರೆಯಾಯಿತು.
ನಿಮ್ಮ ಭಾಷಣದಲ್ಲಿ ನೀವು ಹೇಳಿದ ರೀತಿಯ ತನಿಖಾ ಪತ್ರಿಕೋದ್ಯಮವನ್ನು ಮಾಡಲು ಬಯಸುವ ಅನೇಕ ಜನರು ಪತ್ರಿಕಾ ರಂಗದಲ್ಲಿದ್ದಾರೆ. ಅಂದರೆ, ದೊಡ್ಡ ಸಂಸ್ಥೆಗಳಿಗೆ ಸಂಬಂಧಿಸಿದ ತನಿಖಾ ಪತ್ರಿಕೋದ್ಯಮ, ಅದರಲ್ಲೂ ವಿಶೇಷವಾಗಿ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾಚಾರಗಳು. ಇಂದು ಇಂತಹ ಪ್ರಯತ್ನಗಳನ್ನು ಮಾಡುವ ಹೆಚ್ಚಿನ ಪತ್ರಕರ್ತರು ಎದುರಿಸುತ್ತಿರುವ ಮೊದಲ ಅಡಚಣೆಯೆಂದರೆ ಕಾರ್ಪೊರೇಟ್ ಮಾಧ್ಯಮದಲ್ಲಿ ಸ್ಥಾನಗಳನ್ನು ಹೊಂದಿರುವ ಮತ್ತು ಸರ್ಕಾರಿ ಗುತ್ತಿಗೆಗಳು ಮತ್ತು ಉನ್ನತ ಸ್ಥಾನದಲ್ಲಿರುವ ಪ್ರಬಲ ವ್ಯಕ್ತಿಗಳೊಂದಿಗೆ ಆಳವಾಗಿ ತೊಡಗಿಸಿಕೊಂಡಿರುವ ಅವರ ಮೇಲಧಿಕಾರಿಗಳು.
ಪೇಯ್ಡ್ ನ್ಯೂಸ್ನಿಂದ ಸಾಕಷ್ಟು ಹಣ ಗಳಿಸುವ, ಸಾರ್ವಜನಿಕ ಸಂಪನ್ಮೂಲಗಳನ್ನು ಅವ್ಯಾಹತವಾಗಿ ಬಳಸಿಕೊಳ್ಳುವ, ಸಾರ್ವಜನಿಕ ಖಾಸಗೀಕರಣದ ಸಂಸ್ಥೆಗಳು ಸಾವಿರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಗಳಿಸುವ ದೊಡ್ಡ ಮಾಧ್ಯಮ ಕಂಪನಿಗಳ ಮಾಲೀಕರು ಮತ್ತು ಆಡಳಿತ ಪಕ್ಷಗಳ ಚುನಾವಣಾ ಪ್ರಚಾರಗಳಿಗೆ ಅದ್ದೂರಿಯಾಗಿ ಖರ್ಚು ಮಾಡುತ್ತಾರೆ. ಇವರು ಅಧಿಕಾರದಲ್ಲಿರುವ ತಮ್ಮ ಮಿತ್ರರಿಗೆ ಕಿರುಕುಳ ನೀಡಲು ಪತ್ರಕರ್ತರಿಗೆ ಅವಕಾಶ ನೀಡುವುದಿಲ್ಲ. ಒಂದು ಕಾಲದಲ್ಲಿ ಹೆಮ್ಮೆಪಡಲು ಕಾರಣವಾಗಿದ್ದ ಈ ಭಾರತೀಯ ವೃತ್ತಿಯು ಸ್ಥಿರವಾದ ಅವನತಿಗೆ ಸಾಕ್ಷಿಯಾಗಿದೆ ಮತ್ತು ಹಣ ಮಾಡುವ ಯಂತ್ರವಾಗಿ ಮಾರ್ಪಟ್ಟಿದೆ. ನಾಲ್ಕನೇ ಎಸ್ಟೇಟ್ (ನಾಲ್ಕನೇ ಸ್ಥಂಭ) ಮತ್ತು ರಿಯಲ್ ಎಸ್ಟೇಟ್ ನಡುವಿನ ವ್ಯತ್ಯಾಸವನ್ನು ಇಲ್ಲವಾಗಿಸಲಾಗಿದೆ. ಈಗ ಅಧಿಕಾರದಲ್ಲಿರುವವರ ಬಗ್ಗೆ ಸತ್ಯವನ್ನು ಹೇಳುವ ಇಂತಹ ಪತ್ರಿಕೋದ್ಯಮದ ಹಸಿವು ಅವರಿಗೆ ಇಲ್ಲ.
ಸರ್, ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಈ ದೇಶದ ಜನರಿಗೆ ಎಂದಿಗೂ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಬೇಕಾಗಿರಲಿಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ನನ್ನ ಮಾತನ್ನು ಒಪ್ಪುತ್ತೀರರೆಂದು ನಾನು ಭಾವಿಸುತ್ತೇನೆ. ಪ್ರಬಲ ಮಾಧ್ಯಮ ಸಂಸ್ಥೆಗಳ ಮಾಲೀಕರು ತಮ್ಮ ಓದುಗರು ಮತ್ತು ವೀಕ್ಷಕರು ಸೇರಿದಂತೆ ಜನಸಾಮಾನ್ಯರ ಈ ಅಗತ್ಯವನ್ನು ಹೇಗೆ ಪೂರೈಸಿದರು? 2,000-2,500 ಪತ್ರಕರ್ತರನ್ನು ಮತ್ತು ಹಲವು ಪಟ್ಟು ಹೆಚ್ಚು ಪತ್ರಕರ್ತರಲ್ಲದ ಮಾಧ್ಯಮ ವ್ಯಕ್ತಿಗಳನ್ನು ವಜಾ ಮಾಡುವ ಮೂಲಕ.






