ಅಂದು ಸೆಟ್ಟುವಿನ ಪತ್ನಿ ಅರಯಿ ಸಂಜೆ ಮನೆಗೆ ಬರುವುದು ಐದು ನಿಮಿಷ ತಡವಾಗುತ್ತಿದ್ದರೂ ಇಂದು ಸೆಟ್ಟು ಜೀವಂತವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅರಯಿ ಮನೆಗೆ ಬಂದು ತಲುಪುವಾಗ ಆತ ಕತ್ತಿಗೆ ನೇಣು ಕುಣಿಕೆಯನ್ನು ಸಿಕ್ಕಿಸಿಕೊಂಡಾಗಿತ್ತು.
“ನಾನು ಸಾವಿನ ಬಾಯಿಗೆ ಹೋಗಿಯಾಗಿತ್ತು”, ಎನ್ನುತ್ತಾರೆ ಮಧ್ಯಮ ವರ್ಗದ ರೈತ ಕೆ. ಲೇಖನ್. ಎಲ್ಲರೂ ಅವರನ್ನು ಕರೆಯುವುದು ಸೆಟ್ಟು ಎಂದೇ. ಇಂದು ಆತ ತನ್ನ ಆ ಗಂಡಾಂತರಕಾರಿ ನಿರ್ಧಾರಕ್ಕಾಗಿ ಬೇಸರ ಪಡುತ್ತಿದ್ದಾರೆ ಮತ್ತು ಆ ಯತ್ನವು ವಿಫಲಗೊಂಡದ್ದರಿಂದಾಗಿ ನಿರಾಳರಾಗಿದ್ದಾರೆ. ಅರಯಿ ಸಹಾಯಕ್ಕಾಗಿ ಮೊರೆಯಿಟ್ಟಾಗ ಅಕ್ಕಪಕ್ಕದವರು ಓಡಿಬಂದು ಸೆಟ್ಟುವನ್ನು ಕುಣಿಕೆಯಿಂದ ತಪ್ಪಿಸಿ ನೆಲದಲ್ಲಿ ಮಲಗಿಸಿದ್ದರು. ಆತಂಕದ ಗಳಿಗೆಯು ಕಳೆದುಹೋಗಿತ್ತು.
ಅದು ನವೆಂಬರ್ 6, 2017. ತನ್ನ 50 ರ ಹರೆಯದಲ್ಲಿದ್ದ ಸೆಟ್ಟು ಆ ದಿನ ಮಧ್ಯಾಹ್ನ ತನ್ನ ಒಂದೂವರೆ ಎಕರೆ ವಿಸ್ತೀರ್ಣದ ಗದ್ದೆಗೆ ಹೋಗಿದ್ದ. ತನ್ನ ಭತ್ತದ ಬೆಳೆಯನ್ನು ಉಳಿಸಿಕೊಳ್ಳುವ ಕಾತರ, ಆತಂಕಗಳೊಂದಿಗೆ. ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ತಾಯನ್ನೂರಿನಲ್ಲಿರುವ ಈ ಬಣಗುಡುವ ಗದ್ದೆ ಆತನ ಹೃದಯವನ್ನು ಕಿವುಚಿತ್ತು. ಎರಡನೇ ಬಾರಿಗೆ ಕಷ್ಟಪಟ್ಟು ಹಾಕಿದ್ದ ಬೀಜವೂ ಮೊಳಕೆಯೊಡೆದಿರಲಿಲ್ಲ.
“ಆ ದಿನ ಸಂಜೆ ಮನೆಗೆ ಬಂದೆ. ಹೆಂಡತಿ ಮಕ್ಕಳು ಬೇರೆಯವರ ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದರು. ಸಾಲ ತೀರಿಸುವುದು ಹೇಗೆ, ನಾವು ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು”, ಎನ್ನುತ್ತಾರೆ ಸೆಟ್ಟು. ಜಿಲ್ಲಾ ಸಹಕಾರಿ ಬ್ಯಾಂಕು, ಖಾಸಗಿ ಲೇವಾದೇವಿಗಾರರು, ಕೈಗಡ ಸೇರಿದಂತೆ ಸುಮಾರು ಒಂದೂವರೆ ಲಕ್ಷ ಸಾಲವಾಗಿತ್ತು. “ಈ ಆತಂಕವು ಮಿತಿಮೀರಿದಾಗ ನಾನು ಜೀವತೆಗೆದುಕೊಳ್ಳಲು ತೀರ್ಮಾನಿಸಿದೆ”, ಎಂದಾತ ಘಟನೆಯನ್ನು ಮೆಲುಕು ಹಾಕುತ್ತಾರೆ.
