“ತಮ್ಮ ಮನೆ ಬಾಗಿಲಿಗೆ ಬರಬೇಡಿರೆಂದು ಹಳ್ಳಿಗರು ನಮ್ಮ ಮೇಲೆ ರೇಗಾಡುತ್ತಿದ್ದಾರೆ. ಯಾವುದೋ ಖಾಯಿಲೆ ಬಂದಿದೆಯೆಂಬುದಾಗಿ ಅವರು ಹೇಳುತ್ತಾರೆ. ನಮಗೆ ಯಾರೂ ಆ ಖಾಯಿಲೆಯ ಬಗ್ಗೆ ತಿಳಿಸುತ್ತಿಲ್ಲ. ನನಗೆ ಯಾವುದೇ ಖಾಯಿಲೆಯಿಲ್ಲ. ಅವರು ನನ್ನನ್ನು ತಡೆಯುತ್ತಿರುವುದಾದರೂ ಏಕೆ?”
ಫಾನ್ಸೆ ಪಾರ್ಧಿ ಆದಿವಾಸಿಯಾದ ಗೀತ ಕಾಳೆಗೆ ಒಂದು ವಾರದಿಂದಲೂ ಯಾವುದೇ ಆಹಾರ ದೊರೆತಿಲ್ಲ. ಸಾಮಾನ್ಯ ದಿನಗಳಲ್ಲೂ ಸಹ 78ರ ಆಕೆಯು ತನ್ನ ಹಸಿವನ್ನು ನೀಗಿಸಿಕೊಳ್ಳುವುದು ಭಿಕ್ಷಾಟನೆಯಿಂದಲೇ. ಲಾಕ್‍ಡೌನ್ ಕಾಣದಿಂದಾಗಿ ಆಕೆಗೆ ಆಧಾರವೇ ಇಲ್ಲದಂತಾಗಿದೆ. ಕೋವಿಡ್-19ರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲವಾದರೂ, ಆಕೆ ಹಾಗೂ ಇತರೆ ಪಾರ್ಧಿಗಳು, ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ.
ಆಕೆಗೆ ನೆನಪಿರುವಂತೆ, ಮಾರ್ಚ್ 25ರಂದು ಕೊನೆಯ ಬಾರಿಗೆ ತಂಗಳು ಬಾಜ್ರಾ ಭಖ್ರಿಯನ್ನು ಆಕೆಗೆ ನೀಡಲಾಯಿತು. “ನನಗೆ ಪರಿಚಯವಿಲ್ಲದ ಕೆಲವು ಹುಡುಗರು ಐತ್ವಾರದಂದು (ಮಾರ್ಚ್ 22ನೇ ಭಾನುವಾರ) ಬಂದು ನಾಲ್ಕು ಭಕ್ರಿಗಳನ್ನು ನೀಡಿದರು. ನಾನು ಅವನ್ನು ನಾಲ್ಕು ದಿನಗಳವರೆಗೂ ತಿಂದೆ”, ಎಂದು ಆಕೆ ತಿಳಿಸಿದರು. ಅಂದಿನಿಂದಲೂ ಇವರು ತನ್ನ ಹಸಿವನ್ನು ನಿಗ್ರಹಿಸುತ್ತಿದ್ದಾರೆ. “ಆ ನಂತರ ಇಲ್ಲಿಗೆ ಯಾರೂ ಬಂದಿಲ್ಲ. ಹಳ್ಳಿಗರು ನನಗೆ ಹಳ್ಳಿಯನ್ನು ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ”, ಎಂದು ಸಹ ಅವರು ತಿಳಿಸಿದರು.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಶಿರೂರಿನ ಮುಖ್ಯ ರಸ್ತೆಯಲ್ಲಿ, ತಗಡಿನ ಗುಡಾರವೊಂದರಲ್ಲಿ ಗೀತಾಬಾಯಿ ಒಬ್ಬಂಟಿಯಾಗಿದ್ದಾರೆ. ಎರಡು ಕಿ.ಮೀ. ದೂರದ ಚೌಹನ್ವಾಡಿ ಹಳ್ಳಿಗೆ ಆಕೆ ಭಿಕ್ಷೆ ಬೇಡಲು ತೆರಳುತ್ತಾರೆ. “ಜನರು ನಮಗೆ ಕೊಟ್ಟ ಅಳಿದುಳಿದ ಆಹಾರವನ್ನು ನಾವು ತಿನ್ನುತ್ತಿದ್ದೆವು”, ಎನ್ನುತ್ತಾರೆ ಆಕೆ. “ಸರ್ಕಾರವು ರೇಷನ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುತ್ತಿದೆಯೆಂಬುದಾಗಿ ಯಾರೋ ಹೇಳುತ್ತಿರುವುದನ್ನು ಕೇಳಿದೆ. ನನ್ನ ಬಳಿ ರೇಷನ್ ಕಾರ್ಡ್ ಇಲ್ಲ”, ಎಂದು ಅವರು ಅಲವತ್ತುಕೊಂಡರು.
