ಕಳೆದ ವರ್ಷದ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ, ಡೇರೆಯಿಂದ ಸುತ್ತುವರಿದ ವನ್ಯಜೀವಿ ಶಿಬಿರದ ಪ್ರಶಾಂತ ಪರಿಸರದಲ್ಲಿ, ಗೊಂಡ್ ಕಲಾವಿದ ಮಿಥಿಲೇಶ್ ಕುಮಾರ್ ಶ್ಯಾಮ್ ತನ್ನ ವರ್ಣರಂಜಿತ ವರ್ಣಚಿತ್ರಗಳನ್ನು ದೊಡ್ಡ ಮೇಜಿನ ಮೇಲೆ ಹರಡಿದರು. ಪಠಾಣಗಢದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿಯ ಬಮ್ನಿ ಗ್ರಾಮದ ಶಿಬಿರಕ್ಕೆ ಅವರು ತಮ್ಮ ಕುಟುಂಬದ ಹಳೆಯ ಕಾರಿನಲ್ಲಿ ಆ ಬೆಳಿಗ್ಗೆ ಬಂದಿದ್ದರು.
ಮರ, ಹಕ್ಕಿ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಒಂದು ಕಡೆಯಾದರೆ ಗೊಂಡ ಸಮುದಾಯದ ಸಂಗ್ರಹಿತ ಪುರಾಣಗಳು ಮತ್ತೊಂದೆಡೆ. ಆಧುನಿಕ ವಾಸ್ತವತೆಯ ಅದ್ಭುತ ವಿವರವಾದ ಚಿತ್ರಣಗಳೂ ಅವರ ಚಿತ್ರಕಲೆಯಲ್ಲಿ ಸೇರಿವೆ. "ಕೆಲವೊಮ್ಮೆ ನಾನು ನಮ್ಮ ಜಾನಪದದಿಂದ ಪ್ರೇರಿತನಾಗಿ ಚಿತ್ರ ಬಿಡಿಸುತ್ತೇನೆ. ನನ್ನ ಕಲ್ಪನೆಯ ಪ್ರಕಾರ, ಬನಾರುಪಿ (ಮೂರು ತಂತಿಗಳ ಪಿಟೀಲು) ನಮ್ಮ ಮುಖ್ಯ ದೇವತೆ ಬಾರಾ ದೇವನನ್ನು ('ಮಹಾನ್ ದೇವರು') ಚಿತ್ರಿಸುತ್ತದೆ." ಕೆಲವೊಮ್ಮೆ ದೈನಂದಿನ ಜೀವನದ ಸಮಕಾಲೀನ ಘಟನೆಗಳು ನನ್ನನ್ನು ಚಿತ್ರ ಬಿಡಿಸಲು ಪ್ರೇರೇಪಿಸುತ್ತವೆ. ನಾನು ನೋಡಿದ ವಿಷಯಗಳು, ನನ್ನ ಕಲ್ಪನೆ ಅಥವಾ ಕನಸನ್ನು ಸಹ ನಾನು ಚಿತ್ರಿಸುತ್ತೇನೆ," ಎಂದು 27 ವರ್ಷದ ಮಿಥಿಲೇಶ್ ಹೇಳುತ್ತಾರೆ.
ಮತ್ತು ಎಲ್ಲಾ ಗೊಂಡ್ ಕಲಾವಿದರಂತೆ, ಮಿಥಿಲೇಶ್ ಪ್ರತಿ ಚಿತ್ರವನ್ನು ವಿಶಿಷ್ಟ ವಿನ್ಯಾಸಗಳಿಂದ ತುಂಬುವ ವಿಧಾನವನ್ನು ಹೊಂದಿದ್ದಾರೆ - ಸಣ್ಣ ಸರಳ ರೇಖೆಗಳು, ಚುಕ್ಕೆಗಳು ಮತ್ತು ವಕ್ರರೇಖೆಗಳು ಚಿತ್ರದ ದೊಡ್ಡ ಆಕಾರಗಳನ್ನು ತುಂಬುತ್ತವೆ. ಹಬ್ಬದ ಸಮಯದಲ್ಲಿ, ಅವರ ಮಣ್ಣಿನ ಮನೆಗಳ ಗೋಡೆಗಳನ್ನು ವಿವಿಧ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ – ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ ಎಂದು ಅವರು ಹೇಳುತ್ತಾರೆ. ಅವರ ದೇವತೆಗಳ ಚಿತ್ರಗಳು, ನೀತಿಕಥೆಗಳು, ಗೋಡೆಗಳನ್ನು ಅಲಂಕರಿಸಿದ ಪುರಾಣಗಳನ್ನು ಗೊಂಡ್ ಬಿತ್ತಿ ಚಿತ್ರಗಳು ಎಂದು ಕರೆಯಲಾಗುತ್ತದೆ. "ಇದಕ್ಕಾಗಿ ನಾವು ಬಳಸುವ ಬಣ್ಣಗಳು ನೈಸರ್ಗಿಕ ಉತ್ಪನ್ನಗಳಿಂದ ಬರುತ್ತವೆ - ಹಸಿರು, ಚೆಂಡು ಹೂವಿನಿಂದ ಕಿತ್ತಳೆ, ಸೂರ್ಯಕಾಂತಿಯಿಂದ ಹಳದಿ, ಹಸುವಿನ ಸಗಣಿಯಿಂದ ಖೈರಿ, ಚುಹಿ [ಒಣಹುಲ್ಲಿನ ಮಣ್ಣಿನಿಂದ] ಬಿಳಿ, ಮಣ್ಣಿನಿಂದ ಕಪ್ಪು, ಇತ್ಯಾದಿ.









