ಪಟಚಿತ್ರವನ್ನು ರಚಿಸುವ ಮೊದಲ ಹಜ್ಜೆಯೆಂದರೆ ಹಾಡನ್ನು ರಚಿಸುವುದು. ಅದಕ್ಕೆ ಪಟಾರ್ ಗಾನ್ ಎಂದು ಕರೆಯಲಾಗುತ್ತದೆ. "ಚಿತ್ರ ಬರೆಯುವ ಮುನ್ನ ನಾವು ಹಾಡಿನ ಚರಣಗಳನ್ನು ರಚಿಸುತ್ತೇವೆ ... ಹಾಡಿನ ಲಯವು ಚಿತ್ರ ರಚನೆಯ ಪ್ರಕ್ರಿಯೆಗೆ ಒಂದು ಸಂರಚನೆಯನ್ನು ನೀಡುತ್ತದೆ" ಎಂದು ಮಾಮೋನಿ ಚಿತ್ರಕಾರ್ ಹೇಳುತ್ತಾರೆ. ಚಿತ್ರ ರಚನೆ ಮಾಡುವ ಪರಂಪರೆಯ ಎಂಟನೇ ತಲೆಮಾರಿನ ಕಲಾವಿದೆ ಮಾಮೋನಿ ಪಶ್ಚಿಮ ಬಂಗಾಳದ ಪೂರ್ವ ಕೋಲ್ಕತ್ತಾದ ಜೌಗು ಪ್ರದೇಶದ ಪಟಚಿತ್ರವನ್ನು ತಮ್ಮ ಮನೆಯಲ್ಲಿ ಕುಳಿತು ರಚಿಸುತ್ತಿದ್ದಾರೆ.
ಸಂಸ್ಕೃತ ಪದವಾದ 'ಪಟ್ಟ' ಅಂದರೆ ಬಟ್ಟೆಯ ತುಂಡು ಮತ್ತು 'ಚಿತ್ರ' ಅಂದರೆ ಚಿತ್ರಕಲೆಯಿಂದ ಈ ಕಲೆಗೆ ಪಟಚಿತ್ರ ಎಂಬ ಹೆಸರು ಬಂದಿದೆ. ಮಾಮೋನಿಯವರು ಜೌಗು ಪ್ರದೇಶದಲ್ಲಿ ಬೆಳೆದಿರುವ ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಚಿತ್ರಿಸುತ್ತಿದ್ದಂತೆ, ಅವರು ಪಟಚಿತ್ರವನ್ನು ಬಳಸಿ ಅಭಿನಯಿಸುತ್ತಾ ಪಟಾರ್ ಗಾನ್ ಅನ್ನು ಹಾಡುತ್ತಾರೆ. ಮಾಮೋನಿ ಅವರೇ ಸ್ವತಃ ಬರೆದು ಸಂಯೋಜಿಸಿರುವ ಈ ಹಾಡು "ಆಲಿಸಿ, ಓ ಎಲ್ಲಾ ಆಲಿಸಿ, ಗಮನವಿಟ್ಟು ಕೇಳಿ" ಎಂದು ಎಲ್ಲರನ್ನೂ ಬರಮಾಡಿಕೊಳ್ಳುವುದರೊಂದಿಗೆ ಆರಂಭವಾಗುತ್ತದೆ.
"ಹಲವು ಜನರ ಜೀವನಾಡಿ" ಆಗಿರುವ ಪೂರ್ವ ಕೋಲ್ಕತ್ತಾ ಜೌಗು ಪ್ರದೇಶಗಳ ಪ್ರಾಮುಖ್ಯತೆಯನ್ನು ಈ ಹಾಡು ಕಥಿಸುತ್ತದೆ. ಬಟ್ಟೆಯ ಮೇಲೆ ಜೋಡಿಸಲಾಗಿರುವ ಕಾಗದದ ಮೇಲೆ ಬೆಸ್ತರು, ರೈತರು ಮತ್ತು ಎದ್ದುಕಾಣುವ ಹೊಲಗಳನ್ನು ಚಿತ್ರಿಸಲಾಗುತ್ತದೆ. ಪ್ರದರ್ಶನದ ಸಂದರ್ಭದಲ್ಲಿ ಅಂತಿಮ ಪಟದ ಸುರುಳಿಯನ್ನು ಬಿಚ್ಚಿದಾಗ ಅವು ಹಾಡಿನ ಚರಣಗಳಿಗೆ ಅನುಗುಣವಾಗಿರುತ್ತವೆ. ಈ ರೀತಿ ಮಾಮೋನಿಯವರ ಈ ಕಲಾಪ್ರಕಾರ ಚಿತ್ರ ಮತ್ತು ಸಂಗೀತದ ಮೂಲಕ ಜೌಗು ಪ್ರದೇಶಗಳ ಕಥೆಯನ್ನು ಹೇಳುತ್ತದೆ.
ಮಾಮೋನಿಯವರ ಪ್ರಕಾರ ಅವರ ಗ್ರಾಮವಾದ ಪಿಂಗ್ಲಾ ತಾಲೂಕಿನ ಪಶ್ಚಿಮ ಮೇದಿನಿಪುರದ ನಯಾ ಗ್ರಾಮ ಸುಮಾರು 400 ಕುಶಲಕರ್ಮಿಗಳ ನೆಲೆಯಾಗಿದೆ. ಈ ತಾಲೂಕಿನ ಬೇರೆ ಯಾವ ಗ್ರಾಮದಲ್ಲಿಯೂ ಪಟಚಿತ್ರ ರಚನೆ ಮಾಡುವ ಕಲಾವಿದರಿಲ್ಲ. "ಗ್ರಾಮದಲ್ಲಿರುವ ಬಹುತೇಕ ಎಲ್ಲಾ 85 ಮನೆಗಳ ಗೋಡೆಗಳ ಮೇಲೆ ಭಿತ್ತಿಚಿತ್ರಗಳಿವೆ" ಎಂದು 32 ವರ್ಷದ ಮಾಮೋನಿ ಎಲೆಗಳು, ಕಾಡು ಪ್ರಾಣಿಗಳು ಮತ್ತು ಹೂವುಗಳ ಎದ್ದುಕಾಣುವ ವರ್ಣರೇಖಾಚಿತ್ರಗಳನ್ನು ಉಲ್ಲೇಖಿಸಿ ಹೇಳುತ್ತಾರೆ. "ಇಡೀ ನಮ್ಮ ಹಳ್ಳಿಯು ಸುಂದರವಾಗಿ ಕಾಣುತ್ತದೆ" ಎಂದು ಅವರು ಹೇಳುತ್ತಾರೆ.