ಫಾನ್ಸೆ ಪಾರ್ಧಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದ್ದು, ಅವರು ಬಡ ಹಾಗೂ ಅವಕಾಶವಂಚಿತ ಪಾರ್ಧಿ ಆದಿವಾಸಿ ಗುಂಪುಗಳಲ್ಲಿನ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವ ಜನರಾಗಿದ್ದಾರೆ. ಸ್ವಾತಂತ್ರದ ನಂತರದಲ್ಲಿ, 70ಕ್ಕೂ ಹೆಚ್ಚಿನ ವರ್ಷಗಳಿಂದಲೂ ಬರ್ಬರವೆನಿಸಿದ್ದ ವಸಾಹತುಶಾಹಿ ಕಾನೂನಿನ ಪರಂಪರೆ ಹಾಗೂ ಹೊರೆಯನ್ನು ಅವರು ಅನುಭವಿಸುತ್ತಲೇ ಇದ್ದಾರೆ. ದಂಗೆಯೆದ್ದು ತಮ್ಮ ಅಧಿಪತ್ಯಕ್ಕೆ ಸವಾಲನ್ನೊಡ್ಡಿದ ಅನೇಕ ಆದಿವಾಸಿ ಮತ್ತು ಪಶುಚಾರಣಿಕರನ್ನು ಶಿಕ್ಷಿಸಿ, ಅವರನ್ನು ದಮನಗೊಳಿಸಲು 1871ರಲ್ಲಿ, ಬ್ರಿಟಿಷರು ಬುಡಕಟ್ಟು ಜನರ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಿ, ಸುಮಾರು 200 ಸಮುದಾಯಗಳನ್ನು ಜನ್ಮಜಾತ ಅಪರಾಧಿಗಳೆಂದು ಘೋಷಿಸಿದರು. ವಿನಾಶಕಾರಿಯಾಗಿ ಪರಿಣಮಿಸಿದ ಈ ಕಾನೂನಿನಿಂದಾಗಿ ಇವರು ಸಮಾಜದಿಂದ ಬೇರ್ಪಡುವಂತಾಯಿತು.
ಸ್ವತಂತ್ರ ಭಾರತವು 1952ರಲ್ಲಿ ಈ ಕಾನೂನನ್ನು ರದ್ದುಪಡಿಸಿ, ‘ದಂಡಾರ್ಹ ಬುಡಕಟ್ಟುಗಳ’ ಪಟ್ಟಿಯನ್ನು ‘ಅಧಿಸೂಚನೆಯಿಂದ ತೆಗೆದುಹಾಕಿತು.’ ಆದರೆ ಸಮಾಜದಲ್ಲಿನ ಇವರ ಬಗೆಗಿನ ಕಳಂಕ, ಪೂರ್ವಾಗ್ರಹ ಮತ್ತು ಹಿಂಸೆಗಳು ಮುಂದುವರಿಯುತ್ತಲೇ ಇವೆ. ಈ ಸಮುದಾಯದ ಅನೇಕರಿಗೆ ಪ್ರಮುಖ ಗ್ರಾಮಗಳ ಪ್ರವೇಶ ಹಾಗೂ ಅಲ್ಲಿನ ಬಾವಿಯಿಂದ ನೀರನ್ನು ಪಡೆಯುವುದು ಅಸಾಧ್ಯ. ಅವರು ಆ ಪ್ರದೇಶದಿಂದ ಸುಮಾರು 2-3 ಕಿ.ಮೀ.ಗಳಾಚೆ ನೆಲೆಸುತ್ತಾರೆ. ಇವರಿಗೆ ಕೆಲಸವು ದೊರೆಯುವುದಿಲ್ಲ. ಇವರ ಶೈಕ್ಷಣಿಕ ಮಟ್ಟವು ಶೋಚನೀಯವಾಗಿದೆ. ಅನೇಕರನ್ನು ಜೈಲಿಗೆ ತಳ್ಳಲಾಗಿದ್ದು ಅವರ ಮೇಲೆ ಸಣ್ಣಪುಟ್ಟ ಅಪರಾಧಗಳನ್ನು ಹೊರಿಸಲಾಗಿದೆ. ಹಲವರಿಗೆ ಭಿಕ್ಷಾಟನೆಯ ಹೊರತಾಗಿ ಜೀವನೋಪಾಯಕ್ಕೆ ಯಾವುದೇ ಆಯ್ಕೆಗಳಿಲ್ಲ.





