ಲಕ್ಷಿಮಾ ದೇವಿಗೆ ಆ ಘಟನೆ ನಡೆದ ದಿನಾಂಕ ನೆನಪಿಲ್ಲ, ಆದರೆ ಆ ಚಳಿಗಾಲದ ರಾತ್ರಿಯಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಕಣ್ಣಿಗೆ ಕಟ್ಟುವಂತೆ ನೆನಪಿದೆ. “ಜೋಳದ ಬೆಳೆ ಮುಂಗಾಲಿಗಿಂತ ಸ್ವಲ್ಪ ಮೇಲಕ್ಕೆ ಬೆಳೆದಿತ್ತು,” ನೀರು ಒಡೆತ ಕಾಣಿಸಿಕೊಳ್ಳುತ್ತಿದ್ದಂತೆ ಅವರು ಹೆರಿಗೆಗೆ ಸಜ್ಜಾದರು. “ಅದು ಅಂದಾಜು ಡಿಸೆಂಬರ್ ಅಥವಾ ಜನವರಿ ಇರಬಹುದು [2018/19],” ಎಂದು ಅವರು ಹೇಳಿದರು.
ಬಾರಾಗಾಂವ್ ಬ್ಲಾಕ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲು ಅವರ ಮನೆಯವರು ಟೆಂಪೋವನ್ನು ಬಾಡಿಗೆಗೆ ತರಿಸಿದರು. ಉತ್ತರಪ್ರದೇಶದ ವಾರಣಸಿ ಜಿಲ್ಲೆಯ ಅಶ್ವಾರಿ ಗ್ರಾಮದಲ್ಲಿರುವ ಅವರ ಮನೆಯಿಂದು ಆರು ಕಿಲೋಮೀಟರ್ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. “ನಾವು ಆರೋಗ್ಯ ಕೇಂದ್ರವನ್ನು ತಲುಪಿದಾಗ ನನಗೆ ಅತೀವ ನೋವು ಕಾಣಿಸಿಕೊಂಡಿತ್ತು,” ಎಂದು 30 ವರ್ಷ ಪ್ರಾಯದ ಲಕ್ಷಿಮಾ ಹೇಳಿದರು. ಅವರ 5 ರಿಂದ 11 ವರ್ಷ ಪ್ರಾಯದ ನಡುವಿನ ಮೂವರು ಹಿರಿಯ ಮಕ್ಕಳಾದ ರೇಣು, ರಾಜು ಮತ್ತು ರೇಶ್ಮಾ ಮನೆಯಲ್ಲಿದ್ದರು. “ಆಸ್ಪತ್ರೆಯ ಸಿಬ್ಬಂದಿ ನನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆತ ನಾನು ಗರ್ಭಿಣ ಅಲ್ಲ, ನನ್ನ ಹೊಟ್ಟೆ ಉಬ್ಬಿಕೊಂಡಿರುವುದು ಕಾಯಿಲೆಯ ಕಾರಣ ಎಂದ,”
ಲಕ್ಷಿಮಾ ಅವರ ಅತ್ತೆ ಹಿರಾಮಣಿಯವರು ದಾಖಲು ಮಾಡಿಕೊಳ್ಳುವಂತೆ ವಿನಂತಿಸಿದರು, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರಾಕರಿಸಿದರು. ಅಂತಿಮವಾಗಿ ಲಕ್ಷಿಮಾ ಇಲ್ಲಿಯೇ ಮಗುವಿಗೆ ಜನ್ಮನೀಡಲಿದ್ದಾಳೆ, ಅವಳಿಗೆ ನೆರವಾಗುವುದಾಗಿ ಹಿರಾಮಣಿ ಹೇಳಿದರು. “ನನ್ನನ್ನು ಬೇರೆ ಕಡೆ ಸಾಗಿಸಲು ನನ್ನ ಪತಿ ಆಟೋ ಹುಡುಕತೊಡಗಿದರು,” ಎಂದು ಲಕ್ಷಿಮಾ ಹೇಳಿದರು. “ಆದರೆ ಆಗ ನನಗೆ ಬಹಳ ನಿಶ್ಯಕ್ತಿ ಇದ್ದ ಕಾರಣ ಅಲ್ಲಿಂದ ಚಲಿಸಲಾಗಲಿಲ್ಲ. ಆರೋಗ್ಯ ಕೇಂದ್ರದ ಹೊರಗಡೆ ಇದ್ದ ಮರದ ಕೆಳಗಡೆ ನಾನು ಕುಳಿತುಕೊಂಡೆ,”
60 ವರ್ಷ ಪ್ರಾಯದ ಹಿರಾಮಣಿ ಅವರು ಲಕ್ಷಿಮಾ ಅವರ ಪಕ್ಕದಲ್ಲಿ ಕುಳಿತುಕೊಂಡು ಆಕೆಯ ಕೈ ಹಿಡಿದು ಉಸಿರಾಟಕ್ಕೆ ನೆರವಾಗುತ್ತಿದ್ದರು. ಒಂದು ಗಂಟೆಯ ನಂತರ, ಮಧ್ಯರಾತ್ರಿ ಹತ್ತಿರವಾಗುವ ಹೊತ್ತಿಗೆ ಲಕ್ಷಿಮಾ ಮಗುವಿಗೆ ಜನ್ಮ ನೀಡಿದರು. ಅದು ಕಗ್ಗತ್ತಲು ಮತ್ತು ವಿಪರೀತಿ ಚಳಿಯಿಂದ ಕೂಡಿದ ರಾತ್ರಿಯಾಗಿತ್ತು ಎಂಬುದನ್ನು ಲಕ್ಷಿಮಾ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.








