ಉನ್ನಾವೋ ಹೊಲದಲ್ಲಿ ಇಬ್ಬರು ಹುಡುಗಿಯರ ಶವ ಪತ್ತೆ, ಮೂರನೆಯವಳ ಸ್ಥಿತಿ ಗಂಭೀರ
– ದಿ ವೈರ್ , ಫೆಬ್ರವರಿ 18, 2021
ಮರದಲ್ಲಿ ನೇಣು ಹಾಕಿದ್ದ ಸ್ಥಿತಿಯಲ್ಲಿ ದಲಿತ ಯುವತಿಯ ಶವ ಪತ್ತೆ, ಮೂವರ ವಿರುದ್ಧ ಎಫ್.ಐ.ಆರ್. ದಾಖಲು
– ಔಟ್‌ಲುಕ್ ಇಂಡಿಯಾ , ಜನವರಿ 18, 2021
ಉತ್ತರಪ್ರದೇಶದ ಹೊಲವೊಂದರಲ್ಲಿ 15 ವರ್ಷದ ಬಾಲಕಿಯ ಶವ ಪತ್ತೆ, ಕೊಲೆಯ ಶಂಕೆ ವ್ಯಕ್ತಪಡಿಸಿದ ಸಂಬಂಧಿ
– ದಿ ಹಿಂದೂಸ್ತಾನ್ ಟೈಮ್ಸ್ , ಅಕ್ಟೋಬರ್ 3, 2020
ಹತ್ರಾಸ್ ನಂತರ, ಇನ್ನೊಬ್ಬ 22 ವರ್ಷದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ
– ದಿ ಇಂಡಿಯನ್ ಎಕ್ಸ್‌ಪ್ರೆಸ್ , ಅಕ್ಟೋಬರ್ 1, 2020
ಕ್ರೂರ ಗುಂಪು ಅತ್ಯಾಚಾರಕ್ಕೆ ಈಡಾಗಿದ್ದ ಸಂತ್ರಸ್ತೆ, ದಲಿತ ಬಾಲಕಿ ದೆಹಲಿ ಆಸ್ಪತ್ರೆಯಲ್ಲಿ ಮರಣ
– ದಿ ಹಿಂದೂ , ಸೆಪ್ಟೆಂಬರ್ 29, 2020
ಉತ್ತರಪ್ರದೇಶ: ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
– ಫಸ್ಟ್ ಪೋಸ್ಟ್ , ಫೆಬ್ರವರಿ 19, 2015
ಮರದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಇನ್ನೊಂದು ಬಾಲಕಿಯ ಶವ ಪತ್ತೆ, ಅತ್ಯಾಚಾರ ಮತ್ತು ಕೊಲೆ ನಡೆದಿದೆಯೆಂದು ಕುಟುಂಬದ ಶಂಕೆ
–
ಡಿ.ಎನ್.ಎ
, ಜನವರಿ 12, 2014
ಸೂರ್ಯಕಾಂತಿಯ ಹೊಲ
ಬಹುಶಃ ಅವು ಇಂತಹ
ಬಿರುಸು ಮಳೆ ಸುರಿವ
ಸೂರ್ಯನ ಬೆಳಕು ಕಾಣದ
ಉಸಿರಾಟವೂ
ಕಷ್ಟವೆನ್ನಿಸುವ ಕಾಲದಲ್ಲಿ
ಬೆಳೆದು
ನಿಲ್ಲಬಾರದಿತ್ತು
ಅದು ನಮಗೂ ಗೊತ್ತು
ಅನುಮಾನಿಸಲು
ಕಾರಣಗಳಿಲ್ಲ
ಅದು ಸತ್ಯೆನ್ನುವುದು
ನಮಗೆ ಗೊತ್ತು
ಅವುಗಳನ್ನು ಕಿತ್ತು
ಹೊಸಕಿ, ತರಿದು ತಿನ್ನಲಾಗುತ್ತದೆ
-ಯೆನ್ನುವುದು ನಮಗೂ ಗೊತ್ತಿತ್ತು
