ಅಮ್ರೋಹಾದಿಂದ ದೆಹಲಿಯತ್ತ ಸಾಗಲು ಮುಂಜಾನೆ ರೈಲ್ವೆ ನಿಲ್ದಾಣದಿಂದ ಹೊರಡುವ ಕಾಶಿ ವಿಶ್ವನಾಥ ಎಕ್ಸ್-ಪ್ರೆಸ್ ರೈಲಿನಲ್ಲಿ ಮೊದಲ ಬಾರಿಗೆ ಕೂತಿದ್ದಾಗ ಐನೂಲ್ ನಿಜಕ್ಕೂ ಆತಂಕಿತಳಾಗಿದ್ದಳು. "ನಾನು ಭಯಭೀತಳಾಗಿದ್ದೆ. ನಾನು ಬಾಂಬೈ ಹೋಗೋದೆಂದೇ ಪದೇ ಪದೇ ಯೋಚಿಸುತ್ತಿದ್ದೆ. ಅಷ್ಟು ದೂರ ಹೋಗುತ್ತಿದ್ದೇನೆ. ಅಲ್ಲಿಯವರು ನನ್ನೊಂದಿಗೆ ಹೇಗೆ ನಡೆದುಕೊಳ್ಳುವರೋ ಏನೋ. ನಾನು ಹೇಗೆ ನಿಭಾಯಿಸುತ್ತೇನೋ ಏನೋ!", ಹೀಗೆ ಜನರಲ್ ಮಹಿಳಾ ಬೋಗಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಹದಿನೇಳರ ಹರೆಯದ ಐನೂಲಳ ಮನದಲ್ಲಿ ಚಿಂತೆಗಳೇ ತುಂಬಿದ್ದವು.
ಐನೂಲಳ ಮಾವನಾಗಿದ್ದ ಆಲಿಮ್ ಕೂಡ ಅದೇ ರೈಲಿನಲ್ಲಿದ್ದ. ಇಬ್ಬರೂ ದೆಹಲಿಯಲ್ಲಿ ಮತ್ತೊಂದು ರೈಲನ್ನು ಹಿಡಿದು ಬಾಂದ್ರಾ ಟರ್ಮಿನಸ್ ನಲ್ಲಿ ಬಂದಿಳಿದಿದ್ದರು. ಹೀಗೆ ಬಂದು ಐನೂಲಳನ್ನು ಆತ ಕರೆದುಕೊಂಡು ಹೋಗಿದ್ದು ಮಾಹಿಮ್ ಪ್ರದೇಶದ ನಯೀ ಬಸ್ತಿ ಕೊಳಗೇರಿ ಕಾಲೋನಿಯಲ್ಲಿದ್ದ ಹೊಸಮನೆಗೆ. ಇತ್ತ ಐನೂಲಳನ್ನು ಮನೆಗೆ ಬಿಟ್ಟಿದ್ದ ಆತ ಮಕ್ದೂಮ್ ಅಲಿ ಮಾಹಿಮಿ ದರ್ಗಾದ ಬಳಿ ಎಂದಿನಂತೆ ಭಿಕ್ಷಾಟನೆಗೆ ಹೊರಟಿದ್ದ.
