ಹೊಗೆಸೊಪ್ಪು ಬೆಳೆಯುವ ನೆಲ ಮತ್ತು ಅದನ್ನು ಒಣಗಿಸುವ ಕೊಟ್ಟಿಗೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಒಪ್ಪಂದದ ಚೌಕಟ್ಟಿಗೂ (FCTC) ಒಂದಕ್ಕೊಂದು ಸಂಬಂಧವಿದೆ, ಇದರ ಉದ್ದೇಶ ಹೊಗೆಸೊಪ್ಪು ಬಳಕೆಯನ್ನು ಕಡಿಮೆ ಮಾಡುವುದಾಗಿದೆ. 2016 ರಲ್ಲಿ ಈ ಒಪ್ಪಂದಕ್ಕೆ (FCTC) ಭಾರತವೂ ಸಹಿ ಹಾಕಿದ್ದು, ಹಂತ ಹಂತವಾಗಿ ಹೊಗೆಸೊಪ್ಪಿನ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಹಾಗಾಗಿ ತಂಬಾಕು ಮಂಡಳಿಯು ಹೊಸ ಕೊಟ್ಟಿಗೆಗಳ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ನಿಲ್ಲಿಸಿದೆ – ಹೊಗೆಸೊಪ್ಪಿನಲ್ಲಿ ಲಾಭವೂ ಕಡಿಮೆಯಾಗಿರುವುದರಿಂದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ರೈತರು ಸಲ್ಲಿಸುವ ಮನವಿಗಳೂ ಕಡಿಮೆಯಾಗುತ್ತಿವೆ.
ಟಿ. ಅಗ್ರಹಾರಂನಲ್ಲಿ ಗುತ್ತಿಗೆ ಹೊಡೆಯುವ ಬೇಸಾಯಗಾರ ಶ್ರೀನಿವಾಸ ರಾವ್, 40 ವರ್ಷ, ಒಂಬತ್ತು ಎಕರೆ ಜಮೀನನ್ನು ಎಕರೆಗೆ ರೂ. 30,000ದಂತೆ ಗುತ್ತಿಗೆ ತೆಗೆದುಕೊಂಡು ಬೇಸಾಯ ಮಾಡುತ್ತಿದ್ದಾರೆ, ಹೋದ ವರುಷದ ಒಂದೇ ಸುಗ್ಗಿಗೆ 1.5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. “2012ರಲ್ಲಿ ರೂ. 6 ಲಕ್ಷ ಖರ್ಚು ಮಾಡಿ ಕೊಟ್ಟಿಗೆಯನ್ನು ಕಟ್ಟಿಸಿದ್ದೆ, ಹೋದ ವರ್ಷ ಅದನ್ನು ರೂ. 3 ಲಕ್ಷಕ್ಕೆ ಮಾರಿದೆ,” ಎಂದರು. “ಈಗ ಕೊಟ್ಟಿಗೆಗಳನ್ನು ಕೊಂಡುಕೊಳ್ಳುವವರೂ ಸಹ ಯಾರೂ ಸಿಗುವುದಿಲ್ಲ. ಕೊಟ್ಟಿಗೆಯೊಂದಕ್ಕೆ ರೂ. 10 ಲಕ್ಷ ಪರಿಹಾರ ಕೊಡಿ ಎಂದು ಸರಕಾರವನ್ನು ಕೇಳಿಕೊಂಡಿದ್ದೆವು, ಕೊಟ್ಟ ತಕ್ಷಣವೇ ಹೊಗೆಸೊಪ್ಪು ಬೆಳೆಯುವುದನ್ನು ನಿಲ್ಲಿಸಿಬಿಡುತ್ತೇವೆ. 2010ರಲ್ಲಿ ಕೊಟ್ಟಿಗೆಯಲ್ಲಿ ಕೆಲಸ ಮಾಡಲು ಹೊರಗಿನ ಹಳ್ಳಿಗಳಿಂದ ಸುಮಾರು ಕೂಲಿಯವರ 33 ತಂಡಗಳು ಬಂದಿದ್ದವು. ಈ ವರುಷ ಹೆಚ್ಚೆಂದರೆ 10 ತಂಡಗಳು ಬಂದಿದ್ದಾರೆ.”