ಹೂವುಗಳು ಕಂದು
ಬಣ್ಣಕ್ಕೆ ತಿರುಗುತ್ತಿದ್ದಂತೆ
ಕೊಯಿಲು
ಮಾಡಬೇಕೆನ್ನುವುದು ನಮಗೂ ಗೊತ್ತು
ಅವು
ಎಳೆಯದಾಗಿರುವಾಗಲೇ,
ತಾಜಾ ಇರುವಾಗಲೇ
ಹೆಚ್ಚು
ರುಚಿಯೆನ್ನುವುದೂ ನಮಗೆ ಗೊತ್ತು
ಅವು ತಮ್ಮ ಸರದಿಗಾಗಿ
ಕಾಯುತ್ತ ಕುಳಿತಿರುತ್ತವೆ ಬಲಿಯಾಗಲೆಂದು
ಮತ್ತೆ ಬಳಸಿದ ನಂತರ ಅವುಗಳನ್ನು ಸುಟ್ಟು ಹಾಕಬೇಕು
ಅಥವಾ ಕಡಿದು
ಹಾಕಬೇಕೆನ್ನುವುದು ಕೂಡ ನಮಗೆ ಗೊತ್ತು
ಬಹುಶಃ ಈ ರಾತ್ರಿಗಳು
ಪ್ರೇಮಕ್ಕೆ ಯೋಗ್ಯವಲ್ಲದಷ್ಟು
ಕ್ರೂರಿಯಾಗಿವೆ
ಗಾಳಿಗೆ ತನ್ನ
ನವಿರುತನ ಮರೆತು ಹೋಗಿದೆ
ಗಿಡಗಳು ಹೂವಿನ
ಭಾರಕ್ಕೆ ನಡು ಮುರಿದಂತಾಗಿವೆ
ಹೀಗಿರುವಾಗ ಈ ಹೂಗಳು
ಏಕೆ ಅರಳಿ ನಿಂತವು?
ಅದೂ ಅಷ್ಟು ದೊಡ್ಡ
ಸಂಖ್ಯೆಯಲ್ಲಿ
ಬೆಳೆದು
ನಿಲ್ಲಬಾರದಿತ್ತು ಈ ಕಾಡು ಸೂರ್ಯಕಾಂತಿ ಹೂಗಳು
ಅಸ್ಪ್ರಶ್ಯ ಸೌಂದರ್ಯದ ಹೊಲದ ತುಂಬೆಲ್ಲ
ಎತ್ತ ನೋಡಿದರೂ ಹಸಿರೋ
ಹಸಿರು
ಉರಿವ ಚಿನ್ನದ
ಜ್ವಾಲೆಯಂತಹ ಹಳದಿ ಹೂಗಳು
ಪುಟ್ಟ ಪಾದ ಎಡವಿ
ನಗುವ ಬಾಲೆಯರಂತಹ ಹೂಗಳು
ಕುಣಿದು ಜಿಗಿದು
ಸಂಭ್ರಮಿಸುವ ಪುಟ್ಟ ಹುಡುಗಿಯರಂತಹ ಹೂಗಳು
ತಮ್ಮ ಹೂಪಾದಗಳ ಮೇಲೆ
ನಿಂತು
ಆಕಾಶದೆತ್ತರಕೆ
ತಲೆಯೆತ್ತಿ ನಿಂತ ಹೂಗಳು
ಉರಿವ ಕಿತ್ತಳೆಯ
ಕಿರಣ ಮುಷ್ಟಿಯೊಳಗಿಟ್ಟುಕೊಂಡ ಹೂಗಳು
ಇದು ಕೇವಲ ಬಿಸಿ
ಬೂದಿಯಲ್ಲ
ಅಲ್ಲೆಲ್ಲೋ ಉರಿದ
ಚಿತೆಯಿದು
ನನ್ನ ಗರ್ಭದೊಳಗೂ
ಒಂದು ಸೂರ್ಯಕಾಂತಿಯ ತೋಟವಿದೆ
ಅದು ನನ್ನ
ಕಣ್ಣುಗಳಲ್ಲಿ
ನೀರು ಮತ್ತು ಉರಿಯನ್ನೂ ಒಮ್ಮೆಲೇ ಹುಟ್ಟಿಸುತ್ತಿದೆ
ಧ್ವನಿ: ಸುಧನ್ವ ದೇಶಪಾಂಡೆ ಜನ ನಾಟ್ಯ ಮಂಚ್‌ನ ನಟ ಮತ್ತು ನಿರ್ದೇಶಕ, ಮತ್ತು ಲೆಫ್ಟ್
ವರ್ಡ್ ಬುಕ್ಸ್ ಇದರ ಸಂಪಾದಕರೂ ಹೌದು.
ಅನುವಾದ: ಶಂಕರ ಎನ್. ಕೆಂಚನೂರು