ಮೂರು ವರ್ಷಗಳ ನಂತರ ಕೆಲ ಕಾಲದ ಮಟ್ಟಿಗೆ ಐನೂಲ್ ಕೂಡ ಈ ಭಿಕ್ಷಾಟನೆಯ ವೃತ್ತಿಯನ್ನು ಮಾಡುವವಳಿದ್ದಳು. ಹೀಗೆ ಹುಟ್ಟಿದ ಸಂಪಾದನೆಯು ಸೆಂಟ್ರಲ್ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಲವು ವಾರಗಳಿಂದ ರೋಗಿಯಾಗಿ ಮಲಗಿದ್ದ ಆಕೆಯ 18 ತಿಂಗಳ ಕೂಸಿನ ಖರ್ಚಿಗೆ ಸರಿಯಾಗುತ್ತಿತ್ತು. ಮಗನಿಗೆ ಸೋಕಿದ್ದ ಖಾಯಿಲೆಯಾದರೂ ಯಾವುದು ಎಂಬುದು ಖುದ್ದು ಐನೂಲಳಿಗೇ ತಿಳಿದಿರಲಿಲ್ಲ. "ಸಾಲದ ಮೊತ್ತ ಹಿಂದಿರುಗಿಸುವವರಿಲ್ಲವಾದ್ದರಿಂದ [ಚಿಕಿತ್ಸೆಯ ಖರ್ಚಿಗಾಗಿ] ನನಗೆ ಎಲ್ಲಿಂದಲೂ ಸಾಲ ಹುಟ್ಟಲಿಲ್ಲ," ಎನ್ನುತ್ತಾ ಕಳೆದುಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಐನೂಲ್.
ಹೀಗೆ ಐನೂಲ್ ಆ ರೈಲಿನಲ್ಲಿ ಕೂತಿದ್ದಾಗ ಅವಳೊಳಗಿದ್ದ ಆತಂಕವು ಸುಳ್ಳಾಗಿರಲಿಲ್ಲ.
ಅಂದು ರೈಲುಮಾರ್ಗವಾಗಿ ಅಷ್ಟು ದೂರದ ಪ್ರಯಾಣಕ್ಕೆಂದು ಹೊರಟಾಗ ಐನೂಲಳ ಕೈಯಲ್ಲಿದ್ದಿದ್ದು ಕೆಲವೇ ಕೆಲವು ಬಟ್ಟೆಗಳಿದ್ದ ಒಂದು ಚೀಲವಷ್ಟೇ. ತವರುಮನೆಯಿಂದ ಗಂಡನ ಮನೆಗೆ ಕೊಂಡೊಯ್ಯಲೆಂದು ಖರೀದಿಸಿದ್ದ ಒಂದೊಂದು ಪಾತ್ರೆ-ಪಗಡಿಯೂ ಮಾರಾಟವಾಗಿತ್ತು. ಯಾರ್ಯಾರದ್ದೋ ಪಾತ್ರೆಗಳನ್ನು ತೊಳೆಯುತ್ತಾ, ಮನೆಗಳನ್ನು ಸ್ವಚ್ಛಗೊಳಿಸುತ್ತಾ, ಹೊಲಗಳಲ್ಲಿ ಕೆಲಸ ಮಾಡುತ್ತಾ... ಹೀಗೆ ಬಾಲ್ಯದಿಂದಲೂ ಶ್ರಮಜೀವನವನ್ನೇ ನಡೆಸುತ್ತಾ ಬಂದವಳು ಐನೂಲ್. "ನನಗೆ ತಿನ್ನಲು ಆಹಾರವನ್ನೋ, ಒಂದಷ್ಟು ಹಣವನ್ನೋ ನೀಡುತ್ತಿದ್ದರು. ಅದನ್ನು ನಾನು ಪುಟ್ಟ ಡಬ್ಬಿಯೊಂದರಲ್ಲಿ ಕೂಡಿಡುತ್ತಿದ್ದೆ. ಹೀಗೆ ಒಂದೊಂದು ಪೈಸೆ ಕೂಡಿಡುತ್ತಾ ನನ್ನ ಮದುವೆಗಾಗಿ 5000 ರೂಪಾಯಿ ಹಣ ಕೂಡಿಸಿದ್ದೆ. ಇದರಿಂದಲೇ ಆಸುಪಾಸಿನ ಅಂಗಡಿಗಳಿಂದ ಕಂಚಿನ ತಟ್ಟೆ, ಹರಿವಾಣ, ಸೌಟು ಮತ್ತು ತಾಮ್ರದ ಬಾಣಲೆಯನ್ನೂ ಖರೀದಿಸಿದ್ದೆ," ಎನ್ನುತ್ತಾರೆ ಐನೂಲ್.







