ಶಾಂತಿ ದೇವಿ ಅವರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ ಎಂದು ಸಾಬೀತುಪಡಿಸಲು ಮರಣ ಪ್ರಮಾಣಪತ್ರ ಅಥವಾ ಬೇರೆ ಯಾವುದೇ ಮಾರ್ಗಗಳಿಲ್ಲ. ಇನ್ನು ಆಕೆಯ ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಗಮನಿಸಿದರೆ ಮೇಲೆ, ಬೇರೆ ತೀರ್ಮಾನಕ್ಕೂ ಬರಲಾಗುವುದಿಲ್ಲ.
2021ರ ಏಪ್ರಿಲ್ ತಿಂಗಳಿನಲ್ಲಿ, ಕೋವಿಡ್ -19ರ ಎರಡನೇ ಅಲೆಯು ದೇಶದಾದ್ಯಂತ ಉಲ್ಬಣಗೊಂಡಾಗ 40ರ ಮಧ್ಯ ವಯಸ್ಸಿನದಲ್ಲಿದ್ದ ಶಾಂತಿದೇವಿ ಅನಾರೋಗ್ಯಕ್ಕೆ ಒಳಗಾಗಿದ್ದರು. ರೋಗಲಕ್ಷಣಗಳು ಒಂದರ ನಂತರ ಒಂದರಂತೆ ಕಾಣಿಸಿಕೊಂಡವು: ಮೊದಲು ಕೆಮ್ಮು ಮತ್ತು ಶೀತ ಮತ್ತು ನಂತರ ಮರುದಿನ ಜ್ವರ. “ಗ್ರಾಮದ ಬಹುತೇಕ ಎಲ್ಲರೂ ಏಕಕಾಲಕ್ಕೆ ಅಸ್ವಸ್ಥರಾಗಿದ್ದರು" ಎಂದು ಅವರ 65 ವರ್ಷದ ಅತ್ತೆ ಕಲಾವತಿ ದೇವಿ ಅವರು ಹೇಳುತ್ತಾರೆ."ನಾವು ಅವಳನ್ನು ಮೊದಲು ಜೋಲಾ ಚಾಪ್ ವೈದ್ಯರ ಬಳಿಗೆ ಕರೆದುಕೊಂಡು ಹೋದೆವು.” ಎನ್ನುತ್ತಾರೆ.
ಜೋಲಾ ಚಾಪ್ ಅಥವಾ ವೈದ್ಯಕೀಯ ಸೇವೆಗಳನ್ನು ನೀಡುವ ಗ್ರಾಮೀಣ ವೈದ್ಯರು ಉತ್ತರ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲಿ ಕಂಡುಬರುತ್ತಾರೆ. ಅವರು ಸುಲಭವಾಗಿ ಲಭ್ಯವಿರುವುದರಿಂದ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವು ಕಳಪೆಯಾಗಿರುವುದರಿಂದ ಗ್ರಾಮೀಣ ಪ್ರದೇಶದ ಬಹುತೇಕ ಜನರು ಸಾಂಕ್ರಾಮಿಕ ರೋಗದ ನಿವಾರಣೆಗಾಗಿ ಇಂತಹ ವೈದ್ಯರ ಬಳಿ ಹೋಗುತ್ತಾರೆ, "ನಾವೆಲ್ಲರೂ ಹೆದರಿದ್ದರಿಂದ ಯಾರೂ ಆಸ್ಪತ್ರೆಗೆ ಹೋಗಲಿಲ್ಲ. “ನಮ್ಮನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ ಎಂದು ನಾವು ಹೆದರುತ್ತಿದ್ದೆವು. ಅಲ್ಲದೇ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು. ಯಾವುದೇ ಹಾಸಿಗೆಗಳು ಲಭ್ಯವಿರಲಿಲ್ಲ. ಆದ್ದರಿಂದ ನಾವು ಜೋಲಾ ಚಾಪ್ ವೈದ್ಯರ ಬಳಿಗೆ ಮಾತ್ರವೇ ಹೋಗಲು ಸಾಧ್ಯ” ಎಂದು ವಾರಣಾಸಿ ಜಿಲ್ಲೆಯ ದಲ್ಲಿಪುರ ಗ್ರಾಮದಲ್ಲಿ ವಾಸಿಸುವ ಕಲಾವತಿ ಹೇಳುತ್ತಾರೆ.
ಆದರೆ ಈ ‘ವೈದ್ಯರು’ ತರಬೇತಿ ಪಡೆಯದವರು, ಅನರ್ಹರು ಮತ್ತು ಗಂಭೀರವಾಗಿ ಅಸ್ವಸ್ಥರಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಅಸಮರ್ಥರಾಗಿದ್ದಾರೆ.
ಜೋಲಾ ಚಾಪ್ ವೈದ್ಯರನ್ನು ಭೇಟಿ ಮಾಡಿದ ಮೂರು ದಿನಗಳ ನಂತರ, ಶಾಂತಿಗೆ ಉಸಿರಾಟದ ತೊಂದರೆ ಪ್ರಾರಂಭವಾಯಿತು. ಈ ವೇಳೆ ಕಲಾವತಿ, ಶಾಂತಿ ಅವರ ಪತಿ ಮುನೀರ್ ಮತ್ತು ಇತರ ಕುಟುಂಬಸ್ಥರು ಭಯ ಭೀತಿಗೊಂಡರು. ವಾರಣಾಸಿಯ ಪಿಂಡ್ರಾ ಬ್ಲಾಕ್‌ನಲ್ಲಿರುವ ತಮ್ಮ ಗ್ರಾಮದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋದರು. "ಆದರೆ ಆಸ್ಪತ್ರೆಯ ಸಿಬ್ಬಂದಿ ಅವರ ಸ್ಥಿತಿಯನ್ನು ನೋಡಿ ಯಾವುದೇ ಭರವಸೆ ಇಡುವಂತಿಲ್ಲ ಎಂದು ಹೇಳಿದರು. ಹೀಗಾಗಿ ನಂತರ ನಾವು ಮನೆಗೆ ಬಂದು ದೆವ್ವ ಬಿಡಿಸಲು ಮುಂದಾದೆವು ” ಎಂದು ಕಲಾವತಿ ಹೇಳುತ್ತಾರೆ, ಇದು ಸಾಮಾನ್ಯವಾಗಿ ಪೊರಕೆಯಿಂದ ರೋಗವನ್ನು ಓಡಿಸುವ ಪುರಾತನ, ಅವೈಜ್ಞಾನಿಕ ಪದ್ಧತಿಯಾಗಿದೆ.
ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ; ಹಾಗಾಗಿ ಅದೇ ರಾತ್ರಿ ಶಾಂತಿ ಅವರು ಸಾವನ್ನಪ್ಪಿದರು.