ಇವೆಲ್ಲವೂ ಸೇರಿಕೊಂಡು ಪ್ರಕಾಶಂನ ಹೊಗೆಸೊಪ್ಪು ಬೆಳೆಗಾರರು ಕಡಿಮೆ ನೀರು ಸಾಕಾಗುವ, ಲಾಭದಾಯಕವಾದ ಬೇರೆ ಬೇರೆ ಬೆಳೆಗಳತ್ತ ನೋಡುವಂತೆ ಮಾಡಿದೆ. ನಾನು ಮುಗಾ ಚಿಂತಾಲ ಹಳ್ಳಿಗೆ ಹೋಗಿದ್ದಾಗ, ಸುಬ್ಬರಾವರು ತಮ್ಮ ಸ್ಮಾರ್ಟಫೋನಿನ ಮೂಲಕ ಯೂಟ್ಯೂಬಿನಲ್ಲಿ ಇತರ ರೈತರಿಗೆ ಮೆರುಗೆಣ್ಣೆಯ ಮರದ ಬೆಳೆಯ ಬಗ್ಗೆ ತೋರಿಸುತ್ತಿದ್ದರು. “ನಾವು ಇದನ್ನು ನಮ್ಮೂರಿನಲ್ಲಿ ಬೆಳೆಯಬೇಕು,” ಇವರೆಂದರು; ಅವರು ತಲೆಯಾಡಿಸುತ್ತಾ, ಹೆಚ್ಚಿನ ಮಾಹಿತಿಯನ್ನು ಕೇಳುತ್ತಿದ್ದರು. “ಶ್ರೀಕಾಕುಳಂ ಜಿಲ್ಲೆಯಲ್ಲಿ ಮತ್ತು ಒರಿಸ್ಸಾದ ಭಾಗಗಳಲ್ಲಿ ಬೆಳೆಯಲಾಗುವ ಇದೊಂದು ವಾಣಿಜ್ಯ ಬೆಳೆ, ಜೊತೆಗೆ ಇದಕ್ಕೆ ಅಷ್ಟು ನೀರು ಬೇಕಾಗುವುದಿಲ್ಲ,” ಎಂದು ವಿವರಿಸಿದರು.
ಈಮಧ್ಯೆ ದೆಹಲಿಯ ಆಟೋರಿಕ್ಷಾಗಳ ಮೇಲೆ ಮತ್ತು ಬಸ್ಸುನಿಲ್ದಾಣಗಳಲ್ಲಿ ರೈತರು “ನಮ್ಮ ಜೀವನವನ್ನು ರಕ್ಷಿಸಿ” ಎನ್ನುವ ಗೋಡೆಯೋಲೆಗಳು ಕಾಣುತ್ತಿವೆ. ಅದರಲ್ಲಿ ಹೊಗೆಸೊಪ್ಪು ಮಾರಾಟಗಾರರ ರಾಷ್ಟ್ರ ಮಟ್ಟದ ಸಂಘಟನೆ ಅಖಿಲ ಭಾರತ ಪಾನ್ ವಿಕ್ರೇತ ಸಂಘಟನೆಯ ಹೆಸರು ಮತ್ತು ಗುರುತುಗಳಿವೆ. ಅದರ ಜೊತೆಗೆ ಸುಬ್ಬರಾಯರು ಹೇಳಿದ್ದು, “ಒಂದು ವೇಳೆ ನಾವೇ ರೈತರೆಲ್ಲ ಸೇರಿಕೊಂಡು ನೀರಾವರಿ ಸೌಲಭ್ಯಕ್ಕಾಗಿಯೋ ಇಲ್ಲವೆ ಸಿಗರೇಟು ಕಂಪನಿಗಳ ವಿರುದ್ದವೋ ಹೋರಾಡಿದ್ದರೆ ಇಷ್ಟೊತ್ತಿಗೆ ಸಮಸ್ಯೆಯಾದರೂ ಬಗೆಹರಿಯುತ್ತಿತ್ತು.”
ಈ ಬರಹದ ಇನ್ನೊಂದು ಆವೃತ್ತಿಯು ಮತ್ತೊಬ್ಬ ಸಹಲೇಖಕರೊಂದಿಗೆ ‘ದಿ ಹಿಂದೂ ಬಿಸಿನೆಸಲೈನ್’ ಪತ್ರಿಕೆಯಲ್ಲಿ ಈ ಮೊದಲು ಫೆಬ್ರವರಿ 2, 2018 ರಲ್ಲಿ ಪ್ರಕಟವಾಗಿತ್ತು.
ಅನುವಾದ: ಬಿ.ಎಸ್. ಮಂಜಪ್ಪ