ಅನಂತಪುರ್ ಜಿಲ್ಲೆಯಲ್ಲಿನ ನಾಗರುರ್ ಹಳ್ಳಿಯ ರೈತರು, ತಮ್ಮ ಹಳ್ಳಿಯಲ್ಲಿ ಅಂತರ್ಜಲವು ಹೇರಳವಾಗಿದ್ದ ಹಳೆಯ ದಿನಗಳಿಗಾಗಿ ಹಂಬಲಿಸುತ್ತಿದ್ದಾರೆ. 2007ಕ್ಕೂ ಹಿಂದೆ ಇದ್ದ ಸಮೃದ್ಧಿಯ ದಿನಗಳನ್ನು ಬಹುಶಃ ಮರೆಯಲು ಸಾಧ್ಯವಾಗದ ಅವರು, ಅದರ ಬಗ್ಗೆ ಕೆಲವೊಮ್ಮೆ ಮಾತಿಗೆ ತೊಡಗುತ್ತಾರೆ.
ಸುಮಾರು 2007ರಲ್ಲಿ, ಮಳೆಯು ದುರ್ಲಭವಾಗಿದ್ದಾಗ್ಯೂ, ನಾಗರುರ್ ಬಳಿಯ ದೊಡ್ಡಕೆರೆಗಳು ಕೊನೆಯ ಬಾರಿಗೆ ಉಕ್ಕಿ ಹರಿದಿದ್ದವು. “ಎನ್. ಟಿ. ರಾಮರಾವ್ ಅವರ ಕಾಲದಲ್ಲಿ (ಆಂಧ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ಸಮಯ) ಮಳೆಯು ಕ್ರಮಬದ್ಧವಾಗಿತ್ತು. ವೈ.ಎಸ್. ರಾಜಶೇಖರ ರೆಡ್ಡಿಯವರು ಅಧಿಕಾರವನ್ನು ವಹಿಸಿಕೊಂಡಾಗ (ಮೇ 2004ರಲ್ಲಿ), ಒಂದು ವಾರದವರೆಗೂ ದೊಡ್ಡಕೆರೆಗಳು ಉಕ್ಕಿ ಹರಿದಿದ್ದವು (ಭಾರಿ ಮಳೆಯಿಂದಾಗಿ). ಆದರೆ ಅದೇ ಕೊನೆಯಾಯಿತು” ಎನ್ನುತ್ತಾರೆ 42ರ ವಯಸ್ಸಿನ ರೈತ, ವಿ. ರಾಮಕೃಷ್ಣ ನಾಯ್ಡು.