ಸೆಟ್ಟುವಿನ ಆತ್ಮಹತ್ಯೆ ಪ್ರಯತ್ನದ ಕೆಲವು ತಿಂಗಳುಗಳ ಬಳಿಕ, ಎಪ್ರಿಲ್ ಅಂತ್ಯ- ಮೇ 2017 ರ ಹೊತ್ತಿಗೆ, ಒಂದುಕಾಲದಲ್ಲಿ ಫಲವತ್ತಾದ ಭೂಮಿಯಾಗಿದ್ದ ಕಾವೇರಿ ಕೊಳ್ಳದ ರೈತರು ದಿಲ್ಲಿಯಲ್ಲಿ ಉಗ್ರವಾದ ಪ್ರತಿಭಟನೆ ನಡೆಸಿದ್ದರು. ಅರೆಬೆತ್ತಲಾಗಿ, ಇಲಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು, ತಲೆಬುರುಡೆಗಳನ್ನು ಪ್ರದರ್ಶಿಸುತ್ತಾ, ನೆಲದಲ್ಲಿ ಹೊರಳಾಡುತ್ತಾ ನಡೆಸಿದ ತೀವ್ರ ನಾಟಕೀಯವಾದ ಪ್ರತಿಭಟನೆಯಾಗಿತ್ತದು. ಸಾಲ ಮನ್ನಾ ಅವರ ಬೇಡಿಕೆಯಾಗಿತ್ತು. ಇನ್ನು ಈ ಪ್ರದೇಶಗಳಲ್ಲಿ ಆತಂಕಕ್ಕೀಡಾದ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಸಾಲದ ಈ ಹೊಡೆತ ತಡೆದುಕೊಳ್ಳಲಾಗದೇ ಹೃದಯಾಘಾತದಿಂದ ತೀರಿಕೊಂಡಿದ್ದರು.
2017, ಜನವರಿಯಲ್ಲಿ, ಪೀಪಲ್ಸ್ ಯುನಿಯನ್ ಆಫ್ ಸಿವಿಲ್ ಲಿಬರ್ಟೀಸ್ ನ ತಂಡವೊಂದು ಕಾವೇರಿ ಕೊಳ್ಳದಲ್ಲಿ ಸಂಭವಿಸಿದ 50 ಕ್ಕೂ ಮಿಕ್ಕಿ ಹಠಾತ್ ಸಾವು ಮತ್ತು ಆತ್ಮಹತ್ಯೆಗಳ ಅಧ್ಯಯನ ನಡೆಸಿತ್ತು. ಈ ತಂಡದಲ್ಲಿ ಕೃಷಿ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು, ವೈದ್ಯರು ಮತ್ತಿತರರಿದ್ದರು. 2017 ರ ಜನವರಿಯಿಂದ ಜೂನ್ ನಡುವೆ ಸುಮಾರು 200 ಹೃದಯಾಘಾತದ ಸಾವುಗಳು ಈ ಪ್ರದೇಶದಲ್ಲಿ ಸಂಭವಿಸಿವೆ ಎನ್ನುತ್ತಾರೆ ಸ್ಥಳೀಯ ರೈತರು. ಜೊತೆಗೆ, ಡಿಸೆಂಬರ್ 2016 ರ ಒಂದೇ ತಿಂಗಳಲ್ಲಿ 106 ಮಂದಿ ಈ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸುತ್ತದೆ, 2017 ಜನವರಿ 5 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯಸರಕಾರಕ್ಕೆ ಸಲ್ಲಿಸಿದ ವರದಿ.
ಈ ಸುದ್ದಿಗಳು ತಮಿಳುನಾಡಿನ ಮೇಲೆ ಗಂಡಾಂತರದ ಕಾರ್ಮೋಡವು ದಟ್ಟೈಸಿರುವುದನ್ನು ಬೊಟ್ಟುಮಾಡುತ್ತಿವೆ. ಡೆಲ್ಟಾ ಮತ್ತು ಕಾವೇರಿ ಬೇಸಿನ್ನಿನ ಪ್ರದೇಶದುದ್ದಕ್ಕೂ ಇರುವ ಹಳ್ಳಿಗಳ ಜನರು ನೀರಿನ ಈ ಭಯಂಕರ ಅಭಾವದ ಬಗ್ಗೆಯೇ ನಮಗೆ ಹೇಳುತ್ತಿದ್ದರು. ಹಾಗೆ ನೋಡಿದರೆ ಕಾವೇರಿ ನದಿಯು ಸಮುದ್ರವನ್ನು ಸೇರುವ ಪ್ರದೇಶವಾದ ಈ ಜಾಗವು ಪೂರ್ವ ತಮಿಳುನಾಡಿನ ಇತರ ಭಾಗಗಳಿಗಿಂತ ಕೊಂಚ ವಾಸಿ ಎಂಬಂತಿದೆ. ಆದರೆ ಇಲ್ಲೀಗ ಎದುರಾಗಿರುವುದು ಜಲಗಂಡ. ಅದೂ ಮಾನವ ನಿರ್ಮಿತ ಜಲಗಂಡ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಬರಕ್ಕಿಂತಲೂ ಭೀಕರ ಸ್ಥಿತಿಯಿದು ಎನ್ನುತ್ತಿದ್ದಾರೆ ಇಲ್ಲಿನ ಜನತೆ.





