"ನನ್ನ ಬಳಿ ಇರುವ ನೂಲು ಮುಗಿದಿದೆ. ಜೊತೆಗೆ ಹಣ ಕೂಡ ಖಾಲಿಯಾಗಿದೆ. ಆದರೆ ಲಾಕ್ಡೌನ್ನಿಂದಾಗಿ ನಾನು ಸಿದ್ಧವಿರುವ ಸೀರೆಗಳನ್ನು ಸೇಠ್ಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬುರ್ವಾರ್ ಹಳ್ಳಿಯ ಚಂದೇರಿ ಬಟ್ಟೆ ನೇಕಾರ ಸುರೇಶ್ ಕೋಲಿ ಅವರು ಹೇಳುತ್ತಾರೆ.
ಕೋವಿಡ್ -19 ಲಾಕ್ಡೌನ್ಗೆ ಕೇವಲ ಒಂದು ವಾರ ಇದ್ದಾಗ, 31 ವರ್ಷದ ಸುರೇಶ್ ಅವರ ಬಳಿ ಉಳಿದಿದ್ದ ನೂಲಿನ ಕೊನೆಯ ಸುರಳಿಗಳನ್ನು ನೇಯಲಾಗಿತ್ತು. ಅವರು ಪೂರ್ತಿ ಮುಗಿದಿರುವ ಸೀರೆಗಳನ್ನು ಪ್ರಾಣಪುರ ಗ್ರಾಮದ ಚಂದೇರಿ ಜವಳಿ ವ್ಯಾಪಾರಿ ಸೇಠ್ ಆನಂದಿ ಲಾಲ್ ಗೆ ಹಸ್ತಾಂತರಿಸಲು ಕಾಯುತ್ತಿದ್ದರು.
ಈ ನೇಕಾರರ ಗ್ರಾಮವು ಉತ್ತರ ಪ್ರದೇಶದ ಲಲಿತ್ಪುರ್ ಜಿಲ್ಲೆಯಲ್ಲಿರುವ ಬೆತ್ವಾ ನದಿಯ ರಾಜಘಾಟ್ ಅಣೆಕಟ್ಟಿನ ಬಳಿ ಇದೆ. ನದಿಯ ಉದ್ದಕ್ಕೂ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಚಂದೇರಿ ಪಟ್ಟಣ ಇದೆ, ಅದೇ ಹೆಸರಿನ ಕೈಮಗ್ಗ ಜವಳಿ ಕೇಂದ್ರವೂ ಅಲ್ಲಿದೆ. ಸೇಠ್ ನ ಗ್ರಾಮವಾಗಿರುವ ಪ್ರಾಣಪುರ ಕೂಡ ಈ ಪಟ್ಟಣಕ್ಕೆ ಹತ್ತಿರದಲ್ಲಿದೆ.
ಪೋಲಿಸ್ ಬ್ಯಾರಿಕೇಡ್ಗಳು ಯುಪಿ-ಎಂಪಿ ಗಡಿಯಲ್ಲಿ ಬುರ್ಹ್ವಾರ್ ಮತ್ತು ಚಂದೇರಿ ನಡುವಿನ 32 ಕಿಲೋಮೀಟರ್ ರಸ್ತೆಯಲ್ಲಿ ಕಾವಲಾಗಿವೆ, ಈಗ ಲಾಕ್ಡೌನ್ ಕಾರಣ ಸುರೇಶ್ ಮತ್ತು ಆನಂದಿಲಾಲ್ ಪರಸ್ಪರ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. "ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ದೆಹಲಿಯಿಂದ ಮನೆಗೆ ಹಿಂತಿರುಗುತ್ತಿದ್ದವರನ್ನು ಪೊಲೀಸರು ಕರೆದೊಯ್ದರು"ಎಂದು ಸುರೇಶ್ ಹೇಳುತ್ತಾರೆ. "ನಮ್ಮ ಹಳ್ಳಿಗೆ ಬೀಮಾರಿ (ರೋಗ) ಹೇಗೆ ತಗಲುತ್ತದೆ ಹೇಳಿ ? ಆದರೆ ಸರ್ಕಾರ ನಮ್ಮ ಜಿಲ್ಲೆಯನ್ನು ಲಾಕ್ ಮಾಡಿದೆ ಇದರಿಂದಾಗಿ ಈಗ ನಮ್ಮ ಜೀವನ ಏರುಪೇರಾಗಿದೆ" ಎನ್ನುತ್ತಾರೆ.
ಸುರೇಶ್ ಅವರು ಆನಂದಿ ಲಾಲ್ ಅವರಿಗೆ ಈಗಾಗಲೇ ಸಿದ್ಧವಾಗಿರುವ ಮೂರು ಸೀರೆಗಳಿಗೆ 5,000 ರೂ ಕೊಡಲು ಕೇಳಿದರು. “ಆದರೆ ಅವರು ಕೇವಲ 500 ರೂ.ಗಳನ್ನು ಮಾತ್ರ ಕಳಿಸಿದರು. ಮಾರುಕಟ್ಟೆಗಳು ತೆರೆದುಕೊಳ್ಳುವವರೆಗೂ ಯಾವುದೇ ಪೂರ್ಣ ಪಾವತಿ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.
ಲಾಕ್ಡೌನ್ಗೆ ಮುಂಚಿತವಾಗಿ, ಸೇಠ್ ಸುರೇಶ್ ಅವರಿಗೆ ಕಚ್ಚಾ ಸಾಮಗ್ರಿಗಳಾದ ಹತ್ತಿ ಮತ್ತು ರೇಷ್ಮೆ ನೂಲುಗಳು ಮತ್ತು ಜರಿ ನೂಲುಗಳನ್ನು ನೀಡುವುದರ ಜೊತೆಗೆ ಸೀರೆಗಳು, ದುಪಟ್ಟಾಗಳು, ಶಾಲುಗಳು, ಮೃದುವಾದ ಅಲಂಕೃತ ಬಟ್ಟೆಗಳು ಅಥವಾ ಬರಿ ಬಟ್ಟೆಯನ್ನು ನೇಯ್ಗೆ ಮಾಡಲು ನಿಯೋಜಿಸಿದ್ದರು. ಸೇಠ್ ವಿನ್ಯಾಸಗಳನ್ನು ಸಹ ನೀಡುತ್ತಿದ್ದರು. ಪ್ರತಿ ಆರ್ಡರ್ಗೆ ದರಗಳನ್ನು ನಿಗದಿಪಡಿಸಲಾಗಿರುತ್ತಿತ್ತು ಮತ್ತು ವಿತರಣೆಯ ಸಮಯದಲ್ಲಿ ಪಾವತಿಯನ್ನು ಯಾವಾಗಲೂ ನಗದು ರೂಪದಲ್ಲಿ ಮಾಡಲಾಗುತ್ತದೆ.









