ಬಂಧನದ ಆಘಾತದಿಂದ ಎಳೆಯ ಖಮ್ರಿ ಇನ್ನೂ ಚೇತರಿಸಿಕೊಂಡಿಲ್ಲ.
“ಅದರ ಆರೋಗ್ಯ ಮರಳಲು ಇನ್ನಷ್ಟು ದಿನ ಬೇಕು” ಎನ್ನುತ್ತಾರೆ ಕಮ್ಮಭಾಯಿ ಲಖಾಭಾಯಿ ರಬರಿ.
ಪಶುಪಾಲಕರಾದ ಅವರು ತಮ್ಮ ಸಣ್ಣ ಒಂಟೆಯ ಕುರಿತು ಮಾತನಾಡುತ್ತಿದ್ದರು.
2022ರ ಜನವರಿಯಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಸ್ಥಳೀಯ ಪೊಲೀಸರು 58 ಒಂಟೆಗಳನ್ನು ವಶಕ್ಕೆ ಪಡೆದ ಅಸಾಧಾರಣ ಘಟನೆಗಳನ್ನು ನೆನಪಿಸಿಕೊಂಡರೆ ಕಮ್ಮಭಾಯ್ ಅವರ ಭರವಸೆಯ ಧ್ವನಿಯನ್ನು ಅರ್ಥಮಾಡಿಕೊಳ್ಳಬಹುದು. ಒಂದು ತಿಂಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದರೂ, ಎಲ್ಲಾ ಒಂಟೆಗಳು ಕಳಪೆ ಆರೋಗ್ಯದ ಚಿಹ್ನೆಗಳನ್ನು ತೋರಿಸಿದವು.
ಅವುಗಳನ್ನು ಸಾಕುತ್ತಿದ್ದ ಪಶುಪಾಲಕರು, ಬಂಧನದಲ್ಲಿದ್ದ ಸಮಯದಲ್ಲಿ ತಮ್ಮ ಒಂಟೆಗಳಿಗೆ ತಮ್ಮ ನಿಯಮಿತ ಆಹಾರವನ್ನು ತಿನ್ನಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ. ಅವುಗಳನ್ನು ಇರಿಸಲಾದ ಗೋ ಸಂರಕ್ಷಣಾ ಕೇಂದ್ರವು ವಾಸ್ತವವಾಗಿ ದನಗಳ ಆಶ್ರಯ ತಾಣವಾಗಿತ್ತು. "ಅವು ಬಯಲಿನಲ್ಲಿ ಮೇಯುವ ಪ್ರಾಣಿಗಳು ಮತ್ತು ದೊಡ್ಡ ಮರಗಳ ಎಲೆಗಳನ್ನು ತಿನ್ನುತ್ತವೆ," ಎಂದು ಕಮ್ಮಭಾಯ್ ಹೇಳುತ್ತಾರೆ. ಅವು ದನಗಳ ಆಹಾರವನ್ನು ತಿನ್ನುವುದಿಲ್ಲ."











